ನಕ್ಸಲ್‌ಪೀಡಿತ ಕಬ್ಬಿನಾಲೆ ಬಸ್‌ ನಿಲ್ದಾಣಕ್ಕೆ ಛಾವಣಿಯೇ ಇಲ್ಲ!

| Published : Nov 24 2024, 01:48 AM IST

ಸಾರಾಂಶ

2023ರಲ್ಲಿ ಭಾರಿ ಮಳೆಗೆ ಬಸ್‌ ನಿಲ್ದಾಣ ಬಳಿಯಿದ್ದ ಗುಡ್ಡ ಕುಸಿದಿದ್ದು, ಇದರಿಂದಾಗಿ ನಿಲ್ದಾಣದ ಮೇಲ್ಛಾವಣಿ ಕೂಡ ಕುಸಿದಿತ್ತು. ಈ ಘಟನೆ ನಡೆದು ಎರಡು ವರ್ಷ ಕಳೆದರೂ ಬಸ್ ನಿಲ್ದಾಣದ ಮೇಲ್ಛಾವಣಿ ನಿರ್ಮಾಣವಾಗಿಲ್ಲ.

ಮೂಲಸೌಕರ್ಯವೇ ಇಲ್ಲದ ಕುಗ್ರಾಮ । ಸ್ಥಳೀಯರ ಬೇಡಿಕೆ ಹೊರತೂ ದೊರುಕುತ್ತಿಲ್ಲ ಮೂಲ ಸೌಕರ್ಯ

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಉತ್ತಮ ರಸ್ತೆ, ಬಸ್ ನಿಲ್ದಾಣಗಳು ಹಾಗೂ ಬೀದಿ ದೀಪಗಳು ಗ್ರಾಮದ ಅಭಿವೃದ್ಧಿಯನ್ನು ತೋರಿಸುತ್ತವೆ. ಆದರೆ ಗ್ರಾಮದ ಮುಖ್ಯ ಬಸ್ ನಿಲ್ದಾಣಕ್ಕೇ ಮೇಲ್ಛಾವಣಿ ಇಲ್ಲದೆ ಹೋದರೆ... ಹೌದು ನಕ್ಸಲ್‌ ಪೀಡಿತ ಪ್ರದೇಶ, ಇತ್ತೀಚೆಗಷ್ಟೇ ಎನ್‌ಕೌಂಟರ್‌ಗೂ ಸಾಕ್ಷಿಯಾದ ಕಬ್ಬಿನಾಲೆ ಗ್ರಾಮದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದ ಮೇಲ್ಛಾವಣಿ ಕುಸಿದು ಎರಡು ವರ್ಷವಾದರೂ ಇನ್ನೂ ರಿಪೇರಿಯಾಗಿಲ್ಲ.

2023ರಲ್ಲಿ ಭಾರಿ ಮಳೆಗೆ ಬಸ್‌ ನಿಲ್ದಾಣ ಬಳಿಯಿದ್ದ ಗುಡ್ಡ ಕುಸಿದಿದ್ದು, ಇದರಿಂದಾಗಿ ನಿಲ್ದಾಣದ ಮೇಲ್ಛಾವಣಿ ಕೂಡ ಕುಸಿದಿತ್ತು. ಈ ಘಟನೆ ನಡೆದು ಎರಡು ವರ್ಷ ಕಳೆದರೂ ಬಸ್ ನಿಲ್ದಾಣದ ಮೇಲ್ಛಾವಣಿ ನಿರ್ಮಾಣವಾಗಿಲ್ಲ.

ಹೊಸ ಬಸ್ ನಿಲ್ದಾಣ ನಿರ್ಮಿಸಿ:

ಕಬ್ಬಿನಾಲೆ ಗ್ರಾಮದ ನೀರಣಿ ಪ್ರದೇಶದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸಬೇಕೆಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಈಗಿರುವ ಮೇಲ್ಛಾವಣಿ ಇಲ್ಲದ ಬಸ್ ನಿಲ್ದಾಣ ಸಮೀಪದಲ್ಲಿ ಬೃಹತ್ ಗುಡ್ಡವಿದೆ. ಆದ್ದರಿಂದ ಗುಡ್ಡ ಕುಸಿತದ ಭೀತಿಯು ಇದೆ. ಹಾಗಾಗಿ ಉತ್ತಮ ಸ್ಥಳ ಗುರುತಿಸಿ ಹೊಸ ಬಸ್ ನಿಲ್ದಾಣ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕಬ್ಬಿನಾಲೆ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 377 ಕುಟುಂಬಗಳಿದ್ದು, 2500 ಜನಸಂಖ್ಯೆ ಇದೆ. ಎರಡು ವಾರ್ಡ್‌ಗಳಿದ್ದು, ಒಟ್ಟು 1291 ಮತದಾರರಿದ್ದಾರೆ. ಸ್ಥಳೀಯವಾಗಿ ಎರಡು ಪ್ರಾಥಮಿಕ ಶಾಲೆಗಳಿದ್ದು, ಒಟ್ಟು 91 ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಈ ಗ್ರಾಮಕ್ಕೆ ಎರಡು ಬಸ್‌ಗಳಿದ್ದು ನಿತ್ಯ ಹೆಬ್ರಿ- ಮುದ್ರಾಡಿ- ಕಬ್ಬಿನಾಲೆ ಮಾರ್ಗವಾಗಿ ಒಟ್ಟು ಏಳು ಟ್ರಿಪ್ ಸಂಚಾರ ನಡೆಯುತ್ತಿದೆ.

ಮಳೆಯಿಂದಲೂ ರಕ್ಷಣೆ ಇಲ್ಲ:

ಪಶ್ಚಿಮ ಘಟ್ಟಗಳ ತಪ್ಪಲಿನ ಭಾಗವಾದ ಕಬ್ಬಿನಾಲೆಯಲ್ಲಿ ಮಕ್ಕಳು ಮಳೆಗೆ ಈ ಬಾರಿಯು ಬಸ್ ನಿಲ್ದಾಣವಿಲ್ಲದೆ ಒದ್ದೆಯಾಗಿ ನಿಲ್ಲಬೆಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆಯಲ್ಲಿ ನೆನೆಯುತ್ತಾ ನಿಲ್ಲಬೇಕಾದ ವಿದ್ಯಾರ್ಥಿಗಳ ಸಂಕಷ್ಟ ಅರಿತು ಸ್ಥಳೀಯರೇ ಸೇರಿಕೊಂಡು ಬಸ್ ನಿಲ್ದಾಣಕ್ಕೆ ಟರ್ಪಾಲು ಹಾಕಲು ನಿರ್ಧರಿಸಿದ್ದರು. ಬಳಿಕ ಪಂಚಾಯಿತಿ ಹೊಸ ಬಸ್ ನಿಲ್ದಾಣ ನಿರ್ಮಿಸುವುದಾಗಿ ಭರವಸೆ ನೀಡಿದ ಬಳಿಕ ನಿರ್ಧಾರ ಹಿಂತೆಗೆದುಕೊಳ್ಳಲಾಯಿತು ಎಂದು ಊರಿನ ಹಿರಿಯರೊಬ್ಬರು ತಿಳಿಸಿದ್ದಾರೆ.

.....................

ಕಬ್ಬಿನಾಲೆ ಹೃದಯಭಾಗದಲ್ಲಿರುವ ನೀರಣಿ ಬಸ್ ನಿಲ್ದಾಣಕ್ಕೆ 2024-2025ನೇ ಕ್ರಿಯಾ ಯೋಜನೆಯಲ್ಲಿ ಹೊಸ ಬಸ್ ನಿಲ್ದಾಣಕ್ಕಾಗಿ 2,50,000 ರು.ಗಳನ್ನು ತೆಗೆದಿಡಲಾಗಿದ್ದು, ಹೊಸ ಜಾಗವನ್ನು ಗುರುತಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ಮುಖ್ಯವಾಗಿದೆ.

-ಅಮೃತ ಕುಲಾಲ್, ಪಿಡಿಒ ಮುದ್ರಾಡಿ ಗ್ರಾಮ ಪಂಚಾಯಿತಿ

----------

ಮುಖ್ಯ ಬಸ್‌ ನಿಲ್ದಾಣವೇ ಅಭಿವೃದ್ಧಿಯಾಗದಿದ್ದರೆ ಗ್ರಾಮದ ಆಬಿವೃದ್ದಿ ಹೇಗೆ ಸಾಧ್ಯ? ಈ ಬಾರಿ ಅನೇಕ ವಿದ್ಯಾರ್ಥಿಗಳು ಶಾಲೆಗೆ ಸಾಗುವಾಗ ಒದ್ದೆಯಾಗಿಯೇ ನಿಂತಿದ್ದ ಪರಿಸ್ಥಿತಿ ಬೇಸರ ಮೂಡಿಸಿತ್ತು. ಇಲ್ಲಿ ಮೂಲಸೌಕರ್ಯಗಲೇ ಸರಿಯಾಗಿಲ್ಲ.

। ಸುದೇಶ್, ಸ್ಥಳೀಯರು