ಸಾರಾಂಶ
ಸುಪ್ರೀಂಕೋರ್ಟ್ ರೈತರ ಸಮಸ್ಯೆ ಬಗೆಹರಿಸುವಂತೆ ಪರಿಹಾರಕ್ಕೆ ಮಧ್ಯವರ್ತಿಗಳ ಸಮಿತಿ ರಚಿಸುವಂತೆ ಸೂಚನೆ ನೀಡಿದೆ
ಕನ್ನಡಪ್ರಭ ವಾರ್ತೆ ಮೈಸೂರು
ದೆಹಲಿ ರೈತ ಹೋರಾಟದ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.ನಗರದ ಗನ್ ಹೌಸ್ ವೃತ್ತದ ಬಳಿಯ ವಿಶ್ವಮಾನವ ಉದ್ಯಾನವನದಲ್ಲಿ ಭಾನುವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 200 ದಿನಗಳಿಂದ ದೆಹಲಿಯ ಶಂಬು ಬಾರ್ಡರ್ ಹಾಗೂ ಕನೋರಿ ಬಾರ್ಡರ್ ಸುತ್ತ ಗಡಿಗಳಲ್ಲಿ ನಿರಂತರ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಹೋರಾಟದ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು, ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು, ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ, ರೈತರ ಸಂಪೂರ್ಣ ಸಾಲಮನ್ನಾ ಸಮಸ್ಯೆ ಬಗೆಹರಿಸಲಿ ಎಂದು ಒತ್ತಾಯಿಸಿದರು.ಸುಪ್ರೀಂಕೋರ್ಟ್ ರೈತರ ಸಮಸ್ಯೆ ಬಗೆಹರಿಸುವಂತೆ ಪರಿಹಾರಕ್ಕೆ ಮಧ್ಯವರ್ತಿಗಳ ಸಮಿತಿ ರಚಿಸುವಂತೆ ಸೂಚನೆ ನೀಡಿದೆ. ಆದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಿನ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸಲು ತೀರ್ಮಾನಿಸಿ ಸೆ.15 ರಂದು ಹರಿಯಾಣದ ಜಿಂದ್ ನಲ್ಲಿ 2 ಲಕ್ಷ ರೈತರ ಮಹಾ ಸಮಾವೇಶ ನಡೆಸಿ, ಸೆ.22 ರಂದು ಕುರುಕ್ಷೇತ್ರದಲ್ಲಿ ಕಿಸಾನ್ ಮಹಾ ಪಂಚಾಯತ್ ನಡೆಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಲಾಗುವುದು ಎಂದರು.ಕೇಂದ್ರ ಸರ್ಕಾರ ಕೃಷಿ ಸಾಲ ವಸೂಲಿಗಾಗಿ ಸರ್ಪ್ರೈಸಿ ಕಾಯ್ದೆ ಜಾರಿಗೆ ತಂದ ಪರಿಣಾಮ ರೈತರ ಜಮೀನುಗಳನ್ನು ಬ್ಯಾಂಕುಗಳು ವಶಪಡಿಸಿಕೊಂಡು ಹರಾಜು ಮಾಡಿ, ರೈತರನ್ನ ಬೀದಿ ಪಾಲು ಮಾಡುತ್ತಿವೆ. ಈ ಕಾಯ್ದೆ ರದ್ದು ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ 3660 ಎಕರೆ ಜಮೀನು ನೀಡಿ, ಸರ್ಕಾರವು ಬಂಡವಾಳಶಾಯಿಗಳ ಶ್ರೀಮಂತರ ಪರ ಎಂಬುದನ್ನು ಸಾಬೀತು ಮಾಡಿದ್ದಾರೆ. ಕೂಡಲೇ ನಿರ್ಧಾರ ವಾಪಸ್ ಪಡೆಯಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಕೈ ಬಿಡಬೇಕು. ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರ ತಪ್ಪಿಸಬೇಕು. ರಾಜ್ಯ ಸರ್ಕಾರ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದು ಮಾಡುವ ಭರವಸೆ ನೀಡಿ ಈಡೇರಿಸಿಲ್ಲ ಕೂಡಲೇ ಕಾರ್ಯಗತ ಮಾಡಬೇಕು ಎಂದು ಅವರು ಆಗ್ರಹಿಸಿದರು.ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರ ಶಂಕರ, ನೀಲಕಂಠಪ್ಪ, ವೆಂಕಟೇಶ್, ಸಿದ್ದೇಶ್, ವಿಜೇಂದ್ರ, ರಾಜೇಶ, ಮಂಜುನಾಥ್, ನಾಗೇಶ, ಪ್ರದೀಪ್, ಮಹದೇವಸ್ವಾಮಿ, ರಾಜು ಮೊದಲಾದವರು ಇದ್ದರು.