ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿ ಬಂದೋಬಸ್ತ್, ಸ್ವಚ್ಛತೆ ಮತ್ತು ಸೇವೆಯಲ್ಲಿ ಪೊಲೀಸರು, ಗೃಹ ರಕ್ಷಕರ ಪಾಲು ಎಷ್ಟಿದೆಯೋ ಅದಕ್ಕೆ ಸಮನಾದ ಸೇವೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳದ್ದು.ಎನ್‌ಸಿಸಿ ಕೆಡೆಟ್‌ಗಳ ಗತ್ತು ಹೇಗಿತ್ತೆಂದರೆ ಸ್ವಯಂ ಹಿರಿಯ ಪೊಲೀಸ್ ಅಧಿಕಾರಿಗಳೇ ಅವರ ಬಿಗಿ ಬಂದೋಬಸ್ತ್‌ಗೆ ತಲೆದೂಗಿದರು.
ಸಮ್ಮೇಳನಕ್ಕೆ ಅಗಮಿಸುವವರಿಗೆ ವಿಐಪಿ ಪಾಸ್, ಮಾಧ್ಯಮ ಪಾಸ್, ವಿವಿಐಪಿ ಪಾಸ್ ಹೇಗೆ ಬೇರೆ ಬೇರೆ ಪಾಸ್‌ಗಳನ್ನು ಕೊಡಲಾಗಿತ್ತು. ಅದಕ್ಕೆ ತಕ್ಕಂತೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅವರವರಿಗೆ ಮೀಸಲಾದ ವಿಭಾಗಗಳಲ್ಲೇ ಅವರು ಕುಳಿತುಕೊಳ್ಳಲು, ಊಟದ ವ್ಯವಸ್ಥೆ ಇತ್ಯಾದಿಗಳನ್ನು ಮಾಡಿದ್ದರು. ಆಯಾ ಕೌಂಟರ್‌ಗಳಲ್ಲೇ ಅವರು ಹೋಗಿ ತಮಗೆ ಒದಗಿಸಲಾದ ಸೌಲಭ್ಯ ಪಡೆಯಬೇಕಿತ್ತು.ಆದರೆ, ಇದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಎಲ್ಲೆಂದರಲ್ಲಿ ನುಗ್ಗುತ್ತಿದ್ದವರಿಗೆ ಅಡ್ಡ ಬಂಡೆಯಂತೆ ನಿಂತು, ಸರಿಯಾದ ದಾರಿ ತೋರಿಸಿದ್ದು ಎನ್‌ಎಸ್‌ಎಸ್ ವಿದ್ಯಾರ್ಥಿಗಳು. ಮುಖ್ಯಮಂತ್ರಿಗಳು, ಸಚಿವರುಗಳು ಬಂದಾಗ ಮೈಯೆಲ್ಲ ಕಣ್ಣಾಗಿ ಕಾವಲು ನಿಲ್ಲುವ ಪೊಲೀಸರು, ಅವರು ಬಂದು ಹೋಗುತ್ತಿದ್ದಂತೆ ಕೆಲವೊಂದು ಆಯಕಟ್ಟಿನ ಜಾಗಗಳನ್ನು ಹೊರತುಪಡಿಸಿ ಮತ್ತೆಲ್ಲೂ ಕಾಣಸಿಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಮಾತ್ರ ಮೈಯೆಲ್ಲ ಕಣ್ಣಾಗಿಸಿ ನಿಂತು ಬಂದೋಬಸ್ತ್ ನಿರ್ವಹಿಸಿದ ರೀತಿ ಮೆಚ್ಚುಗೆಗೆ ಪಾತ್ರವಾಯಿತು.
ಖುದ್ದು ಪೊಲೀಸರೇ ಮಾಧ್ಯಮ ಕೇಂದ್ರದಲ್ಲಿ ಊಟಕ್ಕೆ ಬರುತ್ತಿದ್ದರೆ, ಅವರನ್ನು ತಡೆಯುತ್ತಿದ್ದ ಎನ್‌ಸಿಸಿ ವಿದ್ಯಾರ್ಥಿಗಳು, ತಮಗೆ ಮೀಸಲಾದ ಜಾಗಕ್ಕೆ ಹೋಗಿ ಎಂದು ಧೈರ್ಯವಾಗಿ ಹೇಳುತ್ತಿದ್ದರು. ಲೇಖಕರಿರಲಿ, ಕವಿಗಳಿರಲಿ, ಬರಹಗಾರರಿರಲಿ, ಅಧ್ಯಾಪಕರು, ರಾಜಕಾರಣಿಗಳೇ ಇರಲಿ ಯಾರಿಗೂ ತಲೆತಗ್ಗದೆ, ಬಗ್ಗದೆ ಧೈರ್ಯವಾಗಿ ತಮಗೆ ವಹಿಸಿದ್ದ ಕರ್ತವ್ಯ ನಿರ್ವಹಿಸಿ ಶಹಬ್ಬಾಸ್ ಎನ್ನಿಸಿಕೊಂಡರು.ಸ್ವಚ್ಛತೆಗೂ ಸೈ; ಎನ್‌ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ರೋವರ್ಸ್, ರೇಂಜರ್ಸ್, ಭಾರತ ಸೇವಾದಳ ಸೇರಿ ಇತರೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಮ್ಮೇಳನದ ಅಂಗಳ ಸ್ವಚ್ಛವಾಗಿರಲು ದಿನವಿಡೀ ಶ್ರಮಿಸಿ ಸಮ್ಮೇಳನದ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ತಮಗೆ ವಹಿಸಿದ ಜಬಾಬ್ದಾರಿಗಳನ್ನು ನಿಭಾಯಿಸಲು ಊಟಕ್ಕೂ ಹೋಗದೆ ಹಸಿವೆಯಲ್ಲಿ ಇದ್ದ ಈ ಪುಟ್ಟ ಸ್ವಯಂ ಸೇವಕರ ಸೇವೆ ಶ್ಲಾಘನೀಯ.
ಭೋಜನ ಶಾಲೆಯಿರಲಿ, ಪ್ರಧಾನ ವೇದಿಕೆಯಿರಲೀ, ವಿವಿಐಪಿ ವಿಭಾಗವಿರಲಿ, ಪುಸ್ತಕ ಮಳಿಗೆಗಳಿರಲಿ ಎಲ್ಲೆಡೆಯೂ ಈ ವಿದ್ಯಾರ್ಥಿ ಸ್ವಯಂ ಸೇವಕರದ್ದೆ ಕಾರುಬಾರು. ದಣಿದವರಿಗೆ ನೀರು ತಂದು ಕೊಡುವುದರಿಂದ ಹಿಡಿದು, ಸಮ್ಮೇಳನಕ್ಕೆ ಬಂದ ಗಳಿಗೆಯ ನೆನಪನ್ನು ಶಾಶ್ವತವಾಗಿಸಿಕೊಳ್ಳಲು ಫೋಟೋ ಹಿಡಿಕೊಳ್ಳುವವರಿಗೂ ನೆರವಾಗಿ ಸಂತಸ, ಸಡಗರದಿಂದ ಸ್ವಲ್ಪವೂ ಆಯಾಸ ಮಾಡಿಕೊಳ್ಳದೆ ದಿನವಿಡೀ ದುಡಿದ ವಿದ್ಯಾರ್ಥಿ ಸ್ವಯಂ ಸೇವಕರ ಸೇವೆಯನ್ನು ಸಮ್ಮೇಳನದ ಆಯೋಜಕರು ಗುರುತಿಸಿ ಗೌರವಿಸುವುದು ಮರೆಯಬಾರದು. 2800 ವಿದ್ಯಾರ್ಥಿ ಸ್ವಯಂಸೇವಕರುಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 2800 ವಿದ್ಯಾರ್ಥಿ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಎನ್‌ಸಿಸಿ 480, ಭಾರತಿ ಕಾಲೇಜು, ಅನಿಕೇತನ, ಮಂಡ್ಯ ವಿವಿ, ಪಿಇಎಸ್ ಕಾಲೇಜು, ವಿಎಫ್‌ಜಿಸಿ ವಿದ್ಯಾರ್ಥಿಗಳು 400, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ರೋವರ್ಸ್, ರೇಂಜರ್ಸ್, ಭಾರತ ಸೇವಾದಳ, ಹಿರಿಯ ನಾಗರಿಕರು ಸೇರಿದಂತೆ 920 ಸ್ವಯಂ ಸೇವಕರು ಸ್ವಯಂ ಸೇವೆಯಲ್ಲಿ ತೊಡಗಿದ್ದರು. ಡಿ.19ರಿಂದ 23ರವರೆಗೂ ದಿನವಿಡೀ ಸಮ್ಮೇಳನದ ಯಶಸ್ಸಿನಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದ್ದಾರೆ ಎಂದು ಎನ್‌ಸಿಸಿ ಅಧಿಕಾರಿ ರಾಜು ಅವರು ಮಾಹಿತಿ ನೀಡಿದರು.