ಮೈಸೂರು ದಸರಾದಂತೆ ಅದ್ಧೂರಿ ಜಂಬೂಸವಾರಿ

| Published : Oct 04 2024, 01:17 AM IST

ಮೈಸೂರು ದಸರಾದಂತೆ ಅದ್ಧೂರಿ ಜಂಬೂಸವಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನವರಾತ್ರಿ ಆಚರಣೆಗೆ ಮೊದಲ ದಿನ ವಿಜಯಪುರದಲ್ಲೂ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ದಸರಾ ಆಚರಿಸುವ ರೀತಿಯಲ್ಲಿಯೇ ಚಾಮುಂಡೇಶ್ವರಿ ದೇವಿಯ ಉತ್ಸವ ಹಾಗೂ ಜಂಬೂಸವಾರಿ ನಡೆಸುವ ಮೂಲಕ ದಸರಾ ಆಚರಣೆಗೆ ಚಾಲನೆ ನೀಡಲಾಯಿತು. ನಗರದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ದೇವಾಲಯದಿಂದ ಐಶ್ವರ್ಯ ನಗರದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಾಲಯದವರೆಗೆ ಅದ್ಧೂರಿ ಜಂಬೂಸವಾರಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ನವರಾತ್ರಿ ಆಚರಣೆಗೆ ಮೊದಲ ದಿನ ವಿಜಯಪುರದಲ್ಲೂ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ದಸರಾ ಆಚರಿಸುವ ರೀತಿಯಲ್ಲಿಯೇ ಚಾಮುಂಡೇಶ್ವರಿ ದೇವಿಯ ಉತ್ಸವ ಹಾಗೂ ಜಂಬೂಸವಾರಿ ನಡೆಸುವ ಮೂಲಕ ದಸರಾ ಆಚರಣೆಗೆ ಚಾಲನೆ ನೀಡಲಾಯಿತು. ನಗರದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ದೇವಾಲಯದಿಂದ ಐಶ್ವರ್ಯ ನಗರದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಾಲಯದವರೆಗೆ ಅದ್ಧೂರಿ ಜಂಬೂಸವಾರಿ ನಡೆಸಲಾಯಿತು.

2019ರಲ್ಲಿ ನಿರ್ಮಾಣವಾಗಿರುವ ತಾಯಿ ಚಾಮುಂಡೇಶ್ವರಿಯ ಅಂಬಾರಿ ಉತ್ಸವ ಹಾಗೂ ಕುಂಭಮೇಳವನ್ನು ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಬೆಳಗ್ಗೆ 10ಕ್ಕೆ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಜಂಬೂ ಸವಾರಿಗೆ ತಾಲೂಕಿನ ನಾಗಠಾಣದ ಷ.ಬ್ರ.ಶ್ರೀ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿಯವರು ಚಾಲನೆ ನೀಡಿದರು. ಇದೇ ವೇಳೆ ಐಶ್ವರ್ಯ ನಗರ ಹಾಗೂ ಸುತ್ತಮುತ್ತಲಿನ ಹಲವು ಬಡಾವಣೆಗಳ ಹಿರಿಯರು ಹಾಗೂ ಭಕ್ತರ ಸಮ್ಮುಖದಲ್ಲಿ ದೇವಿಗೆ ಪೂಜೆ ಮತ್ತು ಧೂಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಜಂಬೂ ಸವಾರಿಯುದ್ದಕ್ಕೂ ನೂರಾರು ಮಹಿಳೆಯರ ಕುಂಭಮೇಳ, ಒಂಟೆ, ಕುದುರೆ, ಗೊಂಬೆಗಳ ಕುಣಿತ, ಕರಡಿ ಮಜಲು, ನಂದಿ ಕುಣಿತ, ಗೊಂಬೆ ಕುಣಿತ ಸೇರಿದಂತೆ ಕೊಂಬು ಕಹಳೆಗಳೊಂದಿಗೆ ಕಲಾ ಮೇಳಗಳು ಅದ್ಧೂರಿಯಾಗಿ ಜರುಗಿತು. ಒಂಬತ್ತು ದಿನಗಳವರೆಗೆ ನಿತ್ಯ ದಾಂಡಿಯಾ ಹಾಗೂ ವಿವಿಧ ಕಾರ್ಯಕ್ರಮಗಳು ದೇವಾಲಯ ಆವರಣದಲ್ಲಿ ನಡೆಯಲಿವೆ. ಮೈಸೂರಿನಲ್ಲಿ ಜಂಬೂ ಸವಾರಿ ನಡೆಯುವಂತೆ ಶ್ರೀ ಚಾಮುಂಡೇಶ್ವರಿಯ ಭಕ್ತರೆಲ್ಲರೂ ನಗರದಲ್ಲೂ ಸಾಂಪ್ರದಾಯಿಕ ಅದ್ಧೂರಿ ದಸರಾಗೆ ಚಾಲನೆ ನೀಡಿದ್ದಾರೆ. ಆನೆಯ ಅಲಂಕಾರ ಶ್ರೀ ಚಾಮುಂಡೇಶ್ವರಿಯ ದೇವಿಯ ಭವ್ಯ ಮೆರವಣಿಯ ದರ್ಶನಕ್ಕಾಗಿ ದಾರಿಯುದ್ದಕ್ಕೂ ಭಕ್ತರು ನಿಂತು ದೇವಿಯ ದರ್ಶನ ಪಡೆದರು.

ನಡೆದಾಡುವ ದೇವರು, ಶತಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹಾಗೂ ಬ್ರಹ್ಮಶ್ರೀ ನಾರಾಯಣ ಗುರೂಜಿಯವರ ಸ್ಥಬ್ದಚಿತ್ರ ಹಾಗೂ ಆನೆಯ ಅಲಂಕಾರ ಆಕರ್ಷಕವಾಗಿ ಕಂಡುಬಂದಿತು.

ದೇವಸ್ಥಾನ ಕಮಿಟಿ ಅಧ್ಯಕ್ಷ ವಿವೇಕ ಹುಂಡೇಕಾರ, ಕಾರ್ಯದರ್ಶಿ ನಾನಾಗೌಡ ಬಿರಾದಾರ, ಸದಸ್ಯರಾದ ಬಸವರಾಜ ಕೋರಿ, ಬಸವರಾಜ ಇಳಗೇರ, ರಾಜುಗೌಡ ಪಾಟೀಲ, ಭೀಮನಗೌಡ ಬಿರಾದಾರ, ಅಶೋಕ ತಿಮಶೆಟ್ಟಿ, ಸದಾಶಿವ ಚಿಕರೆಡ್ಡಿ, ಮೃತ್ಯುಂಜಯ ಶಿರೂರ ಸೇರಿದಂತೆ ಹಿರಿಯರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಐಶ್ವರ್ಯ ನಗರದ ಹಾಗೂ ಸುತ್ತಲಿನ ಬಡಾವಣೆ ಹಿರಿಯರು, ಮಹಿಳೆಯರು, ಉದ್ಯಮಿಗಳು, ಸಾಹಿತಿಗಳು, ಸ್ಥಳೀಯರು ಚಾಮುಂಡೇಶ್ವರಿ ದೇವಿಯ ಪರಮ ಭಕ್ತರು ಭಾಗವಹಿಸಿದ್ದರು.

ಕುಂಭ ಮೇಳ:

ಬೆಳಗ್ಗೆ 10ಗಂಟೆಗೆ ಸಿದ್ಧೇಶ್ವರ ದೇವಸ್ಥಾನದಿಂದ ಶುರುವಾದ ಕುಂಭಮೇಳದಲ್ಲಿ ನೂರಾರು ಮಹಿಳೆಯರು ಹಳದಿ ಬಣ್ಣದ ಸೀರೆಯುಟ್ಟು, ಕುಂಭಹೊತ್ತು ಪಾದಯಾತ್ರೆಯಲ್ಲಿ ನಾಲ್ಕು ಕಿ.ಮೀ ನಡೆದು ಚಾಮುಂಡೇಶ್ವರಿ ದೇವಿಯ ಸನ್ನಿಧಿಗೆ ತಲುಪಿದರು.

ಡೊಳ್ಳು ಕುಣಿತ:

ಜಂಬೂ ಸವಾರಿಯಲ್ಲಿ ದೊಡ್ಡ ದೊಡ್ಡ ಡೊಳ್ಳುಗಳ ಪುರುಷರ ಹಾಗೂ ಮಹಿಳಾ ತಂಡಗಳು ಕುಣಿತದ ಮೂಲಕ ಗಮನ ಸೆಳೆದರು. ಜೊತೆಗೆ ಒಂಟೆ, ಕುದುರೆ, ಗೊಂಬೆ ಕುಣಿತ, ಕರಡಿ ಮಜಲು, ನಂದಿ ಕುಣಿತ ಸೇರಿದಂತೆ ಕೊಂಬು ಕಹಳೆಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು.