ಕನ್ನಡಪ್ರಭ ವಾರ್ತೆ ಪಾವಗಡ
ಶುಕ್ರವಾರ ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಶ್ರೀ ರಾಮ ನವಮಿ ಆಚರಿಸಲಾಯಿತು. ಇಲ್ಲಿನ 60ಕ್ಕೂ ಹೆಚ್ಚು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ರಾಮ, ಮಹಾ ವಿಷ್ಣು ,ಶ್ರೀ ವೇಣುಗೋಪಾಲ ಸ್ವಾಮಿ, ಲಕ್ಷ್ಮೀ ನರಸಿಂಹಸ್ವಾಮಿ, ವೆಂಕಟೇಶ್ವರ ಸ್ವಾಮಿ, ಶ್ರೀ ಶನಿಮಹಾತ್ಮಸ್ವಾಮಿ,ಆಂಜನೇಯಸ್ವಾಮಿ, ಚೌಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಪೂಜೆ ನೆರೆವೇರಿಸಿದರು. ಕೋಟೆ ಆಂಜನೇಯಸ್ವಾಮಿ, ಕಣಿವೆ ಲಕ್ಷ್ಮೀ ನರಸಿಂಹಸ್ವಾಮಿ, ವೇಣುಗೋಪಾಲ ಸ್ವಾಮಿ ದೇವಸ್ಥಾನ ಸೇರಿದಂತೆ ಟೋಲ್ ಗೆಟ್ ಬಳಿಯ ಶ್ರೀ ಅಮ್ಮ ಚೌಡೇಶ್ವರಿ, ರೊಪ್ಪ ಶ್ರೀ ಮಾರಮ್ಮ ದೇವಸ್ಥಾನ, ತಾಲೂಕು ಕಚೇರಿ ಹಾಗೂ ಎಸ್ ಎಸ್ ಕೆ ವೃತ್ತದ ಬಳಿ ಅಪಾರ ಸಂಖ್ಯೆಯ ಭಕ್ತರು, ಶ್ರೀ ರಾಮಸೇನೆ, ಭಜರಂಗದಳದ ಸಂಘಟಕರು ಶ್ರೀ ರಾಮ ನವಮಿಯ ಜೈಕಾರ ಹಾಗೂ ನಾಮಸ್ಮರಣೆ ಘೋಷ ವಾಕ್ಯದೊಂದಿಗೆ, ಹೆಸರು ಬೆಳೆ ಕೊಸಂಬರಿ, ಪಾನಕ ವಿತರಿಸುವ ಮೂಲಕ ಶುಭ ಹಾರೈಸಿದರು.ತಾಲೂಕಿನ ಕೃಷ್ಣಾಪುರದಲ್ಲಿ ಸೀತಾ ರಾಮ ಲಕ್ಷ್ಮಣ ಹಾಗೂ ಆಂಜನೇಯ ವಿಗ್ರಹ ಅಲಂಕಾರಗೊಳಿಸಿ ಪೂಜೆ ಸಲ್ಲಿಸಿದ್ದು, ತಾಲೂಕಿನ ಈಶ್ವರ, ಶ್ರೀ ರಾಮ, ದವಳಗಿರಿ ವೆಂಕಟರಮಣಸ್ವಾಮಿ, ಶ್ರೀ ಗಣಪತಿ, ಪಾವಗಡದ ಶ್ರೀ ಅಯ್ಯಪ್ಪ ಸ್ವಾಮಿ, ಮಾರಮ್ಮ ತಾಯಿ, ನಾಗಲಮಡಿಕೆಯ ಶ್ರೀ ಸುಬ್ರಮಣ್ಯಸ್ವಾಮಿ ಸೇರಿದಂತೆ ವಡ್ರೇವು, ವೈ.ಎನ್.ಹಳ್ಳಿ ಹೊಸಕೋಟೆ ಕನ್ನಿಕಾಪರಮೇಶ್ವರಿ ಅಮ್ಮ ದೇವಸ್ಥಾನ ಹಾಗೂ ಗೊರಸ್ ಮಾವು, ಓಬಳಾಪುರ, ಕೋಡಗುಡ್ಡ ,ಬಯಲು ಹಾಗೂ ದೊಡ್ಡಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಪೂಜಾ ಕಾರ್ಯಗಳು ನೆರವೇರಿಸಲಾಯಿತು. ಪೂಜೆಯ ನಂತರ ಪ್ರಸಾದದ ರೂಪದಲ್ಲಿ ಪಾನಕ ಹೆಸರುಬೆಳೆ ಕೊಸಂಬರಿ ಇತರೆ ದೇವರ ನೈವೇದ್ಯದ ಪದಾರ್ಥಗಳನ್ನು ವಿತರಿಸಲಾಯಿತು. ಇನ್ನೂ ತಾಲೂಕಿನ 60ಕ್ಕೂ ಹೆಚ್ಚು ಗೊಲ್ಲರಹಟ್ಟಿಗಳಲ್ಲಿ ಶ್ರೀ ಕೃಷ್ಣ, ವಿಷ್ಣು ಮತ್ತು ಶ್ರೀ ರಾಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ಅಧ್ಯಕ್ಷ ಅರಕ್ಯಾತನಹಳ್ಳಿಯ ದಿವ್ಯತೇಜಯಾದವ್, ಗೌರವಾಧ್ಯಕ್ಷ ಚಿನ್ನಮ್ಮನಹಳ್ಳಿ ನಾಗಣ್ಣ, ತಾಲೂಕು ಕಾಡುಗೊಲ್ಲ ಯುವ ಸೇನೆಯ ಪದಾಧಿಕಾರಿಗಳು ಭಕ್ತರಿಗೆ ಶ್ರೀ ರಾಮ ನವಮಿಯ ಶುಭಾಶಯ ಕೋರಿ ಉತ್ತಮ ಮಳೆ ಬೆಳೆ ಆಗುವಂತೆಹಾಗೂ ತಾಲೂಕಿನ ಜನತೆಗೆ ಸಮೃದ್ಧಿ ತರಲೆಂದು ದೇವರಲ್ಲಿ ಪ್ರಾರ್ಥಿಸಿದರು.