ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ತೆಂಗಿನ ಮರಗಳಿಗೆ ಬಂದಿರುವ ಕಪ್ಪು ತಲೆ ಹುಳುವಿನ ನಿಯಂತ್ರಣಕ್ಕೆ ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ತಾಲೂಕಿನ ತೈಲೂರು ಗ್ರಾಮದ ತೈಲೂರಮ್ಮ ದೇವಸ್ಥಾನ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಕಪ್ಪು ತಲೆ ಹುಳುವಿನ ನಿಯಂತ್ರಣ ಕುರಿತು ಆಯೋಜಿಸಿದ್ದ ತರಬೇತಿ ಹಾಗೂ ರೈತರಿಗೆ ಉಚಿತ ಬೇವಿನ ಎಣ್ಣೆ ವಿತರಿಸಿ ಮಾತನಾಡಿದರು.
ತಾಲೂಕಿಗೆ ಶೀಘ್ರ ತೋಟಗಾರಿಕೆ ಸಚಿವರನ್ನು ಕರೆಸಿ ಅವರಿಗೆ ತೆಂಗಿನ ಮರಗಳಿಗೆ ಬಂದಿರುವ ಕಪ್ಪು ತಲೆ ಹುಳು ಬಾಧೆಯಿಂದ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅವರ ಗಮನಕ್ಕೆ ತಂದು ರೋಗ ನಿಯಂತ್ರಣ ಮಾಡಲು ಸರ್ಕಾರ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತೆಂಗು ಬೆಳೆಗಾರರು ಆತಂಕ ಪಡದೆ ಮುಂಜಾಗ್ರತೆ ವಹಿಸಬೇಕು ಎಂದರು.ನಾನು ಶಾಸಕನಾದ ನಂತರ ತಾಲೂಕಿನಲ್ಲಿ ಹೊಸದಾಗಿ ಪ್ರಯೋಗಾಲಯ ನಿರ್ಮಾಣ ಮಾಡಿ ಕಪ್ಪು ತಲೆ ಹುಳುವಿನ ನಿಯಂತ್ರಣ ಮಾಡುವ ಪರತಂತ್ರ ಜೀವಿಗಳನ್ನು ಉತ್ಪತ್ತಿ ಮಾಡಲು ಶ್ರಮಿಸಿದ್ದೇನೆ. ಮುಂದೆಯೂ ತೆಂಗು ಬೆಳೆಗಾರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ಇಲಾಖೆ ಅಧಿಕಾರಿಗಳು ಕಪ್ಪು ತಲೆ ಹುಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಅಧಿಕಾರಿಗಳು ನೀಡುವ ಸಲಹೆಗಳನ್ನು ತೆಂಗು ಬೆಳೆಗಾರರು ಅಳವಡಿಸಿಕೊಂಡು ರೋಗ ಹೆಚ್ಚಿನ ಮಟ್ಟದಲ್ಲಿ ಹರಡದಂತೆ ನೋಡಿಕೊಳ್ಳಬೇಕು ಎಂದರು.ಮಳೆ ಬಂದರೆ ಕಪ್ಪು ತಲೆ ಹುಳುವಿನ ನಿಯಂತ್ರಣವಾಗಲಿದೆ. ತೈಲೂರು ಕೆರೆಗೆನೀರು ತುಂಬಿಸಲು ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಮಲ್ಲನಕುಪ್ಪೆಯಿಂದ ಕೂಳಗೆರೆವರೆಗೆ ನೀರಿಗೆ ಸಮಸ್ಯೆಯಾಗದಂತೆ ಅಲ್ಲಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಇದರಿಂದ ಬೇಸಿಗೆ ಕಾಲದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.
ಕೃಷಿ ವಿಜ್ಞಾನಿಗಳಾದ ಡಾ.ಪವಿತ್ರ, ಡಾ.ಹತೀಪ ಅವರು ಕಪ್ಪು ತಲೆ ಹುಳುವಿನ ಬಗ್ಗೆ ರೈತರಿಗೆ ವಿಶೇಷ ಮಾಹಿತಿ ನೀಡಿದರು.ಕಾರ್ಯಾಗಾರದಲ್ಲಿ ಕೆ. ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ತೈಲೂರು, ಬೂದುಗುಪ್ಪೆ, ಮಾದನಾಯಕನಹಳ್ಳಿ, ರುದ್ರಾಕ್ಷಿಪುರ, ನಿಡಘಟ್ಟ ಗ್ರಾಮದ ರೈತರು ಉಚಿತ ಬೇವಿನ ಎಣ್ಣೆ ಪಡೆದುಕೊಂಡರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಗ್ರಾಪಂ ಮಾಜಿ ಅಧ್ಯಕ್ಷ ನಿಡಘಟ್ಟ ಪ್ರಕಾಶ್ ಇದ್ದರು.