ಸಾರಾಂಶ
‘ನೆಲಮಂಗಲದಲ್ಲಿ ರೈಲ್ವೇ ಬೋಗಿಗಳು ಹಳಿ ತಪ್ಪಿ ಒಂದು ಬೋಗಿ ಮಗುಚಿ ಬಿದ್ದ ವಿಷಯ ತಿಳಿದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯವರು ತಕ್ಷಣ ಆಗಮಿಸಿ ಗಾಯಗೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಿ ಹಲವರನ್ನು ಪ್ರಾಣಾಪಾಯದಿಂದ ಕಾಪಾಡಿದರು!
ಕನ್ನಡಪ್ರಭ ವಾರ್ತೆ ಬೆಂಗಳೂರು
‘ನೆಲಮಂಗಲದಲ್ಲಿ ರೈಲ್ವೇ ಬೋಗಿಗಳು ಹಳಿ ತಪ್ಪಿ ಒಂದು ಬೋಗಿ ಮಗುಚಿ ಬಿದ್ದ ವಿಷಯ ತಿಳಿದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯವರು ತಕ್ಷಣ ಆಗಮಿಸಿ ಗಾಯಗೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಿ ಹಲವರನ್ನು ಪ್ರಾಣಾಪಾಯದಿಂದ ಕಾಪಾಡಿದರು!ಗಾಬರಿಯಾಗಬೇಡಿ, ಇದು ನೈಋತ್ಯ ರೈಲ್ವೇ ಜೊತೆಗೂಡಿ ಎನ್‌ಡಿಆರ್‌ಎಫ್ ಬುಧವಾರ ನಡೆಸಿದ ಅಣಕು ಕಾರ್ಯಾಚರಣೆಯ ಚಿತ್ರಣವಷ್ಟೇ. ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ ಹೇಗಿರಬೇಕು ಎಂಬುದರ ಬಗ್ಗೆ ಎನ್‌ಡಿಆರ್‌ಎಫ್ ಪ್ರಾದೇಶಿಕ ನಿರ್ವಹಣಾ ಕೇಂದ್ರ 10ನೇ ಬೆಟಾಲಿಯನ್ ಮತ್ತು ರಾಜ್ಯ ಸರ್ಕಾರದ ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ ಸಹಯೋದಲ್ಲಿ ಈ ಅಭ್ಯಾಸ ನಡೆಯಿತು. ಇದಕ್ಕಾಗಿ ಕೃತಕ ಸನ್ನಿವೇಶ ಸೃಷ್ಟಿಸಲಾಗಿತ್ತು.
ನೆಲಮಂಗಲ ಯಾರ್ಡ್‌ನಲ್ಲಿ ಎರಡು ಬೋಗಿ ಹಳಿತಪ್ಪಿ ಒಂದು ಬೋಗಿ ಮಗುಚಿಬಿದ್ದಿರುವ ಬಗ್ಗೆ ಸಂಬಂಧಪಟ್ಟ ಎಲ್ಲ ಇಲಾಖೆ ಸಿಬ್ಬಂದಿಗೆ ಸಂದೇಶ ರವಾನಿಸಲಾಯಿತು. ಸ್ವಯಂ ಚಾಲಿತ ಅಪಘಾತ ಪರಿಹಾರ ವೈದ್ಯಕೀಯ ವಾಹನ, ಅಪಘಾತ ಪರಿಹಾರ ರೈಲು (ಎಆರ್‌ಟಿ), ಮತ್ತು ರಕ್ಷಣಾ ತಂಡವನ್ನು ಸ್ಥಳಕ್ಕೆ ಕಳುಹಿಸುವಂತೆ ಸೂಚಿಸಲಾಯಿತು. ಅಪಘಾತದ ಬಗ್ಗೆ ಜಾಗೃತಗೊಳಿಸಲು ಸೈರನ್ ಮಾಡಲಾಯಿತು.ಸಂದೇಶ ಸ್ವೀಕರಿಸಿದ ತಕ್ಷಣ, ರೈಲ್ವೇ ಬ್ರೇಕ್‌ಡೌನ್ ತಂಡ ಮತ್ತು ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ತಲುಪಿ, ತ್ವರಿತವಾಗಿ ವೈದ್ಯಕೀಯ ಸೇವೆಗಾಗಿ ಟೆಂಟ್ ಅಳವಡಿಸಿದರು. ಬೋಗಿಯ ಕಿಟಕಿಯ ಕಂಬಿ ಮತ್ತು ಕೋಚ್ ಮೇಲ್ಭಾಗ ಕತ್ತರಿಸಿ ಗಾಯಗೊಂಡ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಸ್ಥಳಾಂತರಿಸುವ ವಿಧಾನ ಪ್ರದರ್ಶಿಸಿದರು.
ಉಪ ಕಮಾಂಡೆಂಟ್ ಅಖಿಲೇಶ್ ಕುಮಾರ್ ಚೌಬೆ ನೇತೃತ್ವದ 30 ಸಿಬ್ಬಂದಿಯಿದ್ದ ಎನ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ಸೇವೆಗಳು, 108 ಆಂಬ್ಯುಲೆನ್ಸ್, ರೈಲ್ವೇ ಇಲಾಖೆಯ ವೈದ್ಯಕೀಯ, ಕ್ಯಾರೇಜ್ ಮತ್ತು ವ್ಯಾಗನ್, ಸಿಗ್ನಲ್ ಮತ್ತು ಟೆಲಿಕಾಂ, ಎಲೆಕ್ಟ್ರಿಕಲ್, ಸರ್ಕಾರಿ ರೈಲ್ವೆ ಪೊಲೀಸ್ಮತ್ತುರೈಲ್ವೆ ರಕ್ಷಣಾ ಪಡೆ ಸೇರಿ ವಿವಿಧ ಸಿಬ್ಬಂದಿ ಪಾಲ್ಗೊಂಡಿದ್ದರು.