ಸಾರಾಂಶ
ವಿಜಯಪುರ: ರಸ್ತೆ, ಚರಂಡಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಹೋಬಳಿಯ ಬಿಜ್ಜವಾರ ಗ್ರಾಪಂ ವ್ಯಾಪ್ತಿಯ ಗೊಲ್ಲಹಳ್ಳಿ ಗ್ರಾಮದಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿ. ಯೋಜನೆಯಡಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಿ.ಸಿ.ರಸ್ತೆಗಳ ನಿರ್ಮಾಣ ಹಾಗೂ ಚರಂಡಿಗಳ ನಿರ್ಮಾಣ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರುಗೊಲ್ಲಹಳ್ಳಿಯ ಸಿ.ಸಿ.ರಸ್ತೆಗಳ ನಿರ್ಮಾಣ ಹಾಗೂ ಚರಂಡಿಗಳ ನಿರ್ಮಾಣಕ್ಕೆ ₹೧೯ ಲಕ್ಷ, ಹಳಿಯೂರು ₹೧೦ ಲಕ್ಷ, ಕೊಯಿರಾ ₹೩೯ ಲಕ್ಷ, ಗೋಪಸಂದ್ರ ₹೪೧ ಲಕ್ಷ, ಹಂದರಹಳ್ಳಿ ₹೮ ಲಕ್ಷ, ಕಗ್ಗಲಹಳ್ಳಿ ₹೨೧ ಲಕ್ಷ, ಚಂದೇನಹಳ್ಳಿ ₹೨೨ ಲಕ್ಷ, ಹಾರೋಹಳ್ಳಿ ₹೧೬ ಲಕ್ಷ, ಎಸ್.ತೆಲ್ಲೋಹಳ್ಳಿ ₹೧೯ ಲಕ್ಷ, ಪೋಲನಹಳ್ಳಿ ₹೧೨ ಲಕ್ಷ, ಬಿದಲೂರು ₹೩೬ ಲಕ್ಷ, ದಿನ್ನೂರು ₹೧೬ ಲಕ್ಷ, ಯಲಿಯೂರು ₹೩೩ ಲಕ್ಷ ಒಟ್ಟು ₹೨ ಕೋಟಿ ೯೨ ಲಕ್ಷ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಶುದ್ಧಕುಡಿಯುವ ನೀರು, ಸಿ.ಸಿ.ರಸ್ತೆಗಳು, ಹಾಗೂ ಚರಂಡಿ ಕಾಮಗಾರಿಗಳನ್ನು ಮಾಡುವುದಕ್ಕೆ ಅಗತ್ಯ ಕ್ರಮಗಳು ಕೈಗೊಳ್ಳಲಾಗುತ್ತದೆ. ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ಈಗಾಗಲೇ ಚಾಲನೆ ನೀಡಲಾಗಿದೆ. ಸಿ.ಎಸ್.ಆರ್.ಅನುದಾನಗಳಲ್ಲಿ ನವೀಕರಣ ಮತ್ತು ನೂತನ ಕಟ್ಟಡಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಯಾವುದೇ ಹಳ್ಳಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯುಂಟಾಗದಂತೆ ನೋಡಿಕೊಳ್ಳಲಾಗುತ್ತದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಸನ್ನದ್ಧರಾಗಿರಬೇಕಾಗುತ್ತದೆ. ರಸ್ತೆಗಳು, ಚರಂಡಿಗಳು ನಿರ್ಮಾಣ ಮಾಡುವ ಗುತ್ತಿಗೆದಾರರು ಕಾಮಗಾರಿಗಳನ್ನು ಗುಣಮಟ್ಟದದಿಂದ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಸದುಪಯೋಗವಾಗುವಂತೆ ಮಾಡಬೇಕು. ಗುಣಮಟ್ಟದ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದರೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗಾಂಧಿತತ್ವ ಪಾಲಿಸಿ: ಹಳ್ಳಿಗಳು ಉದ್ಧಾರವಾದಾಗ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎನ್ನುವ ಅವರ ಆಶಯದಂತೆ ನಾವು ಸತ್ಯ, ಧರ್ಮ, ನಿಷ್ಟೆಯಿಂದ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಗಾಂಧಿತತ್ವಗಳನ್ನು ರೂಢಿಸಿಕೊಂಡು ಸತ್ಯ, ಅಹಿಂಸಾ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದರು.ಬಯಾಪ ಅಧ್ಯಕ್ಷ ವಿ.ಶಾಂತಕುಮಾರ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು, ೫ ಗ್ಯಾರಂಟಿಗಳೊಂದಿಗೆ ಹಳ್ಳಿಗಳ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಜೆಡಿಎಸ್-ಬಿಜೆಪಿಯವರು ವಿನಾಕಾರಣ, ಟೀಕೆ ಮಾಡುತ್ತಿದ್ದಾರೆ. ಬಯಾಪದಿಂದಲೂ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದೇವೆ. ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಬಿ.ರಾಜಣ್ಣ, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಗೊಡ್ಲುಮುದ್ದೇನಹಳ್ಳಿ ಮುನಿರಾಜು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಪ್ಪ, ಬಸವರಾಜ್, ವೆಂಕಟೇಶಪ್ಪ, ಎಸ್.ಶಿವಾನಂದ, ಗೋಣೂರು ಮಹೇಶ್, ವೆಂಕಟಸ್ವಾಮಿ, ವೆಂಕಟಗಿರಿಕೋಟೆ ಮೂರ್ತಿ, ಬಿಜ್ಜವಾರ ಆನಂದ್, ಗ್ಯಾಸ್ ಶ್ರೀನಿವಾಸ್ ಹಾಜರಿದ್ದರು.