ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಆದಿಚುಂಚನಗಿರಿ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿ ಪೂರ್ಣಗೊಳಿಸಲು ಹಾಗೂ ತಾರಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಭರವಸೆ ನೀಡಿದರು.ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠಕ್ಕೆ ಶುಕ್ರವಾರ ಬೆಳಗ್ಗೆ ಭೇಟಿಕೊಟ್ಟು ಕ್ಷೇತ್ರಾಧಿದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾತನಾಡಿದರು.
ಕಳೆದ 2018-19ನೇ ಸಾಲಿನಲ್ಲಿ ಶ್ರೀಕ್ಷೇತ್ರದಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸುಮಾರು 7 ಕೋಟಿ ರು.ಗಳ ಅನುದಾನ ಕೂಡಾ ಮೀಸಲಿಡಲಾಗಿದೆ. ಈ ಕೇಂದ್ರದ ಕಟ್ಟಡವನ್ನು ಇನ್ಫಿನಿಟಿ ಆಕಾರದಲ್ಲಿ ನಿರ್ಮಿಸಲಾಗುತ್ತಿದೆ. ಪ್ರಗತಿಯಲ್ಲಿರುವ ಕಟ್ಟಡ ಕಾಮಗಾರಿ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇದೇ ವೇಳೆ ಶ್ರೀಕ್ಷೇತ್ರದಲ್ಲಿ ತಾರಾಲಯ ನಿರ್ಮಾಣದ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಈ ಬಗ್ಗೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಪ್ರಸ್ತಾವನೆ ಸಲ್ಲಿಕೆ ನಂತರ ಇಲಾಖೆ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ ಸಚಿವರು, ಶ್ರೀಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ ಉಪ ವಿಜ್ಞಾನ ಕೇಂದ್ರದ ಕಾಮಗಾರಿಗಳ ಬಗ್ಗೆ ಸಮಾಲೋಚನೆ ನಡೆಸಿದರು. ಸರ್ಕಾರದಿಂದ ಅಗತ್ಯ ಸಹಕಾರ ದೊರೆಯಲಿದೆ ಎಂದು ಶ್ರೀಗಳಿಗೆ ತಿಳಿಸಿದರು.ಈ ವೇಳೆ ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಅಧಿಕಾರಿಗಳು ಇದ್ದರು.
ಆದಿಚುಂಚನಗಿರಿಗೆ ಸಚಿವ ಎನ್.ಎಸ್.ಬೋಸರಾಜು ಭೇಟಿಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಶುಕ್ರವಾರ ಭೇಟಿಕೊಟ್ಟು ಕ್ಷೇತ್ರಾಧಿದೇವತೆಗಳಿಗೆ ಹಾಗೂ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಮಹಾ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು.ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ ತೆರಳುತ್ತಿದ್ದ ಸಚಿವರು, ಮಾರ್ಗಮಧ್ಯೆ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ಕೊಟ್ಟು ಕ್ಷೇತ್ರದಲ್ಲಿ ನಿರ್ಮಾಣ ಹಂತದಲ್ಲಿರುವ ವಿಜ್ಞಾನ ಕೇಂದ್ರವನ್ನು ವೀಕ್ಷಣೆ ಮಾಡಿದರು.
ಕ್ಷೇತ್ರಪಾಲಕ ಶ್ರೀ ಕಾಲಭೈರವೇಶ್ವರಸ್ವಾಮಿ ದೇಗುಲದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಸಚಿವರಿಗೆ ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಅವರು ತೀರ್ಥ ಪ್ರಸಾದ ನೀಡಿದರು.ಕ್ಷೇತ್ರಾಧಿದೇವತೆಗಳ ದರ್ಶನಾಶೀರ್ವಾದ ಪಡೆದುಕೊಂಡ ನಂತರ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಮಹಾ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವರಿಗೆ ಶ್ರೀಮಠದ ಸಂಪ್ರದಾಯದಂತೆ ಶಾಲು ಹೊದಿಸಿ ಏಲಕ್ಕಿ ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು ಪ್ರಸನ್ನನಾಥಸ್ವಾಮೀಜಿ ಅವರು ಆಶೀರ್ವದಿಸಿದರು.