ಶಿಕ್ಷಕರ ತರಬೇತಿ ಕೇಂದ್ರ ಸ್ಥಾಪನೆಗೆ ಅಗತ್ಯ ಸಹಕಾರ

| Published : Nov 05 2024, 01:40 AM IST / Updated: Nov 05 2024, 01:41 AM IST

ಶಿಕ್ಷಕರ ತರಬೇತಿ ಕೇಂದ್ರ ಸ್ಥಾಪನೆಗೆ ಅಗತ್ಯ ಸಹಕಾರ
Share this Article
  • FB
  • TW
  • Linkdin
  • Email

ಸಾರಾಂಶ

Necessary cooperation for setting up teacher training center

-ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ಆರಂಭಗೊಂಡ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಸಚಿವ ಡಿ. ಸುಧಾಕರ್ ಭರವಸೆ

----

ಕನ್ನಡಪ್ರಭವಾರ್ತೆ ಹೊಸದುರ್ಗ

ಸಾಣೇಹಳ್ಳಿಯಲ್ಲಿ ಶಿಕ್ಷಕರ ತರಬೇತಿ ಶಾಲೆ ತೆರೆಯಬೇಕೆಂಬ ಶ್ರೀಗಳ ಅಪೇಕ್ಷೆಯಿದ್ದು ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ ಸುಧಾಕರ್ ಹೇಳಿದರು.

ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ಆರಂಭಗೊಂಡ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಶಿವಸಂಚಾರ ನಾಟಕಗಳನ್ನು ಉದ್ಗಾಟಿಸಿ ಮಾತನಾಡಿದರು.

ಕಲೆಗೆ, ಸಂಸ್ಕೃತಿಗೆ, ಕಲಾಭಿಮಾನಿಗಳಿಗೆ ಬಹಳಷ್ಟು ಅವಕಾಶಗಳನ್ನು ಸಾಣೇಹಳ್ಳಿ ಶ್ರೀಗಳು ಕಲ್ಪಿಸಿದ್ದಾರೆ. ಜೊತೆಗೆ ಸಾಮಾಜಿಕ ಸೇವಾ ಕೈಂಕರ್ಯಗಳ ಮೂಲಕ, ನಾಟಕಗಳ ಮೂಲಕ ಸಮಾಜದ ಜಾಗೃತಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ. ಎಂ.ಎನ್.ಅಜಯ್ ನಾಗಭೂಷಣ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಶಾಲೆಗಳಲ್ಲಿ ಕೇವಲ ಅಕ್ಷರ ಜ್ಞಾನವನ್ನು ನೀಡಲಾಗುತ್ತದೆ. ಆದರೆ, ಮನಸ್ಸಿನ ವಿಕಾಸವಾಗುವಂತಹ ಕಲೆ ಸಾಹಿತ್ಯದ ಶಿಕ್ಷಣವನ್ನು ನೀಡಬೇಕಿದೆ. ನಮ್ಮ ಶಿಕ್ಷಣ ಬ್ರಿಟೀಷರ ಕಾಲದ್ದು, ಇದನ್ನೆ ನಾವು ಇನ್ನೂ ಮುಂದುವರೆಸಿಕೊಂಡು ಬರುತ್ತಿದ್ದೇವೆ. ಅದು ಬದಲಾಗಬೇಕಿದೆ ಎಂದರು.

ಕಲೆ ಎಂಬುದು ಅತಿ ಅವಶ್ಯಕ. ನಮ್ಮ ಭಾವನೆ, ಆಲೋಚನೆಗಳನ್ನು ಇನ್ನೊಬ್ಬರಿಗೆ ಇಷ್ಟವಾಗುವಂತೆ ಹೇಳುವುದೇ ಕಲೆ. ಇಂತಹ ಭಾವನಾತ್ಮಕವಾಗ ವೇದಿಕೆಯನ್ನು ಇಲ್ಲಿನ ಶ್ರೀಗಳು ಮಕ್ಕಳಿಗೆ, ಜನರಿಗೆ ಕಲ್ಪಿಸುತ್ತಿದ್ದು, ಇಂತಹ ವೇದಿಕೆಗಳು ಇಂದಿನ ವ್ಯವಸ್ಥೆಗೆ ಅಗತ್ಯವಾಗಿ ಬೇಕಾಗಿದೆ ಎಂದರು.

ಕೇಂದ್ರ ಸಾಹಿತ್ಯ ಆಕಾಡೆಮಿ ಸದಸ್ಯ , ಚಿಂತಕ ಬಸವರಾಜ ಸಾದರ ನಾಟಕೋತ್ಸವ ಉದ್ಗಾಟಿಸಿ ತರಳಬಾಳು ಪೀಠ ಧರ್ಮ ದೇವರು ಭಕ್ತಿಗೆ ಸೀಮಿತವಾಗಿಲ್ಲ ಬದುಕಿನ ವಿವಿಧ ರಂಗಗಳ ಮೂಲಕ ಜನರಿಗೆ ಹೊಸತನವನ್ನು ಕಟ್ಟಿಕೊಡುತ್ತದೆ. ನಾಟಕ ಒಂದು ಅದ್ಬುತ ಕಲೆಯಾಗಿದ್ದು, ಬದುಕಿನ ತತ್ವದ ದರ್ಶನ ಮಾಡಿಸುತ್ತದೆ. ನಮ್ಮ ಅಭಿರುಚಿಯನ್ನು ತಣಿಸುತ್ತದೆ ಎಂದರು.

ಈ ಬಾರಿಯ ನಾಟಕಗಳು ಕೇವಲ ಶರಣರ, ವಚನಗಳಿಗೆ ಸೀಮಿತವಾಗಿಲ್ಲ. ಬದುಕಿನ ವಿವಿಧ ಮಗ್ಗಲುಗಳನ್ನು ತೋರಿಸುವ ನಾಟಕಗಳು ಪ್ರದರ್ಶನವಾಗುತ್ತಿವೆ. ನಾವು ನೋಡುವ ನಾಟಕಗಳು ಮನಸ್ಸು, ಭಾವನೆಗಳನ್ನು ಸಂಸ್ಕರಿಸುವಂತಾಗಬೇಕು. ಸಿನಿಮಾಗಳು ಬದುಕನ್ನು ದೊಡ್ಡದಾಗಿ ತೋರಿಸಿದರೆ ಟಿವಿಗಳು ಸಣ್ಣದಾಗಿ ತೋರಿಸುತ್ತವೆ. ಆದರೆ, ನಾಟಕಗಳು ನೈಜತೆಯನ್ನು ತೋರಿಸುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ, ಬಸವ ಬೆಳವಿ ಚರಂತೇಶ್ವರ ಮಠದ ಶರಣಬಸವ ಸ್ವಾಮಿಜಿ ಸಾನಿಧ್ಯವಹಿಸಿದ್ದರು. ಶಿವ ಸಂಚಾರದ - 24ರ ಕೈಪಿಡಿ ಕೃತಿಯನ್ನು ನಿವೃತ್ತ ಪೋಲೀಸ್ ಆಯುಕ್ತ ಸಿದ್ದರಾಮಪ್ಪ, ಗಗನದಿಂದ ಮೇಲೆ ಕೃತಿಯನ್ನು ಮಾಜಿ ಶಾಸಕ ಬೆಳ್ಳಿ ಪ್ರಕಾಶ್‌ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಬಿಪಿ ಹರೀಶ್‌, ಮಾಡಾಳು ಮಲ್ಲಿಕಾರ್ಜುನ, ಡಾ. ಪವಿತ್ರಾ ರಾಣಿ , ಪಿಚ್ಚಳ್ಳಿ ಶ್ರೀನಿವಾಸ್‌ ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಗುರುಪಾದೇಶ್ವರ ಪ್ರೌಡಶಾಲೆ ಹಾಗೂ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕನ್ನಡ ರಾಜ್ಯೋತ್ಸವ ಕುರಿತ ನೃತ್ಯ ರೂಪಕ ನಡೆಸಿಕೊಟ್ಟರು. ಕಾರ್ಯಕ್ರಮದ ನಂತರ ಡಾ. ಬಿ.ಆರ್‌. ಪೋಲೀಸ್‌ ಪಾಟೀಲ್‌ ರಚನೆಯ ವಿಶ್ವೇಶ್ವರಿ ಹಿರೇಮಠ ನಿರ್ದೆಶನದ ತುಲಾಭಾರ ನಾಟಕವನ್ನು ಶಿವಸಂಚಾರದ ಕಲಾವಿದರು ಅಭಿನಯಿಸಿದರು.

----

ಪೋಟೋ, 4ಎಚ್‌ಎಸ್‌ಡಿ2 : ನಾಟಕೋತ್ಸವದಲ್ಲಿ ಶಿವಸಂಚಾರದ ಪೋಸ್ಟರ್‌ಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಪೋಟೋ, 4ಎಚ್‌ಎಸ್‌ಡಿ3 : ಶಿವಸಂಚಾರ ನಾಟಕಗಳನ್ನು ಸಚಿವ ಸಚಿವ ಡಿ ಸುಧಾಕರ್ ಉದ್ಗಾಟಿಸಿದರು.