ಬಳ್ಳಾರಿ: ಹಿರಿಯ ಲೇಖಕ ಮಹಾಂತೇಶ್ ನವಲಕಲ್ ಅವರ "ಬುದ್ಧಗಂಟೆಯ ಸದ್ದು " ಕಥಾ ಸಂಕಲನದ ಸಂವಾದ ಕಾರ್ಯಕ್ರಮ ಇಲ್ಲಿನ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಕನ್ನಡಭವನದಲ್ಲಿ ಮಂಗಳವಾರ ಸಂಜೆ ಜರುಗಿತು.
ಸಂವಾದದಲ್ಲಿ ಪಾಲ್ಗೊಂಡಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಚಿಂತಕ ಡಾ. ವೆಂಕಟಗಿರಿ ದಳವಾಯಿ, ನವಲಕಲ್ ಅವರ ಕೃತಿಯಲ್ಲಿ ಬರುವ ಕಥೆಗಳು ನೈತಿಕ ಗೊಂದಲಗಳು ಹಾಗೂ ಮೌಲ್ಯಗಳ ಸಂಘರ್ಷಗಳ ನಡುವೆ ಸಿಕ್ಕಿಬಿದ್ದ ದಾರುಣ ಸಂಘರ್ಷವನ್ನು ತೆರೆದಿಡುತ್ತವೆ.ಬಹುರಾಷ್ಟ್ರೀಯ ಕಂಪನಿಗಳ ಟರ್ಮಿನೇಟರ್ ಬೀಜಗಳು, ರೈತರ ಬದುಕನ್ನು ನಾಶಮಾಡಲು ಹೊರಟ ಅವುಗಳ ಕ್ರೌರ್ಯ, ಜಾಗತೀಕರಣ ತಂದೊಡ್ಡಿದ ಸಂಕಷ್ಟಗಳು, ಜಾಗತಿಕ ಮಾರುಕಟ್ಟೆಯ ಮೌನ ಕೊಲೆಗಳನ್ನು ಇಲ್ಲಿನ ಕಥೆಗಳು ಹೇಳುತ್ತವೆ. ಕೃತಿಯಲ್ಲಿ 11ಕಥೆಗಳು ಇದ್ದು, ಪ್ರತಿಯೊಂದು ಕಥೆಗಳೂ ಮನುಷ್ಯರ ಅಪ್ರಜ್ಞೆಯ ಕಟು ಸತ್ಯಗಳನ್ನು ತಿಳಿಸುತ್ತವೆ. ಕೃತಿಯ ಮೊದಲ ಕಥೆಯಾದ "ಬುದ್ಧಗಂಟೆಯ ಸದ್ದು " ಬ್ಯಾಂಕಾಕ್‌ನ ಬುದ್ಧ ದೇವಾಲಯದ ಗಂಟೆ ಸದ್ದಿನ ನಿನಾದವು ಆತನಿಗೆ ನೀನು ಇಲ್ಲಿಂದ ತೊಲಗು ಎಂದು ಹೇಳುವಂತೆ ಭಾಸವಾಗುತ್ತದೆ. ಪಟ್ಟಾಂಗ್‌ನ ನೀಲಸಮುದ್ರ ವಿಷದಂತೆ ಭಾಸವಾಗುವುದು, ಬುದ್ಧನ ಮುಂದೆ ಕುಳಿತುಕೊಳ್ಳಲು ಸಹ ಹಕ್ಕಿಲ್ಲ ಎಂದು ಆತ ಅಂದುಕೊಳ್ಳುತ್ತಾನಲ್ಲದೆ, ಬುದ್ಧನ ಬದುಕಿನ ಕಿಂಚತ್ತೂ ಆಶಯಗಳು ನಿಲುಕಲಾರದೆ ಹೋದನಲ್ಲ ಎಂದು ಒದ್ದಾಡುತ್ತಾನೆ. ಕ್ರಿಮಿನಾಶಕ ವ್ಯಾಪಾರಿಗೆ ಕೊನೆಗೂ ತಾನು ಮಾಡಿದ ಪಾಪಗಳು ಎಚ್ಚರಿಸುತ್ತವೆ. ಪ್ರತಿ ಹನ್ನೆರೆಡು ತಾಸಿಗೊಮ್ಮೆ ರೈತ ಸಾಯುತ್ತಾನೆ. ಅವನನ್ನು ಕೊಲ್ಲುವವರು ನಾವೇ. ಅವನಿಗೆ ಸುಳ್ಳು ಕ್ರಿಮಿನಾಶಕ ಕೊಟ್ಟಿದ್ದೇವೆ. ಅವನಿಂದ ಮೂರುಪಟ್ಟು ಹಣ ಪಡೆದಿದ್ದೇವೆ. ಅವನ ಬದುಕು ಧ್ವಂಸ ಮಾಡಿ ಅವನ ಹಣದಿಂದಲೇ ಬ್ಯಾಂಕಾಕ್‌ಗೆ ಬಂದು ಮೋಜು ಮಾಡಿದ್ದೇವೆ ಎಂದು ಕೊನೆಗೂ ಅನಿಸುತ್ತದೆ. ಕೃತಿಯಲ್ಲಿ ಬರುವ ಎಲ್ಲ ಕಥೆಗಳು ಬದುಕಿನ ನೈಜ ಸತ್ಯಗಳನ್ನು ಅರಿವಿಗೆ ತರುತ್ತವೆ ಎಂದು ಲೇಖಕ ವೆಂಕಟಗಿರಿ ದಳವಾಯಿ ತಿಳಿಸಿದರು.
ಹಿರಿಯ ಪತ್ರಕರ್ತ ಹರಿಶಂಕರ್ ಸಂವಾದಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಕನ್ನಡದಲ್ಲಿ ಅತ್ಯುತ್ತಮ ಕಥೆಗಳು ಬರಲಿ. ಕನ್ನಡ ಸಾಹಿತ್ಯ ಲೋಕ ಮತ್ತಷ್ಟು ಸಮೃದ್ಧಗೊಳ್ಳಲಿ ಎಂದು ಹಾರೈಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಯಚೂರಿನ ಲೇಖಕ ಚಿದಾನಂದ ಸಾಲಿ, ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಆರನಕಟ್ಟೆ ರಂಗನಾಥ, ಲೇಖಕ ಮಹಾಂತೇಶ್ ನವಲಕಲ್ ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತನಾಡಿದ ಪಲ್ಲವ ಪ್ರಕಾಶನದ ಡಾ. ಕೆ. ವೆಂಕಟೇಶ್, ನವಲಕಲ್ ಅವರ ಎರಡು ಕೃತಿಗಳನ್ನು ಪಲ್ಲವ ಪ್ರಕಾಶನ ಪ್ರಕಟಿಸಿದೆ. ಪ್ರಕಾಶನದ ಎಲ್ಲ ಕೃತಿಗಳಿಗೆ ಕನ್ನಡದ ಓದುಗರು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸಿ, ಪ್ರಕಾಶನವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಚೆನ್ನಬಸವಣ್ಣನವರ ಲೋಹಿಯಾ ಪ್ರಕಾಶನ ನಮಗೆ ಮಾದರಿಯಾಗಿದೆ ಎಂದು ಹೇಳಿದರು.
ವೈದ್ಯೆ ಡಾ. ಎಚ್. ಪುಷ್ಪಲತಾ ಹಾಗೂ ಕವಯತ್ರಿ ಕವಿತಾ ವಿರೂಪಾಕ್ಷ ಕುರುಗೋಡು ಅವರು ಹೊಸ ಓದುಗೆ ಪ್ರತಿಕ್ರಿಯೆ ನೀಡಿದರು. ಲೇಖಕರಾದ ದಸ್ತಗೀರ್ ಸಾಬ್ ದಿನ್ನಿ ಹಾಗೂ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಕಾರ್ಯಕ್ರಮ ನಿರ್ವಹಿಸಿದರು.