ನವರಾತ್ರಿ ನಮಸ್ಯಾ ಕಾರ್ಯಕ್ರಮ ಎಲ್ಲರ ಹೊಣೆಗಾರಿಕೆ

| Published : Jul 28 2025, 12:30 AM IST

ಸಾರಾಂಶ

ಸೆಪ್ಟೆಂಬರ್‌ನಲ್ಲಿ ರಾಮಚಂದ್ರಾಪುರ ಮಠದ ಶ್ರೀಗಳು ಕೈಗೊಳ್ಳಲಿರುವ ನವರಾತ್ರಿ ನಮಸ್ಯಾ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಪಟ್ಟಣದ ರಾಘವೇಶ್ವರ ಸಭಾಭವನದಲ್ಲಿ ನಡೆಯಿತು.

ಸಾಗರ: ಸೆಪ್ಟೆಂಬರ್‌ನಲ್ಲಿ ರಾಮಚಂದ್ರಾಪುರ ಮಠದ ಶ್ರೀಗಳು ಕೈಗೊಳ್ಳಲಿರುವ ನವರಾತ್ರಿ ನಮಸ್ಯಾ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಪಟ್ಟಣದ ರಾಘವೇಶ್ವರ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ನವರಾತ್ರಿ ನಮಸ್ಯಾ ಸಮಾಜ ಸಂಭ್ರಮ ಕುರಿತ ಸಂದೇಶಾಮೃತ ದೃಶ್ಯ ಅವತರಣಿಕೆಯ ಲೋಕಾರ್ಪಣೆಗೊಳಿಸಿದ ಹವ್ಯಕ ಮಹಾ ಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು ಮಾತನಾಡಿ, ಈಗಿನ ಚಾತುರ್ಮಾಸ್ಯದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಕೃಷ್ಣನ ಸೇವೆಯೊಂದಿಗೆ ವ್ರತ ಕೈಗೊಂಡಿದ್ದಾರೆ. ಹಾಗೆಯೇ ನವರಾತ್ರಿಯ ೧೦ ದಿನವನ್ನೂ ಮಾತೃಪೂಜೆಯ ಪರಿಕಲ್ಪನೆಯೊಂದಿಗೆ ವ್ರತ ನಡೆಯುತ್ತದೆ. ಗುರುಗಳ ವ್ರತಕ್ಕೆ ತಕ್ಕದಾದ ನಮ್ಮ ಸೇವೆ ಏನೆಂಬುದನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ನವರಾತ್ರಿ ನಮಸ್ಯ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ ಎಂದು ಹೇಳಿದರು.ನವರಾತ್ರಿ ನಮಸ್ಯಾ ಕಾರ್ಯಕ್ರಮ ನಮಗೆಲ್ಲ ಒಂದರ್ಥದ ಹೊಣೆಗಾರಿಕೆಯಾಗಿದ್ದು, ಎಲ್ಲರೂ ಈ ಸೇವೆಯಲ್ಲಿ ಪೂರ್ಣ ಭಾಗಿಗಳಾಗುವುದು ಮತ್ತು ಎಲ್ಲರೂ ಸೇರಿ ಇದನ್ನು ಮಾಡಬೇಕಿದೆ. ನವರಾತ್ರಿ ಮಾತೆಯರನ್ನು ಪೂಜಿಸುವ ಹಬ್ಬವಾಗಿದ್ದು, ನವರಾತ್ರಿ ನಮಸ್ಯದಲ್ಲೂ ಮಾತೆಯರ ಕೊಡುಗೆ, ಸಹಕಾರ ಅತಿ ಪ್ರಮುಖವಾಗಿದೆ. ನವರಾತ್ರಿಯಲ್ಲಿ ತಾಯಿಗೆ ಪೂಜೆ ನಡೆಯುವಂತೆ ನಾವೆಲ್ಲರೂ ಮಗುವಾಗಿ, ಮಗನಾಗಿ ಮೊದಲಿಗರಾಗಿ ನಿಂತು ಈ ಪೂಜೆ, ಸೇವಾ ಕೈಂಕರ್ಯದಲ್ಲಿ ಭಾಗಿಯಾಗಬೇಕು. ಇದು ಕೇವಲ ರಾಮಚಂದ್ರಾಪುರಮಠದ ಕಾರ್ಯಕ್ರಮವಲ್ಲ. ಬದಲಾಗಿ ಇಡೀ ಸಮಷ್ಟಿ ಸಮಾಜದ ಸೇವೆಯಾಗಿ ಬರಬೇಕೆನ್ನುವುದು ಸ್ವಾಮೀಜಿ ಆಶಯ. ಇದಕ್ಕಾಗಿ ತಕ್ಷಣದಿಂದ ಎಲ್ಲರೂ ಒಟ್ಟಾಗಿ ಇಡೀ ಸಮಾಜವನ್ನು ಒಂದುಗೂಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಹರನಾಥ್‌ರಾವ್, ಪ್ರತಿಯೊಂದು ಕಾರ್ಯಕ್ಕೂ ಸಂಘಟಿತವಾದ ಪ್ರಯತ್ನವಿದ್ದರೆ ಯಶಸ್ಸು ಸಾಧ್ಯ. ಅಂತೆಯೇ ಸಮಷ್ಠಿ ಭಾವದಿಂದ ಜಗನ್ಮಾತೆಯ ಪೂಜೆಗೆ ಎಲ್ಲರೂ ಒಂದಾಗುವ ಭಾಗ್ಯ ಈ ಸಾಗರಕ್ಕೆ ಬಂದಿದೆ. ಅದರೊಂದಿಗೆ ಪ್ರತಿ ಮನೆಯಲ್ಲಿಯೂ ನವರಾತ್ರಿ ಉತ್ಸವ ನಡೆಸಿದ ಪುಣ್ಯದ ಫಲವೂ ಇದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ವಿಶೇಷವಾಗಿ ಮಾತೆಯರು ಇದರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುವುದು ನಿಶ್ಚಿತ ಎಂದು ಹೇಳಿದರು.ಸಿಗಂದೂರು ದೇವಸ್ಥಾನದ ಪ್ರಧಾನ ಅರ್ಚಕರಾದ ಶೇಷಗಿರಿ ಭಟ್ ದೀಪ ಬೆಳಗಿ ಶುಭ ಹಾರೈಸಿದರು. ಮಾರ್ಗದರ್ಶಕ ಸಮಿತಿಯ ಸಮರ್ಥ ಭಟ್ ಪೂಜಾ ವಿಶೇಷತೆಯ ಕುರಿತು ಮಾಹಿತಿ ನೀಡಿದರು. ಸಾಗರ ಹವ್ಯಕ ಮಂಡಲ ಅಧ್ಯಕ್ಷ ಮುರಳಿ ಗೀಜಗಾರು ಕಾರ್ಯಕ್ರಮದ ಸ್ವರೂಪ ವಿವರಿಸಿದರು. ಹವ್ಯಕ ಮಹಾಮಂಡಲದ ಪ್ರಾಂತ್ಯ ಉಪಾಧ್ಯಕ್ಷ ಶಾಂತರಾಮ ಹಿರೇಮನೆ, ವೈದಿಕ ಪ್ರಧಾನ ವಿನಾಯಕ ಭಟ್ ಬೆಟ್ಕುಳಿ, ರುಕ್ಮಾವತಿ ರಾಮಚಂದ್ರ, ರಮೇಶ್ ಹೆಗಡೆ ಗುಂಡೂಮನೆ, ರಾಮಚಂದ್ರಾಪುರ ಹವ್ಯಕ ಮಂಡಲದ ಅಧ್ಯಕ್ಷ ಪ್ರಕಾಶ್ ಬೇರಾಳ, ಸಿದ್ದಾಪುರದ ಅಧ್ಯಕ್ಷ ಸತೀಶ್ ಆಲ್ಮನೆ, ಡಾ.ರಾಮಚಂದ್ರ ಭಾಗವತ್, ಗುರುಪ್ರಸಾದ ಐಸಿರಿ, ತಿಮ್ಮಪ್ಪ, ನಾರಾಯಣ ಖಂಡಿಕಾ, ಕೆರೆಕೈ ಪ್ರಸನ್ನ ಇದ್ದರು.