ದೋಸ್ತಿ ಪಕ್ಷಗಳಿಂದ 10ರಂದು ಸೋಮವಾರ ಹೇಮಾವತಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಮಾಡಲಾಗುವುದು ಎಂದು ದೋಸ್ತಿ ಪಕ್ಷಗಳ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತುರುವೇಕೆರೆ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಹಾಗೂ ಹಲವಾರು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ದೋಸ್ತಿ ಪಕ್ಷಗಳಿಂದ 10ರಂದು ಸೋಮವಾರ ಹೇಮಾವತಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಮಾಡಲಾಗುವುದು ಎಂದು ದೋಸ್ತಿ ಪಕ್ಷಗಳ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ನ ಶಾಸಕ ಎಂ.ಟಿ.ಕೃಷ್ಣಪ್ಪ, ಬಿಜೆಪಿಯ ಮಾಜಿ ಶಾಸಕರಾದ ಮಸಾಲಾ ಜಯರಾಮ್ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ್, ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬರಗಾಲ ತಾಂಡವಾಡುತ್ತಿದೆ. ರೈತರ ಆರ್ಥಿಕ ಬೆಳೆಗಳಾದ ತೆಂಗು ಮತ್ತು ಅಡಿಕೆ ಮರಗಳು ನೀರಿಲ್ಲದೇ ಸೊರಗಿವೆ. ಈ ಮಧ್ಯೆ ಜಿಲ್ಲೆಯ ರೈತರಿಗೆ ಆಶಾಕಿರಣವಾಗಿರುವ ಹೇಮಾವತಿ ನೀರನ್ನು ಕೂಡಲೇ ಕಾಲುವೆಗಳ ಮೂಲಕ ಎಲ್ಲಾ ಕೆರೆ ಕಟ್ಟೆಗಳಿಗೆ ಹರಿಸಬೇಕು. ಹೇಮಾವತಿ ಡ್ಯಾಂ ನಲ್ಲಿ ಈಗಾಗಲೇ ಸುಮಾರು 29 ಟಿಎಂಸಿ ನೀರಿದೆ. ಈ ಹಿಂದೆ 19 ಟಿಎಂಸಿ ನೀರಿದ್ದ ವೇಳೆಯೇ ಕಾಲುವೆಗಳ ಮೂಲಕ ನೀರು ಹರಿಸಲಾಗಿತ್ತು. ಈಗ ಸಾಕಷ್ಟು ನೀರಿದ್ದರೂ ಸಹ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಜಿಲ್ಲೆಯ ರೈತರ ಪಾಲಿಗೆ ಮಾರಕವಾಗಿರುವ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಯನ್ನು ಕೂಡಲೇ ತಡೆ ಹಿಡಿಯಬೇಕು. ಯಾವುದೇ ಕಾರಣಕ್ಕೂ ಅದನ್ನು ಮುಂದುವರೆಸಬಾರದು. ಈ ಕುರಿತು ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಮುಖಂಡರು ಆಗ್ರಹಿಸಿದರು. ರೈತರಿಗೆ ಬೆಸ್ಕಾಂ ಸರಿಯಾದ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿದರು. ತಾಲೂಕಿನಲ್ಲಿ ಮಳೆ ಇಲ್ಲದೇ ದನಕರುಗಳಿಗೆ, ಜಾನುವಾರುಗಳಿಗೆ ಹಸಿರು ಮೇವು ಕೂಡ ಇಲ್ಲದಂತಾಗಿದೆ. ಕೂಡಲೇ ಗೋಶಾಲೆಗಳನ್ನು ತೆರೆಯಬೇಕು. ಗೋವುಗಳಿಗೆ ಮೇವು ಒದಗಿಸಬೇಕು ಎಂದು ಮುಖಂಡರು ಆಗ್ರಹಿಸಿದರು. ಈ ಕಾಂಗ್ರೆಸ್ ಸರ್ಕಾರ ರೈತರ ಪಾಲಿಗೆ ಕೆಟ್ಟ ಸರ್ಕಾರವಾಗಿದೆ. ರಾಜ್ಯದಲ್ಲಿ ರೈತರು ಬರಗಾಲದಲ್ಲಿ ಪರದಾಡುತ್ತಿದ್ದಾರೆ. ಹಲವಾರು ಭಾಗ್ಯಗಳನ್ನು ದಯಪಾಲಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದೆ. ರೈತರ ಕಣ್ಣೊರೆಸಲು ಒಂದಿಷ್ಟು ಹಣ ನೀಡುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಇಂತಿಷ್ಟು ಹಣ ಕೊಡುವುದಾಗಿ ಘೋಷಣೆ ಮಾಡಿದರೂ ಆಶ್ಚರ್ಯವಿಲ್ಲ ಎಂದು ಹೇಳಿದರು.

ತಾಲೂಕಿನ ಹಿತದೃಷ್ಠಿಯಿಂದ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗಿ ಹೋರಾಟಕ್ಕೆ ಸಹಕಾರ ನೀಡಬೇಕೆಂದು ಶಾಸಕರಾದ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಮಸಾಲಾ ಜಯರಾಮ್ ಮತ್ತು ಎಂ.ಡಿ.ಲಕ್ಷ್ಮೀನಾರಾಯಣ್ ಮನವಿ ಮಾಡಿಕೊಂಡರು. ತಾಲೂಕಿನ ಹಿರಿಯ ರೈತ ಮುಖಂಡ ಅರಳೀಕೆರೆ ಶಿವಯ್ಯನವರು ತಾಲೂಕಿನ ಪ್ರಮುಖ ಕೆರೆ ಕಟ್ಟೆಗಳ ಸಾಂದ್ರತೆ ಮತ್ತು ಬಳಕೆಯ ಬಗ್ಗೆ ಸಭೆಗೆ ವಿವರ ನೀಡಿದರು.

ಈ ವೇಳೆ ಜೆಡಿಎಸ್ ನ ತಾಲೂಕು ಅಧ್ಯಕ್ಷ ಸಾರಿಗೇಹಳ್ಳಿ ದೊಡ್ಡೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿಯ ಹಲವಾರು ನಾಯಕರು ಉಪಸ್ಥಿತರಿದ್ದರು.