ಬಳ್ಳಾರಿ ಜಿಲ್ಲೆಯ ಬಿ.ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನವನ್ನು ನಾಯಕ ಸಮುದಾಯದ ಹಿರಿಯರಾದ ಕೆ.ಎನ್.ರಾಜಣ್ಣ ಅವರಿಗೆ ನೀಡುವಂತೆ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಯುವ ಮುಖಂಡ ಪಿ.ಬಿ.ಅಂಜುಕುಮಾರ ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಬಳ್ಳಾರಿ ಜಿಲ್ಲೆಯ ಬಿ.ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನವನ್ನು ನಾಯಕ ಸಮುದಾಯದ ಹಿರಿಯರಾದ ಕೆ.ಎನ್.ರಾಜಣ್ಣ ಅವರಿಗೆ ನೀಡುವಂತೆ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಯುವ ಮುಖಂಡ ಪಿ.ಬಿ.ಅಂಜುಕುಮಾರ ಒತ್ತಾಯಿಸಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟದಲ್ಲಿದ್ದ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಸಚಿವ ಸಂಪುಟದಲ್ಲಿ ನಾಯಕ ಸಮಾಜದ ಸಂಖ್ಯೆ ಕಡಿಮೆಯಾಗಿದೆ. ಸಾಮಾಜಿಕ ನ್ಯಾಯದಡಿ ಕೆ.ಎನ್.ರಾಜಣ್ಣಗೆ ಸ್ಥಾನ ನೀಡಿ, ಸಚಿವ ಸ್ಥಾನವನ್ನು ಸಮುದಾಯಕ್ಕೆ ಉಳಿಸಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಕೆ.ಎನ್.ರಾಜಣ್ಣಗೆ ಕೆಲ ಕಾರಣದಿಂದ ಕೈಬಿಡಲಾಗಿತ್ತು. ಈಗ ರಾಜಣ್ಣಗೆ ಸಚಿವ ಸ್ಥಾನ ನೀಡಿ, ವಾಲ್ಮೀಕಿ ನಾಯಕ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಬೇಕು. ರಾಜ್ಯದಲ್ಲಿ ವಾಲ್ಮೀಕಿ ನಾಯಕ ಸಮಾಜ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಹಲವಾರು ಕ್ಷೇತ್ರದಲ್ಲಿ ನಿರ್ಣಾಯಕ ಸ್ಥಾನದಲ್ಲಿದೆ ಎಂದು ತಿಳಿಸಿದರು.ನಾಯಕ ಸಮಾಜ ಬಾಂಧವರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಮುಂದೆಯೂ ಕಾಂಗ್ರೆಸ್ಸನ್ನು ನಾಯಕ ಸಮಾಜ ಬೆಂಬಲಿಸಲು ಕೆ.ಎನ್.ರಾಜಣ್ಣ ಸೇರಿದಂತೆ ನಮ್ಮ ಸಮುದಾಯವರಿಗೆ ಸ್ಥಾನ ನೀಡಬೇಕು. ಈ ಮೂಲಕ ತೆರವಾದ ಖಾಲಿ ಸ್ಥಾನವನ್ನು ವಾಲ್ಮೀಕಿ ನಾಯಕ ಸಮಾಜದಲ್ಲೇ ಉಳಿಯುವಂತೆ ಮಾಡಬೇಕು. ಸಮಾಜಕ್ಕೆ ಯಾವುದೇ ಕಾರಣಕ್ಕೂ ಅವಕಾಶ ತಪ್ಪದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಬಿ.ನಾಗೇಂದ್ರ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಮಾಡಿದ್ದಾರೆಂಬ ಆರೋಪದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ತನಿಖೆ ನಡೆಯುತ್ತಿರುವುದರಿಂದ ಆ ಪ್ರಕರಣದ ಬಗ್ಗೆ ಯಾವುದೇ ಹೇಳಿಕೆಯನ್ನೂ ನೀಡುವುದಿಲ್ಲ. ತನಿಖೆ ನಂತರ ಸತ್ಯಾಸತ್ಯತೆ ಹೊರಬರಲಿದೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಪ್ರತಿಕ್ರಿಯೆ ನೀಡುವುದೂ ಸರಿಯಲ್ಲ ಎಂದು ತಿಳಿಸಿದರು.ಸಮಾಜದ ಮುಖಂಡರಾದ ಆರ್.ಗೋಪಾಲ ದೇವರಮನೆ, ದಾ.ಹ.ಶಿವಕುಮಾರ, ಎಚ್.ನವೀನಕುಮಾರ, ಎ.ಜಿ.ರಾಘವೇಂದ್ರ, ರಮೇಶ ಗುತ್ತಲ್ ಇತರರು ಇದ್ದರು.
ನಾಯಕ ಸಮಾಜದ ಹಿತಕಾಯಲು ಸರ್ಕಾರಕ್ಕೆ ಮನವಿ: ಈ ಹಿಂದೆ ಕೆ.ಎನ್.ರಾಜಣ್ಣ ರಾಜೀನಾಮೆ ನಂತರ ಬೇರೆಯವರಿಗೆ ಅವಕಾಶವನ್ನೇ ನೀಡದೇ ಮುಖ್ಯಮಂತ್ರಿ ಆ ಖಾತೆಯನ್ನು ತಾವೇ ಉಳಿಸಿಕೊಂಡಿದ್ದರು. ಈಗಲೂ ಅದೇ ರೀತಿಯಲ್ಲಿ ಪುನರಾವರ್ತನೆ ಆಗದಂತೆ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ನೋಡಿಕೊಳ್ಳಬೇಕು. ನಾಯಕ ಸಮಾಜಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯ ಆಗದಂತೆ, ನಾಯಕ ಸಮಾಜದ ಹಿತಕಾಯುವಂತೆ ಮನವಿ ಮಾಡುವುದಾಗಿ ಅಂಜುಕುಮಾರ ಹೇಳಿದರು.