ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಮುನ್ನೂರು ಕಾಪುರ ಮಹಾಲಕ್ಷ್ಮೀ ದೇವಿ ಹಾಗೂ ಶ್ರೀಮಾತಾ ಕಾಳಿಕಾದೇವಿ ನವರಾತ್ರಿ ಉತ್ಸವ ಇದೇ ಅ.3ರಿಂದ 11ರವರೆಗೆ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಉತ್ಸವದಲ್ಲಿ ಹೆಸರಾಂತ ಸಂಗೀತ ನೃತ್ಯಕಲಾ ತಂಡಗಳು ಭಾಗಿಯಾಗುವುದರ ಜೊತೆಗೆ ಜಿಲ್ಲಾ ಮಟ್ಟದ ಪ್ರೌಢಶಾಲಾ ಹಾಗೂ ಕಾಲೇಜುಗಳ ಕಲಾತಂಡಗಳಿಂದ ನೃತ್ಯ ಮತ್ತು ಗಾಯನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಮುನ್ನೂರು ಕಾಪು ಸಮಾಜ ಮುಖಂಡ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನವರಾತ್ರಿ ದಸಾರ ಉತ್ಸವದಲ್ಲಿ ಜಿಲ್ಲಾ ಮಟ್ಟದ ಪ್ರೌಢ ಹಾಗೂ ಕಾಲೇಜುಗಳ ಸ್ಫರ್ಧೆಯಲ್ಲಿ ಜಾನಪದ ನವದುರ್ಗೆ ನೃತ್ಯ, ಭರತ ನಾಟ್ಯ, ಸಮೋಹ ಗೀತೆ ಸ್ಪರ್ಧೆ ಆಯೋಜಿಸಲಾಗಿದ್ದು, ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹30 ಸಾವಿರ ನಗದು, ದ್ವಿತೀಯ ₹20 ಸಾವಿರ, ತೃತೀಯ ₹15 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ ₹25 ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹10 ಸಾವಿರ ನಗದು ಬಹುಮಾನ ನೀಡಲಾಗುವುದು ಅದೇ ರೀತಿ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಸಮೂಹ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹20 ಸಾವಿರ ನಗದು, ದ್ವಿತೀಯ ₹15 ಸಾವಿರ ಹಾಗೂ ತೃತೀಯ ₹10 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ ಎಂದು ವಿವರಿಸಿದರು.
ನೃತ್ಯ ತಂಡದ ಸ್ಪರ್ಧೆಯಲ್ಲಿ 12 ರಿಂದ 15 ವಿದ್ಯಾರ್ಥಿಗಳು, ಸಮೂಹ ಗೀತೆಗಳಲ್ಲಿ ವಾದ್ಯ ಮೇಳ ಸಮೇತ 8 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಪ್ರೌಢ ಶಾಲಾ ಮುಖ್ಯಾಧ್ಯಾಪಕ ಹಾಗೂ ಕಾಲೇಜು ಪ್ರಚಾರ್ಯರ ದೃಢೀಕರಣ ಪತ್ರವನ್ನು ಯಾದಿಗೆ ಲಗತ್ತಿಸಬೇಕು. ಆಸ್ತಕ ಕಲಾತಂಡಗಳು ಪಟ್ಟಿಯನ್ನು ಮುನ್ನೂರುಕಾಪು ಶಿಕ್ಷಣ ಸಂಸ್ಥೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಾ.ಶರಣಪ್ಪ ಗೋನಾಳ ಮೊಬೈಲ್ ನಂಬರ್ 94489-10253 ಮೂಲಕ ಸಂಪರ್ಕಿಸಬಹುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಮಾಜ ಅಧ್ಯಕ್ಷ ಪುಂಡ್ಲ ನರಸರೆಡ್ಡಿ, ಮುಖಂಡರಾದ ಗೋಪಾಲರೆಡ್ಡಿ, ಜಿ.ಬಸವರಾಜರೆಡ್ಡಿ, ನಗರಸಭೆ ಸದಸ್ಯ ಶ್ರೀನಿವಾಸರೆಡ್ಡಿ, ಭಂಗಿ ನರಸರೆಡ್ಡಿ, ಶಂಕರರೆಡ್ಡಿ, ರಾಜೇಂದ್ರರೆಡ್ಡಿ, ಚಂದ್ರಶೇಖರರೆಡ್ಡಿ ಇದ್ದರು.