ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗ್ಯಾರಂಟಿ ಯೋಜನೆಗಳ ಸದ್ಬಳಕೆಗೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಎಂ.ಎಲ್.ದಿನೇಶ್ ತಿಳಿಸಿದರು.ಪಟ್ಟಣ ಪುರಸಭಾ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಸದ್ಬಳಕೆ ಸಂಬಂಧ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಾದ್ಯಂತ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ವಿವರಗಳ ಪರಿಶೀಲಿಸಲಾಗಿದೆ. ಈಗಾಗಲೇ ಸಮರ್ಪಕವಾಗಿ ವಿತರಣೆಯಾಗುತ್ತಿದ್ದು, ಸಣ್ಣ ಪುಟ್ಟ ಲೋಪಗಳಿದ್ದಲ್ಲಿ ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
2024ರ ಅಕ್ಟೋಬರ್ ವರೆಗೂ ಸರ್ಕಾರದಿಂದ ಗೃಹಲಕ್ಷ್ಮಿಯೋಜನೆ ಹಣ ಬಿಡುಗಡೆಯಾಗಿದ್ದು, ಇಲ್ಲಿವರೆಗೆ ಶೇ.99.25 ರಷ್ಟು ಗುರಿ ಮಾಡಿದ್ದು, ಎಲ್ಲಾ ನೋಂದಾವಣೆಯಾದ ಫಲಾನುಭವಿಗಳಿಗೆ ಈ ಯೋಜನೆ ಸಮರ್ಪಕವಾಗಿ ತಲುಪಿದೆ ಎಂದರು.ತಾಲೂಕಿನಾಧ್ಯಂತ ಒಟ್ಟು 4,77,561 ಮಂದಿ ಫಲಾನುಭವಿಗಳಲ್ಲಿ 4,60,231 ಮಂದಿಗೆ ಅಂದರೆ ಶೇ.96.37 ರಷ್ಟು ಗುರಿ ತಲುಪಿದೆ. ಇನ್ನು ಉಳಿದ ಮಂದಿಗೆ ತಾಂತ್ರಿಕ ದೋಷಗಳಿಂದ ತಲುಪಿಲ್ಲ, ಇದರ ಬಗ್ಗೆ ಸರಿಯಾದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಸರ್ಕಾರದ ಅನ್ನ ಭಾಗ್ಯ ಯೋಜನೆಯಡಿ ಅಂತ್ಯೋದಯ, ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥರ ಖಾತೆಗೆ 5 ಕೆಜಿ ಅಕ್ಕಿ ಬದಲು 174 ರು. ಗಳಂತೆ ಡಿಬಿಟಿ ಮೂಲಕ ಹಣ ಜಮಾ ಆಗುತ್ತಿದೆ. ತಾಂತ್ರಿಕ ದೋಷಗಳಿಂದಾಗಿ ಕೆಲ ಮಂದಿಯ ಖಾತೆಗಳಿಗೆ ಹಣ ಜಮಾವಣೆ ಯಾಗಿರುವುದು ವಿಳಂಭವಾಗಿದೆ ಎಂದರು.ಸಭೆಯಲ್ಲಿ ತಾಪಂ ಇಒ ವೇಣು, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಯೋಜನಾಧಿಕಾರಿ ಎಂ.ಎಂ ತ್ರಿವೇಣಿ, ಆಹಾರ ಶಿರಸ್ತೇದಾರ್ ರಮಾ, ಜಿಲ್ಲಾ ಸದಸ್ಯರಾದ ಅನ್ಸರ್, ತಾಲೂಕು ಸದಸ್ಯರಾದ ಬೆಳಗೊಳ ರವಿಕುಮಾರ್, ಸಂಜಯ್, ಟಿ.ಕೃಷ್ಣ, ಗಣಂಗೂರು ಕೃಷ್ಣಕುಮಾರ್ ಸೇರಿದಂತೆ ಗ್ಯಾರಂಟಿ ಯೋಜನೆಯ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.