ದಕ ಜಿಲ್ಲಾ ಮೊಗವೀರ ಮಹಾಜನ ಸಂಘದ ವತಿಯಿಂದ ಆಯೋಜಿಸಲಾಗಿರುವ 5ನೇ ವರ್ಷದ ಉಡುಪಿ ಉಚ್ಚಿಲ ದಸರಾ - 2026ಕ್ಕೆ ಭಾನುವಾರ ಅಧಿಕೃತ ಚಾಲನೆ ನೀಡಲಾಯಿತು.

ಉಚ್ಚಿಲ : ದಕ ಜಿಲ್ಲಾ ಮೊಗವೀರ ಮಹಾಜನ ಸಂಘದ ವತಿಯಿಂದ ಆಯೋಜಿಸಲಾಗಿರುವ 5ನೇ ವರ್ಷದ ಉಡುಪಿ ಉಚ್ಚಿಲ ದಸರಾ - 2026ಕ್ಕೆ ಭಾನುವಾರ ಅಧಿಕೃತ ಚಾಲನೆ ನೀಡಲಾಯಿತು. ಉದ್ಘಾಟನೆಗೆ ಮೊದಲು ಭವ್ಯವಾಗಿ ನಿರ್ಮಿಸಲಾಗಿರುವ ಮಂಟಪಗಳಲ್ಲಿ ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಮಹಾಪೂಜೆಯನ್ನು ನಡೆಸಲಾಯಿತು.

ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ಈ ದಸರಾ ಮಹೋತ್ಸವಕ್ಕೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನವಶಕ್ತಿಗಳನ್ನು ಆರಾಧಿಸುವ ದಸರವು ನಮ್ಮೊಳಿಗಿನ ಧೈರ್ಯ, ಸ್ಥೈರ್ಯ, ಜ್ಞಾನಗಳೆಂಬ ಶಕ್ತಿಗಳನ್ನು ಜಾಗೃತಿಗೊಳಿಸುವ ಹಬ್ಬವಾಗಿದೆ. ನಮ್ಮೊಳಗಿನ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ನವರಾತ್ರಿ ಹಬ್ಬ ಪ್ರೇರಣೆ ನೀಡುತ್ತದೆ. ಜೀವನದಲ್ಲಿ ಸಕಾರಾತ್ಮಕತೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವ ಪವಿತ್ರ ಹಬ್ಬವೇ ನವರಾತ್ರಿ. ಈ ಸಂದರ್ಭದಲ್ಲಿ ನಮ್ಮೊಳಗಿನ ಶಕ್ತಿಗಳನ್ನು ಅರಿತು, ಅವುಗಳನ್ನು ಸಮಾಜಕ್ಕಾಗಿ ಸದುಪಯೋಗಪಡಿಸಿಕೊಳ್ಳುವ ಸಂಕಲ್ಪದೊಂದಿಗೆ ಹಬ್ಬವನ್ನು ಆಚರಿಸಿ ದೇವಿಯ ಕೃಪೆಗೆ ಪಾತ್ರರಾಗೋಣ ಎಂದರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಜಗತ್ತೇ ಇತ್ತ ನೋಡುವಂತೆ ಡಾ. ಜಿ. ಶಂಕರ್ ಅವರ ನೇತೃತ್ವದಲ್ಲಿ ಈ ದಸರಾವನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಉಚ್ಚಿಲ ಕರಾವಳಿಯ ಪ್ರಸಿದ್ಧ ಶೃದ್ಧಾ ಕೇಂದ್ರವಾಗಿ ಬೆಳೆಯುತ್ತಿದೆ. ಇಲ್ಲಿ ಒಂಬತ್ತು ದಿನಗಳ ಕಾಲ ದೇವಿ ಆರಾಧನೆ ಮಾಡಿ ಆಕೆಯ ಕೃಪೆಗೆ ಪಾತ್ರರಾಗೋಣ ಎಂದು ಹಾರೈಸಿದರು.

ಕೊರತೆ ನೀಗಿದೆ: ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು, ಮೈಸೂರು, ಮಂಗಳೂರು, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ನಡೆಯುವ ದಸರಾ ವೈಭವ ಉಡುಪಿಯಲ್ಲಿಲ್ಲ ಎಂಬ ಕೊರತೆಯನ್ನು ಡಾ. ಜಿ. ಶಂಕರ್ ನೀಗಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಉಚ್ಚಿಲ ಕ್ಷೇತ್ರವು ಹುಣ್ಣಿಮೆಯ ಚಂದ್ರನಂತೆ ಕಳೆಗಟ್ಟುತ್ತಿದೆ, ಜನರನ್ನು ಆಕರ್ಷಿಸುತ್ತಿದೆ ಎಂದರು.

ಈ ದಸರೆಯ ರೂವಾರಿ ನಾಡೋಜ ಡಾ. ಜಿ. ಶಂಕರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಉಚ್ಚಿಲ ದಸರೆಯನ್ನು ಬಹಳ ಮುತುವರ್ಜಿಯಿಂದ ಅಚ್ಚುಕಟ್ಟಾಗಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರು.

ಈ ಸಂದರ್ಭದಲ್ಲಿ ಮೊಗವೀರ ಸಂಘಟನೆಯ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಎಸ್. ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೆರ ಮಲ್ಪೆ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ಮೊಗವೀರ ಮಹಿಳಾ ಮಹಾಜನ ಸಂಘದ ಅದ್ಯಕ್ಷೆ ಕವಿತಾ ಶರತ್‌ ಮತ್ತು ಇತರ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.