ಚಿಕ್ಕಮಗಳೂರುಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಸಬಲೀಕರಣ ಹಾಗೂ ಸ್ಥಳೀಯ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿಯಿಂದ ನವರಾತ್ರಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮಹಿಳಾ ಸ್ವಸಹಾಯ ಸಂಘಗಳ ಆರ್ಥಿಕ ಸಬಲೀಕರಣ ಹಾಗೂ ಸ್ಥಳೀಯ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿಯಿಂದ ನವರಾತ್ರಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.ನವರಾತ್ರಿಯ ಒಂಬತ್ತು ದಿನಗಳಲ್ಲಿ ಜಿಲ್ಲೆಯ ಒಂಬತ್ತು ತಾಲೂಕುಗಳ ಸ್ವಸಹಾಯ ಸಂಘಗಳು ತಯಾರಿಸಿದ ತಲಾ ಒಂದೊಂದು ಉತ್ಪನ್ನ ಪರಿಚಯಿಸಿ, ಲೋಕಾರ್ಪಣೆಗೊಳಿಸುವುದು ಅಭಿಯಾನದ ಉದ್ದೇಶ. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಮೂಲಕ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ.ಸೋಮವಾರದಿಂದ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಎನ್ಆರ್ಎಲ್ಎಂ ಯೋಜನಾ ನಿರ್ದೇಶಕಿ ಸುಜಾತಾ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಪೂರ್ಣಿಮಾ ಅವರು ಕೊಪ್ಪ ತಾಲೂಕಿನ ಶ್ರೀ ವಿದ್ಯಾ ಸ್ತ್ರೀ ಶಕ್ತಿ ಸಂಘದ ವಿಜಯಕುಮಾರಿ ಮತ್ತು ಪ್ರೇಮಲತಾ ತಯಾರಿಸಿದ ಆಪಲ್ ಜಾಮ್ ಹಾಗೂ ಹಲಸಿನ ಬೀಜದ ಕಾಫಿ ಉತ್ಪನ್ನ ಗಳನ್ನು ಬಿಡುಗಡೆಗೊಳಿಸಿದರು.ಮಂಗಳವಾರ ಕಡೂರು ತಾಲೂಕಿನ ಸ್ವಸಹಾಯ ಸಂಘದ ರೆಸಿನ್ ಆರ್ಟ್ ಉತ್ಪನ್ನ ಬಿಡುಗಡೆ ಮಾಡಲಾಯಿತು. ಬುಧವಾರ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಕೊಪ್ಪ ಮತ್ತು ಮೂಡಿಗೆರೆ ತಾಲೂಕಿನ ಸ್ವಸಹಾಯ ಸಂಘಗಳು ತಯಾರಿಸಿದ ಜೇನುತುಪ್ಪ ಹಾಗೂ ಉಡುಗೊರೆ ವಸ್ತುಗಳನ್ನು ಲೋಕಾರ್ಪಣೆಗೊಳಿಸಿದರು.ಗುರುವಾರ ಕೆಆರ್ಐಡಿಎಲ್ ನಿರ್ದೇಶಕಿ ಅಶ್ವಿನಿ ಅವರು ತರೀಕೆರೆ ಶ್ರೀ ಮರಿಯಮ್ಮ ದೇವಿ ಸ್ವಸಹಾಯ ಸಂಘದ ರಂಜಿತಾ ತಯಾರಿಸಿದ ಕಾಂಡಿಮೆಂಟ್ಸ್ ಉತ್ಪನ್ನ ಹಾಗೂ ಅಜ್ಜಂಪುರದ ಶ್ರೀ ಗುರು ಬಸವೇಶ್ವರ ಸ್ವಸಹಾಯ ಸಂಘದ ಶೀಲಾ ತಯಾರಿಸಿದ ಹ್ಯಾಂಡ್ಬ್ಯಾಗ್ಗಳನ್ನು ಬಿಡುಗಡೆಗೊಳಿಸಿದರು.ಮಹಿಳೆಯರು ತಯಾರಿಸುವ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು, ಸ್ವ ಉದ್ಯೋಗಕ್ಕೆ ಉತ್ತೇಜನ ನೀಡು ವುದು ಹಾಗೂ ಸಂಘಗಳ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಅಭಿಯಾನ ಮಹತ್ವ ಪಡೆದಿದೆ.ಫೋಟೋ ಶೀರ್ಷಿಕೆ:ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯಲ್ಲಿ ನವರಾತ್ರಿ ವಿಶೇಷ ಅಭಿಯಾನದ ಅಂಗವಾಗಿ ಗುರುವಾರ ಕೆಆರ್ಐಡಿಎಲ್ ನಿರ್ದೇಶಕಿ ಅಶ್ವಿನಿ ಅವರು ತರೀಕೆರೆ ಮತ್ತು ಅಜ್ಜಂಪುರದ ಸ್ವಸಹಾಯ ಸಂಘಗಳ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯಿತಿ ಅಧಿಕಾರಿಗಳಾದ ಪೂರ್ಣಿಮಾ, ಮೋನಿಕಾ ಮತ್ತಿತರರು ಇದ್ದರು.
