ವೆನ್ಲಾಕ್‌ ಆಸ್ಪತ್ರೆ ಮೇಲ್ದರ್ಜೆಗೆ ಅಗತ್ಯ ಕ್ರಮ: ಬ್ರಿಜೇಶ್‌ ಚೌಟ

| Published : Aug 14 2024, 12:51 AM IST

ವೆನ್ಲಾಕ್‌ ಆಸ್ಪತ್ರೆ ಮೇಲ್ದರ್ಜೆಗೆ ಅಗತ್ಯ ಕ್ರಮ: ಬ್ರಿಜೇಶ್‌ ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ಸುಸಜ್ಜಿತ ಸರ್ಜಿಕಲ್ ಬ್ಲಾಕ್‌ನ ಅಂತಿಮ ಹಂತದ ಕಾಮಗಾರಿಗಳನ್ನು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ನೇತೃತ್ವದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮತ್ತಿತರರು ಮಂಗಳವಾರ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ 64 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡು ಆ.15ರಂದು ಉದ್ಘಾಟನೆಗೆ ಸಿದ್ದಗೊಂಡಿರುವ ಸುಸಜ್ಜಿತ ಸರ್ಜಿಕಲ್ ಬ್ಲಾಕ್‌ನ ಅಂತಿಮ ಹಂತದ ಕಾಮಗಾರಿಗಳನ್ನು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ನೇತೃತ್ವದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮತ್ತಿತರರು ಮಂಗಳವಾರ ಪರಿಶೀಲನೆ ನಡೆಸಿದರು.

ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮಂಜೂರು ಮಾಡಿದ ಸ್ಮಾರ್ಟ್‌ಸಿಟಿ ಯೋಜನೆಯಡಿ ಈ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕೇರಳ, ಉತ್ತರ ಕರ್ನಾಟಕದ ಮಂದಿಯೂ ಈ ಆಸ್ಪತ್ರೆಯ ಉಪಯೋಗ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯ ಮೇಲ್ದರ್ಜೆಗೆ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿರುವ ಕುಂದುಕೊರತೆಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಅಧೀಕ್ಷಕರಿಗೆ ಸೂಚಿಸಲಾಗಿದೆ ಎಂದರು. ಶಾಸಕ ವೇದವ್ಯಾಸ್ ಕಾಮತ್, ಪ್ರಧಾನಿ ನರೇಂದ್ರ ಮೋದಿಜಿಯವರ ಕನಸಿನ ಯೋಚನೆಯಾದ ಸ್ಮಾರ್ಟ್ ಸಿಟಿ ಮೂಲಕ ನಮ್ಮ ಜಿಲ್ಲೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸರ್ಜಿಕಲ್ ಬ್ಲಾಕ್ ನಿರ್ಮಾಣವಾಗಿದ್ದು ಇದಕ್ಕೆ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದ ಸಂದರ್ಭದಲ್ಲೇ ನಾನು ಶಿಲಾನ್ಯಾಸ ನೆರವೇರಿಸಿದ್ದೆ. ನಂತರ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದರೂ ರಾಜ್ಯದಲ್ಲಿ ಸರ್ಕಾರ ಬದಲಾದ ಕಾರಣ ಯಾವುದೇ ಅನುದಾನದ ನೆರವು ಸಿಗದೇ ಅಂತಿಮ ಹಂತದ ಕಾಮಗಾರಿಗಳು ನಿಂತು ಉದ್ಘಾಟನೆಗೆ ತಾಂತ್ರಿಕ ಕಾರಣಗಳ ನೆಪ ಕೇಳಿ ಬರುತ್ತಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕೊನೆಪಕ್ಷ ಸ್ಮಾರ್ಟ್ ಸಿಟಿಯಿಂದ ಹೆಚ್ಚುವರಿ ಅನುದಾನವನ್ನು ಪಡೆದುಕೊಂಡಾದರೂ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಶೀಘ್ರವಾಗಿ ಉದ್ಘಾಟನೆ ನಡೆಸುವಂತೆ ಮನವಿ ಮಾಡಿದ್ದೆ. ಅದರಂತೆ ಸುಮಾರು 7 ಕೋಟಿ ರು. ಅನುದಾನವನ್ನು ಬಳಸಿಕೊಳ್ಳುವಂತೆ ಸಚಿವರು ಸಂಬಂಧಪಟ್ಟವರಿಗೆ ಸೂಚಿಸಿದ್ದು ಇದೀಗ ಉದ್ಘಾಟನೆಯ ದಿನವೂ ಕೂಡಿ ಬಂದಿದೆ. ಅದರಲ್ಲೂ ನನ್ನ ಅವಧಿಯಲ್ಲೇ ಈ ಲೋಕಾರ್ಪಣೆಯಾಗುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದರು.

ಉಪ ಮೇಯರ್ ಸುಮಿತ್ರ, ಪಾಲಿಕೆ ಸದಸ್ಯರುಗಳಾದ ಪೂರ್ಣಿಮಾ, ಲೀಲಾವತಿ, ಶೈಲೇಶ್, ಶಕಿಲಾ ಕಾವ, ಬಿಜೆಪಿ ಪ್ರಮುಖರಾದ ಮಂಜುಳಾ ರಾವ್, ವಸಂತ್ ಪೂಜಾರಿ, ಅಶ್ವಿತ್ ಕೊಟ್ಟಾರಿ, ರಮೇಶ್ ಹೆಗ್ಡೆ, ನಿತಿನ್ ಕುಮಾರ್, ಸಂಜಯ್ ಪ್ರಭು, ದಿವಾಕರ ಪಾಂಡೇಶ್ವರ, ಮೋಹನ್ ಪೂಜಾರಿ, ರವಿಶಂಕರ್ ಮಿಜಾರ್, ಕಿರಣ್ ರೈ, ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್‌ ಪ್ರಭಾ, ಅಧಿಕಾರಿಗಳು, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ಜೆಸಿಂತಾ ಡಿಸೋಜಾ, ಆರ್‌ಎಂಒಗಳಾದ ಡಾ.ಜೂಲಿಯಾನ, ಡಾ.ಸುಧಾಕರ್‌ ಇದ್ದರು.