ವ್ಯಾಸತೀರ್ಥ ವಿದ್ಯಾಪೀಠದ 4 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

| Published : Mar 10 2025, 01:33 AM IST

ಸಾರಾಂಶ

ಹಲವು ವಿದ್ವಾಂಸರು ಮತ್ತು ತಜ್ಞ ಪಂಡಿತರ ಸಮ್ಮುಖ ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿ ಸ್ವತಃ ವಿದ್ಯಾರ್ಥಿಗಳನ್ನು ಪರೀಕ್ಷಿಸಿದರು. ,

ಕನ್ನಡಪ್ರಭ ವಾರ್ತೆ ಮೈಸೂರು

ವಿಜಯನಗರದ ವೀರ ಸಿಂಹಾಸನವನ್ನು ಆಳಿದ ಮತ್ತು ಸಂಸ್ಥಾನದ 6 ಸಾಮ್ರಾಟರಿಗೆ ರಾಜ ಗುರುವಾಗಿದ್ದ ಶ್ರೀ ವ್ಯಾಸರಾಜರ 486 ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಸೋಸಲೆ ಶ್ರೀ ವ್ಯಾಸರಾಜಮಠವು ಶ್ರೀ ರಾಜೇಂದ್ರತೀರ್ಥ ಸಭಾದೊಂದಿಗೆ ಸಂಯುಕ್ತವಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪರೀಕ್ಷಾ ಸತ್ರದಲ್ಲಿ ಮೈಸೂರಿನ ವಿದ್ಯಾರ್ಥಿಗಳಿಗೆ ಹಲವು ಬಹುಮಾನ ದೊರಕಿದೆ.

ಸೋಸಲೆ ವ್ಯಾಸರಾಜರ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗಾಂಧಿಬಜಾರಿನ ವ್ಯಾಸರಾಜ ಮಠದಲ್ಲಿ ಏರ್ಪಡಿಸಿದ್ದ ಈ ಸತ್ರದಲ್ಲಿ ಮೈಸೂರಿನ ಕೃಷ್ಣಮೂರ್ತಿ ಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಾದ ಗೋಪಾಲ, ಮಹೀಧರ, ಶ್ರೀಹರಿ, ಸರ್ವಜ್ಞ ಅವರು ಉತ್ತಮ ಶ್ರೇಣಿಯೊಂದಿಗೆ ನಗದು ಸಹಿತ ಬಹುಮಾನ, ಪ್ರಮಾಣ ಪತ್ರ ಪಡೆದಿದ್ದಾರೆ.

ಪರೀಕ್ಷಾ ಸತ್ರದಲ್ಲಿ ಬೆಂಗಳೂರಿನ ಉತ್ತರಾದಿ ಮಠದ ಶ್ರೀ ಜಯತೀರ್ಥ ವಿದ್ಯಾಪೀಠ, ಮಂತ್ರಾಲಯ ಕ್ಷೇತ್ರದ ಶ್ರೀ ಗುರು ಸಾರ್ವಭೌಮ ವಿದ್ಯಾಪೀಠ, ಸೋದೆ ಶ್ರೀ ಭಾವಿ ಸಮೀರ ಗುರುಕುಲ ಮೊದಲಾದ ವೇದ ವಿಜ್ಞಾನ ವಿದ್ಯಾಸಂಸ್ಥೆಗಳಿಂದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಲವು ವಿದ್ವಾಂಸರು ಮತ್ತು ತಜ್ಞ ಪಂಡಿತರ ಸಮ್ಮುಖ ಶ್ರೀ ಸುವಿದ್ಯೇಂದ್ರತೀರ್ಥ ಸ್ವಾಮೀಜಿ ಸ್ವತಃ ವಿದ್ಯಾರ್ಥಿಗಳನ್ನು ಪರೀಕ್ಷಿಸಿದರು. ಶಾಸ್ತ್ರಗಳ ಸಂರಕ್ಷಣೆಯ ಉದ್ದೇಶದಿಂದ ಶ್ರೀ ವಿದ್ಯಾಶ್ರೀಶ ತೀರ್ಥರು ಈ ಪರೀಕ್ಷೆಯನ್ನು ಪ್ರತಿ ವರ್ಷವೂ ನಡೆಸಿಕೊಂಡು ಬರುವ ಸಂಕಲ್ಪ ಮಾಡಿದ್ದು, ಇದರಲ್ಲಿ ಶ್ರೀ ವ್ಯಾಸರಾಜ ವಿರಚಿತ ನ್ಯಾಯಾಮೃತ, ತತ್ತ್ವ ಚಂದ್ರಿಕಾ, ಮಂದಾರ ಮಂಜರೀ, ಭೇದೋ ಜ್ಜೀವನ ಗ್ರಂಥಗಳ ಪರೀಕ್ಷೆ ನಡೆಸಲಾಯಿತು.

ಎರಡು ದಿನಗಳ ಪರೀಕ್ಷಾ ಸತ್ರದ ಸಮಾರೋಪದಲ್ಲಿ ಶ್ರೀ ವ್ಯಾಸರಾಜರಿಗೆ ವೈಭವದ ದರ್ಬಾರ್ ಮತ್ತು ರತ್ನಾಭಿಷೇಕ ನೆರವೇರಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ವಿಜಯನಗರದ ಸಾಮ್ರಾಟ ಶ್ರೀ ಕೃಷ್ಣದೇವರಾಯನ ಗುರುವಾಗಿ ಸಂಸ್ಥಾನಕ್ಕೆ ಮಾರ್ಗದರ್ಶನ ನೀಡಿದ್ದ ಶ್ರೀ ವ್ಯಾಸರಾಜರು ಅನೇಕ ಸಮಾಜ ಸುಧಾರಣಾ ಕಾರ್ಯ ಮಾಡಿದ ಮಹನೀಯರು. ಅವರ ಅಪೂರ್ವ ಕೃತಿಗಳು ವಿದ್ವತ್ ಪ್ರಪಂಚದಲ್ಲಿ ಅಗ್ರಮಾನ್ಯವಾಗಿವೆ. ಅವುಗಳ ರಕ್ಷಣೆ ಮತ್ತು ಯುವ ವಿದ್ವಾಂಸರಿಗೆ ಜ್ಞಾನಕಾರಕವಾಗಿರಲಿ ಎಂಬ ಉದ್ದೇಶದಿಂದ ಪ್ರತಿವರ್ಷವೂ ಹತ್ತು ಹಲವು ಸಂಸ್ಕೃತ- ವೇದ ವಿದ್ಯಾಪೀಠಗಳ ವಿದ್ಯಾರ್ಥಿಗಳಿಗೆ ಬಹು ಲಕ್ಷ ವೆಚ್ಚದ ಬಹುಮಾನ ಸಹಿತ ಪರೀಕ್ಷಾ ಸತ್ರ ನಡೆಸಲಾಗುವುದು ಎಂದರು.

ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಕಾರ್ಯದರ್ಶಿ ಡಾ. ಮಧುಸೂದನ ಆಚಾರ್ಯ, ಪ್ರಾಂಶುಪಾಲ ಸುಘೋಶ ಆಚಾರ್ಯ ಇದ್ದರು.