ನವಲಗುಂದ ಜಾನುವಾರು ಸಂತೇಲಿ ನೀರಿನ ಬರ

| Published : Mar 26 2024, 01:04 AM IST

ಸಾರಾಂಶ

ನವಲಗುಂದ ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ವಾರ ಜಾನುವಾರುಗಳ ಸಂತೆ ನಡೆಯುತ್ತದೆ. ಆದರೆ, ಇಲ್ಲಿ ಜಾನುವಾರುಗಳಿಗೆ ಕುಡಿಯಲು ನೀರೇ ಇಲ್ಲ.

ನವಲಗುಂದ:

ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ವಾರ ಜಾನುವಾರುಗಳ ಸಂತೆ ನಡೆಯುತ್ತದೆ. ಆದರೆ, ಇಲ್ಲಿ ಜಾನುವಾರುಗಳಿಗೆ ಕುಡಿಯಲು ನೀರೇ ಇಲ್ಲ.

ಹೌದು, ಹೆಸರಿಗೆ ಮಾತ್ರ ಉಪ ಕೃಷಿ ಉತ್ಪನ್ನ ಮಾರುಕಟ್ಟೆ. ಇಲ್ಲಿ ಪ್ರತಿ ಗುರುವಾರ ದನಕರುಗಳ ಸಂತೆ ಹಾಗೂ ಮಂಗಳವಾರ ಕುರಿ ಸಂತೆ ನಡೆಯುತ್ತದೆ. ಇಲ್ಲಿ ನೀರಿನ ತೊಟ್ಟಿಗಳೂ ಇವೆ, ಆದರೆ ನೀರಿಲ್ಲ, ನೆರಳಿಲ್ಲ.ಇಲ್ಲಿ ಪ್ರತಿ ವಾರವೂ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ. ಒಂದು ಜೋಡಿ ಎತ್ತಿಗೆ ₹ 1ರಿಂದ ₹ 1.50 ಲಕ್ಷ ವರೆಗೆ ಮಾರಾಟವಾದರೆ. ಇನ್ನೂ ಕೆಲವು ₹ 50ರಿಂದ ₹ 80 ಸಾವಿರ ವರೆಗೂ ಮಾರಾಟವಾಗುತ್ತಿವೆ. ಈ ಮಾರುಕಟ್ಟೆಗೆ ನವಲಗುಂದ ಮತ್ತು ಅಣ್ಣಿಗೇರಿ ಹಾಗೂ ಸುತ್ತಮುತ್ತಲಿನ ತಾಲೂಕಿನ ಹಳ್ಳಿಗರು ಬರುತ್ತಾರೆ. ಬೇಸಿಗೆಯಲ್ಲಿ ಜಾನುವಾರುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಅದಕ್ಕಾಗಿ ರೈತರು ತಮ್ಮಲ್ಲಿದ್ದ ವಯಸ್ಸಾದ ಎತ್ತು ಮಾರಾಟ ಮಾಡಿ ಮತ್ತೆ ಹೊಸ ಜೋಡಿ ಖರೀದಿಸುತ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಮೇವಿನ ಕೊರತೆಯಿಂದ ಜಾನುವಾರು ಮಾರಾಟ ಮಾಡುತ್ತಿದ್ದಾರೆ. ಆದರೆ, ಬಂದ ರೈತರಿಗೆ ಮತ್ತು ಜಾನುವಾರುಗಳಿಗೆ ಒಂದು ಹನಿ ನೀರೂ ಈ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ.

ಟ್ಯಾಂಕ್‌ಗಳನ್ನು ನಿರ್ಮಿಸಿ ಎಷ್ಟೋ ವರ್ಷಗಳು ಕಳೆದಿವೆ. ಸ್ವಚ್ಛತೆಯೂ ಮಾಯವಾಗಿದೆ. ತೊಟ್ಟಿಯ ಸುತ್ತಲೂ ಕಸದ ರಾಶಿಯೇ ಬಿದ್ದಿದೆ. ಇಲ್ಲಿ ಸಿಬ್ಬಂದಿಯೂ ಇರುವುದಿಲ್ಲ. ಇಲ್ಲಿಯ ಕಚೇರಿ ಯಾವಾಗಲೂ ಬೀಗ ಹಾಕಿಕೊಂಡೇ ಇರುತ್ತದೆ ಎಂದು ರೈತರು ಆರೋಪಿಸುತ್ತಾರೆ.ಇಸ್ಟ್‌ ಬಿಸಿಲಿದ್ರೂ ಕುಡ್ಯಾಕ ನೀರಲ್ಲ. ನಿಲ್ಲಾಕ ನೆರಳಲಿಲ್ಲ. ದನಕರಾ ಏನ್ ಆಗಬೇಕು. ನಾವೇನ್ ಆಗಬೇಕು. ಇಂಥಾ ಸಮಸ್ಯೆ ಕೇಳೋರ್ ಯಾರ್ ಇಲ್ಲಾ. ಇಲ್ಲಿ ಸಿಬ್ಬಂದಿ ಒಂದು ಜೋಡಿ ಎತ್ತಿಗೆ ₹ 50 ತಗೋಂತಾರ್ ಅವರೂ ಇಲ್ಲಾ ರೀ. ಒಟ್ಟ್ ಮಾರುಕಟ್ಟೆ ಅನ್ನುವುದು ಕೊಂಡವಾಡ ಆಗೈತಿ ರೀ ಎಂದು ತಡಹಾಳದ ರೈತ ಹುಚ್ಚಪ್ಪ ಭಜಂತ್ರಿ ಬೇಸರ ವ್ಯಕ್ತಪಡಿಸಿದರು.

ನಾವು ಇದ್ದ ಎತ್ತುಗಳನ್ನು ಮಾರಿ ಮತ್ತೆ ಸಣ್ಣ ಜೋಡೆತ್ತು ತೆಗೆದುಕೊಂಡು ಸಾಕುತ್ತೇವೆ. ವಾರದಾಗ್ ಎರಡ್‌ ಸಲ ಜಾನುವಾರ ಸಂತಿ ನಡಿತೈತಿ. ಒಂದು ದಿನಾನೂ ನೀರೇ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರೈತರಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡಿಸಿ ಎಂದು ರೈತ ವಿಶ್ವನಾಥ ಕಟ್ಟಿ ಆಗ್ರಹಿಸಿದರು.