ಸಾರಾಂಶ
ತೀರ್ಥಹಳ್ಳಿ : ಕಳೆದ ತಿಂಗಳು ಶರಣಾಗತರಾಗಿದ್ದ ಆರು ಮಂದಿ ನಕ್ಸಲರಲ್ಲಿ ಮುಂಡಗಾರು ಲತಾ ಮತ್ತು ಬಾಳೆಹೊಳೆ ವನಜಾಕ್ಷಿ ಇವರನ್ನು ಬೆಂಗಳೂರಿನಿಂದ ತೀರ್ಥಹಳ್ಳಿಗೆ ಕರೆ ತಂದ ಪೋಲಿಸರು ಸೋಮವಾರ ಮಧ್ಯಾಹ್ನ ಇಲ್ಲಿನ ಜೆಎಂಎಫ್‍ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ತಾಲೂಕಿನ ಆಗುಂಬೆ ಪೋಲಿಸ್ ಠಾಣಾ ವ್ಯಾಪ್ತಿಯ ಬಿದಿರುಗೋಡಿನಲ್ಲಿ ಕೆಎಸ್‍ಆರ್‌ಟಿಸಿ ಬಸ್ಸಿಗೆ ಬೆಂಕಿ ಹಾಕಿರುವುದು ಮತ್ತು ಆಗುಂಬೆ ಠಾಣೆಯ ಸರಹದ್ದಿನಲ್ಲಿ ಕರಪತ್ರ ಹಂಚಿರುವ ಎರಡು ಪ್ರಕರಣಗಳು ಮತ್ತು ಹೊಸನಗರ ಪೋಲಿಸ್ ಠಾಣೆಯಲ್ಲಿರುವ ಒಂದು ಪ್ರಕರಣಕ್ಕೆ ಸಂಬಂಧ ಈ ಇಬ್ಬರನ್ನು ಕರೆತರಲಾಗಿದೆ.
ಬೆಂಗಳೂರಿನಿಂದ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದ ಪೋಲಿಸರು ಬಿಗಿ ಬಂದೋಬಸ್ತಿನೊಂದಿಗೆ ಸೋಮವಾರ ಮಧ್ಯಾಹ್ನ 3.40ಕ್ಕೆ ನ್ಯಾಯಾಲಯಕ್ಕೆ ಕರೆತರಲಾಗಿತ್ತು. 3.50 ಕ್ಕೆ ಜೆಎಂಎಫ್‍ಸಿ ಹಿರಿಯ ವ್ಯಾವಹಾರಿಕ ನ್ಯಾಯಾಧೀಶರಾದ ಗೀತಾಮಣಿಯವರ ಮುಂದೆ ಹಾಜರು ಪಡಿಸಿದರು.
ಪೋಲಿಸ್ ಕಸ್ಟಡಿಗೆ ನೀಡುವ ಮುನ್ನ ನಕ್ಸಲ್ ಮಹಿಳೆಯರಿಗೆ ಹಿತವಚನವನ್ನು ಹೇಳಿದ ನ್ಯಾಯಾಧೀಶರು, ಮೂರು ದಿನಗಳ ಅವಧಿಯಲ್ಲಿ ನೀವು ಯಾವುದೇ ವಿಚಾರವನ್ನೂ ಮುಚ್ಚಿಡದೇ ಪೋಲಿಸರಿಗೆ ಎಲ್ಲಾ ರೀತಿಯ ಮಾಹಿತಿಗಳನ್ನೂ ನೀಡುವ ಮೂಲಕ ಸಹಕಾರ ನೀಡಬೇಕು. ಕಾನೂನಿನ ರಕ್ಷಣೆಗೆ ಶ್ರಮಿಸುತ್ತಿರುವ ಪೋಲಿಸರ ಜೀವ ಅಮೂಲ್ಯವಾಗಿದೆ ಮತ್ತು ಅವರಿಗೆ ಯಾವುದೇ ರೀತಿಯಲ್ಲೂ ಕಾರಣಕ್ಕೂ ಅಡ್ಡಿಪಡಿಸಕೂಡದು. ಅಂತೆಯೇ ನಿಮ್ಮ ಜೀವನ ಕೂಡ ಅಮೂಲ್ಯವಾಗಿದೆ. ಈಗಾಗಲೇ ಸಾಕಷ್ಟು ಸಂಕಷ್ಟ ಪಟ್ಟಿರುವ ನಿಮಗೆ ಈಗ ಬದುಕಿನ ಬಗ್ಗೆ ಅರಿವಾಗಿದೆ ಎಂದು ಭಾವಿಸುತ್ತೇನೆ ಎಂದರು.
ತೀರ್ಥಹಳ್ಳಿ ಗ್ರಾಮಾಂತರ ವೃತ್ತ ನಿರೀಕ್ಷಕ ಶ್ರೀಧರ್, ಆಗುಂಬೆ ಪಿಎಸ್‍ಐ ರಂಗನಾಥ ಅಂತರಗಟ್ಟಿ, ಪಟ್ಟಣ ಠಾಣೆಯ ಪಿಎಸ್‍ಐ ಸುಷ್ಮಾ ಮತ್ತು ಸಿಬ್ಬಂದಿ ಇದ್ದರು.
ಶಿವಮೊಗ್ಗ ಪೊಲೀಸರು ಕರೆತಂದ ಮುಂಡಗಾರು ಲತಾ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದವರು. ಹಲವು ವರ್ಷಗಳಿಂದ ಇವರು ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದು, ಇವರ ವಿರುದ್ಧ 85 ಪ್ರಕರಣಗಳಿವೆ. ಶಿವಮೊಗ್ಗ ಜಿಲ್ಲೆಯಲ್ಲೇ ಲತಾ ವಿರುದ್ಧ ಆಗುಂಬೆ ಠಾಣೆಯಲ್ಲಿ ಮೂರು (12/9, 51/09 ಹಾಗೂ 03/12) ಕೇಸ್ ದಾಖಲಾಗಿವೆ. ಅದೇ ರೀತಿ ವನಜಾಕ್ಷಿ ವಿರುದ್ಧ ಸಹ ಕೇಸ್ ದಾಖಲಾಗಿದ್ದು, ಅದೇ ಪ್ರಕರಣಗಳಲ್ಲಿ ಸೋಮವಾರ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು.
ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟಿರುವ ಶಿವಮೊಗ್ಗ ಪೊಲೀಸ್ ಟೀಂ, ಬಿಗಿ ಭದ್ರತೆಯಲ್ಲಿ ನಕ್ಸಲರನ್ನು ಕರೆತಂದು ಮಧ್ಯಾಹ್ನದ ವೇಳೆಗೆ ತೀರ್ಥಹಳ್ಳಿ ಕೋರ್ಟ್‌ಗೆ ಹಾಜರು ಪಡಿಸಿದರು. ಮಂಗಳವಾರ ಇನ್ನೊಂದು ಪ್ರಕರಣದಲ್ಲಿ ತೀರ್ಥಹಳ್ಳಿಯ ಕೋರ್ಟ್‌ಗೆ ಹಾಜರುಪಡಿಸಲಿದ್ದು, ಬುಧವಾರ ಹೊಸನಗರದ ಕೋರ್ಟ್‌ಗೂ ಹಾಜರು ಪಡಿಸಲಿದ್ದು, ಬಳಿಕ ನಕ್ಸಲರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.