ಸಾರಾಂಶ
ಸೆ. ೧೪ರಿಂದ ೧೬ರ ವರೆಗೆ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ ೯ರಿಂದ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.
ಶಿರಸಿ: ರಾಜ್ಯ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ೨೦೨೪ರ ನವರಾತ್ರಿ ಉತ್ಸವದ ಅಂಗವಾಗಿ ಅ. ೩ರಿಂದ ೧೦ರ ವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಮತ್ತು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಉಪಾಧ್ಯಕ್ಷ ಸುದೇಶ ಜೋಗಳೇಕರ್ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿ, ಸೆ. ೧೪ರಿಂದ ೧೬ರ ವರೆಗೆ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ ೯ರಿಂದ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರಿಗಾಗಿ ಖೋ ಖೋ ಸ್ಪರ್ಧೆ, ಕಬಡ್ಡಿ ಹಾಗೂ ವಾಲಿಬಾಲ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಅದೇ ರೀತಿ ೧೮ ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆಯಿದೆ.
ನಗರದ ಅರಣ್ಯ ಭವನದಲ್ಲಿ ಬಾಡ್ಮಿಂಟನ್ ಸ್ಪರ್ಧೆ ನಡೆಯಲಿದೆ. ೪೦ರಿಂದ ೬೦ ವರ್ಷ ವಿಭಾಗಧಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ರನ್ನಿಂಗ್ ಸ್ಪರ್ಧೆ, ಗುಂಡು ಎಸೆತ, ನಡಿಗೆ, ಬಾಲ್ ಎಸೆತವನ್ನು ಏರ್ಪಡಿಸಲಾಗಿದೆ. ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಓಟ, ಗುಂಡು ಎಸೆತ, ನಡಿಗೆ ಸ್ಪರ್ಧೆಯಿದೆ. ಎಲ್ಲರೂ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗಿದ್ದು, ಏಕಕಾಲದಲ್ಲಿ ಮೂರು ದಿನಗಳ ಕಾಲ ಕ್ರೀಡಾ ಸ್ಪರ್ಧೆ ನಡೆಯಲಿದೆ ಎಂದರು. ಧಾರ್ಮಿಕ ಕಾರ್ಯಕ್ರಮಗಳು: ಅ. ೩ರಿಂದ ೧೨ರ ವರೆಗೆ ಮಾರಿಕಾಂಬಾ ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ ೬ ಗಂಟೆಯಿಂದ ೮ ಗಂಟೆಯವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ೮ ಗಂಟೆಯಿಂದ ಸಪ್ತಶತಿ ಹಾಗೂ ಪಲ್ಲವ ಪಾರಾಯಣ ನಡೆಯಲಿದೆ. ಸಂಜೆ ೭ರಿಂದ ೯.೩೦ವರೆಗೆ ಕೀರ್ತನೆಗಳು ನಡೆಯಲಿದೆ. ಅ. ೩ರಿಂದ ೫ರ ವರೆಗೆ ಕೀರ್ತನ ಚತುರ ಮಧುಸೂದನ ದಾಸ ಮಂಡ್ಯ, ಅ. ೬ರಿಂದ ೮ರ ವರೆಗೆ ಡಾ. ವಿ. ಮಾಲಿನಿ ಮೈಸೂರು ಹಾಗೂ ಅ. ೯ರಿಂದ ೧೧ರ ವರೆಗೆ ಎಚ್ ಯಜ್ಞೇಶ್ ಹೊಸಬೆಟ್ಟು ಸುರತ್ಕಲ್ ಅವರಿಂದ ಕೀರ್ತನೆಗಳನ್ನು ಆಯೋಜಿಸಲಾಗಿದೆ.ಅ. ೧೨ರಂದು ವಿಜಯದಶಮಿಯಂದು ಪಡಲಿಗೆ ಉತ್ಸವ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಹನುಮಂತ ದೇವರ ಪಲ್ಲಕ್ಕಿ ಮೆರವಣಿಗೆ ಹಾಗೂ ರಾತ್ರಿ ೧೦ ಗಂಟೆಯ ನಂತರ ಕೋಟೆಕೆರೆಯ ಗದ್ದುಗೆಯ ಮೇಲೆ ಮಾರಿಕಾಂಬಾ ದೇವಿಯ ಪಲ್ಲಕ್ಕಿ ಉತ್ಸವ, ಕಲಶ ವಿಸರ್ಜನೆ ಪಡಿಯಾಟ ವಗೈರೆ ನಡೆಯಲಿದೆ. ಅಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಧರ್ಮದರ್ಶಿಗಳಾದ ಸುಧೀರ್ ಹಂದ್ರಾಳ, ವತ್ಸಲಾ ಹೆಗಡೆ, ಬಾಬುದಾರ ಪ್ರಮುಖರಾದ ಜಗದೀಶ ಕುರಬರ್, ರಾಜು ಚಕ್ರಸಾಲಿ, ಮದನ್, ವ್ಯವಸ್ಥಾಪಕ ಚಂದ್ರಕಾಂತ ಮತ್ತಿತರರರು ಇದ್ದರು. ಸ್ವಚ್ಛತೆಗೆ ₹19 ಲಕ್ಷಕಳೆದ ಜಾತ್ರೆಯ ಸಂದರ್ಭದಲ್ಲಿನ ನಗರಸಭೆಯ ಸ್ವಚ್ಛತಾ ಕಾರ್ಯಕ್ಕಾಗಿ ದೇವಸ್ಥಾನದಿಂದ ಕಳೆದ ಜಾತ್ರೆಗೆ ನೀಡಿದ್ದ ₹೧೭ ಲಕ್ಷಕ್ಕೆ ಶೇ. ೧೦ ಸೇರಿಸಿ ಈ ಬಾರಿ ₹೧೯ ಲಕ್ಷ ನೀಡಲಾಗಿದೆ. ನಗರಸಭೆಯಲ್ಲೂ ಬಹುಮತದಿಂದ ಇದೇ ತಿರ್ಮಾನ ಕೈಗೊಂಡಿರುವ ನಡಾವಳಿಯನ್ನು ಜಿಲ್ಲಾಧಿಕಾರಿಗೆ ಕಳಿಸಲಾಗಿದೆ. ಅವರು ಒಪ್ಪಿಗೆ ನೀಡಿದಲ್ಲಿ ಇಲ್ಲಿಗೆ ಸುಖಾಂತ್ಯ ಕಾಣಲಿದೆ. ಒಂದೊಮ್ಮೆ ಹೆಚ್ಚುವರಿ ಹಣ ಕೇಳಿದಲ್ಲಿ ನಂತರ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದು ಧರ್ಮದರ್ಶಿ ಸುಧೀರ್ ಹಂದ್ರಾಳ ತಿಳಿಸಿದರು.