ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನಲ್ಲಿ ರೋಟರಿ ಸಂಸ್ಥೆಯು ಕಳೆದ 25 ವರ್ಷಗಳಿಂದ ಸಮಾಜಮುಖಿ ಸೇವೆಗಳನ್ನು ಮಾಡುತ್ತ ಬಂದಿದೆ. ಈ ಸಂಸ್ಥೆಯ ಕಾರ್ಯಗಳು ಇನ್ನಷ್ಟು ಸೇವೆಗಳು ತಾಲೂಕಿನ ಜನತೆಗೆ ಸಿಗುವ ನಿಟ್ಟಿನಲ್ಲಿ ಮತ್ತು ರೋಟರಿ ಸಂಸ್ಥೆಯ ಪ್ರತಿಯೊಂದು ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೋಟರಿ ಭವನ ಸ್ಥಾಪನೆಗೆ ಪುರಸಭೆ ವ್ಯಾಪ್ತಿಯಲ್ಲಿ ಸ್ಥಳವನ್ನು ಗುರುತಿಸಿ ಸರ್ಕಾರದಿಂದ ಮತ್ತು ನನ್ನ ವೈಯಕ್ತಿಕವಾಗಿ ಹಣಕಾಸಿನ ಸಹಾಯ ಒದಗಿಸುವ ಮೂಲಕ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.ಪಟ್ಟಣದ ಜಾಧವಜೀ ಶಿಕ್ಷಣ ಸಂಸ್ಥೆಯ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿ ಸಂಸ್ಥೆಯ ರಜತ ಮಹೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಕಳೆದ 119 ವರ್ಷಗಳಿಂದ ದೇಶದಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಜನ ಸೇವೆಗೆ ಹೆಸರು ಗಳಿಸಿದ ಸಂಸ್ಥೆಯಾಗಿದೆ. ಗಜಾನನ ಮಂಗಸೂಳಿ ಮುಂದಾಳತ್ವದಲ್ಲಿ ಅಥಣಿಯಲ್ಲಿ ಸುಮಾರು 25 ವರ್ಷಗಳಿಂದ ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಸಲ್ಲಿಸುತ್ತ ಬಂದಿರುವ ಸಂಸ್ಥೆಯ ಎಲ್ಲ ಸದಸ್ಯರನ್ನು ಅಭಿನಂದಿಸಿ, ರೋಟರಿ ಸಂಸ್ಥೆಯು ಹಲವಾರು ವರ್ಷಗಳಿಂದ ಬಡವರ ಪರ, ಜನ ಕಲ್ಯಾಣಕ್ಕಾಗಿ ಸೇವಾ ಕಾರ್ಯಗಳನ್ನು ಮಾಡುತ್ತ ಬರುತ್ತಿದೆ. ಯಾವುದೇ ರೀತಿಯ ಅನಾಹುತ ಘಟನೆಗಳು, ಪ್ರವಾಹ ಬಂದ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ. ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡಿ, ಕಳೆದ 25 ವರ್ಷಗಳಿಂದ ರೋಟರಿ ಸಂಸ್ಥೆಯು ಜನಪರ, ಬಡವರಿಗೆ ನೆರವು ನೀಡುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತ ಬಂದಿದೆ. ಸಂಸ್ಥೆಯ ಅಭಿವೃದ್ಧಿಗೆ, ರೋಟರಿ ಸಂಸ್ಥೆಯ ಜನಸೇವಾ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಗಚ್ಚಿನಮಠದ ಶಿವಬಸವ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ವೇಳೆ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಅಥಣಿ ರೋಟರಿ ಸಂಸ್ಥೆಯ ಅಧ್ಯಕ್ಷ ಅನಿಲ ದೇಶಪಾಂಡೆ, ಪುರಸಭೆ ಸದಸ್ಯ ರಾವಸಾಬ ಐಹೊಳೆ, ಉದ್ಯಮಿಗಳಾದ ರಫೀಕ ಡಾಂಗೆ, ರಾಹುಲ ಗಜಾನನ ಮಂಗಸೂಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ನಂತರ ಕಾಮಿಡಿ ಕಿಲಾಡಿ ಕ್ಯಾತಿಯ ಕಲಾವಿದರಿಂದ ಹಾಸತ್ಯೋತ್ಸವ ಕಾರ್ಯಕ್ರಮ ಸಭಿಕರನ್ನ ರಂಜಿಸಿತು. ರೋಟರಿ ಸಂಸ್ಥೆಯ ಅಧ್ಯಕ್ಷ ಅನಿಲ ದೇಶಪಾಂಡೆ ಸ್ವಾಗತಿಸಿದರು. ಶ್ರೀಕಾಂತ ಅಥಣಿ ಮತ್ತು ಸಂತೋಷ ಬಡಕಂಬಿ ನಿರೂಪಿಸಿದರು. ಅರುಣ ಸೌಧಗಾರ ವಂದಿಸಿದರು.