ದತ್ತಮಾಲಾ ಅಭಿಯಾನಕ್ಕೆ ಚಾಲನೆ

| Published : Nov 05 2024, 01:40 AM IST

ಸಾರಾಂಶ

ಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀರಾಮ ಸೇನೆ ನ.4 ರಿಂದ 10ರವರೆಗೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನಕ್ಕೆ ಸೋಮವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀರಾಮ ಸೇನೆ ನ.4 ರಿಂದ 10ರವರೆಗೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನಕ್ಕೆ ಸೋಮವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.

ನಗರದ ಶಂಕರಮಠದಲ್ಲಿ ದತ್ತ ಭಕ್ತರು ದತ್ತಮಾಲೆ ಧಾರಣೆ ಮಾಡುವ ಮೂಲಕ‌ ಅಭಿಯಾನಕ್ಕೆ‌ ಚಾಲನೆ ನೀಡಿದರು.

ಸೋಮವಾರ ಬೆಳಗ್ಗೆ ಶ್ರೀದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ವಲಯಾಧ್ಯಕ್ಷ ರಂಜಿತ್ ಶೆಟ್ಟಿ ಸೇರಿದಂತೆ 50ಕ್ಕೂ ಹೆಚ್ಚು ಭಕ್ತರು ದತ್ತ ಮಾಲಾಧಾರಣೆ ಮಾಡಿದರು.

ದತ್ತಮಾಲಾಧಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ದತ್ತಪೀಠ ಸಂಪೂರ್ಣವಾಗಿ ಹಿಂದೂಗಳಿಗೇ ಸೇರಿದ್ದು. ಆದರೆ, ಕೆಲವರು ಅತಿಕ್ರಮಣ ಮಾಡಿದ್ದಾರೆ. ದತ್ತಪೀಠ ಹಿಂದೂಗಳಿಗೆ ಮಾತ್ರವೇ ಸೇರಬೇಕು ಎಂಬ ಉದ್ದೇಶದಿಂದ ಕಳೆದ 21 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಹಂತಹಂತವಾಗಿ ನಮಗೆ ಜಯಸಿಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ದತ್ತಪೀಠ ಹಿಂದೂಗಳ ಪೀಠವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭಿಯಾನದ ಮೊದಲ ದಿನ ದತ್ತ ಭಕ್ತರು ಮಾಲೆ‌ ಧಾರಣೆ ಮಾಡಿದ್ದಾರೆ. ಹೀಗೆ ಮಾಲೆ ಧಾರಣೆ ಮಾಡಿರುವ ಭಕ್ತರು ನ.7ರಂದು ದತ್ತ ದೀಪೋತ್ಸವ ನಡೆಸಲಿದ್ದಾರೆ. ನ.8ರಂದು ಪಡಿ ಸಂಗ್ರಹ ನಡೆಸಲಿದ್ದಾರೆ. ಅಭಿಯಾನದ ಕೊನೆಯ ದಿನ ಚಿಕ್ಕಮಗಳೂರಿನ‌ ಶಂಕರಮಠದ ಮುಂಭಾಗದಲ್ಲಿ ಧರ್ಮ ಸಭೆ ನಡೆಯಲಿದೆ. ಬಳಿಕ ಚಿಕ್ಕಮಗಳೂರಿನಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯ ದತ್ತ ಭಕ್ತರು ಭಾಗಿಯಾಗಲಿದ್ದಾರೆ. ಅಂದು ದತ್ತಪೀಠದಲ್ಲಿ ಹೋಮ ಹವನಗಳು ಸ್ವಾಮೀಜಿಗಳು ಹಾಗೂ ಸಾಧು ಸಂತರ ನೇತೃತ್ವದಲ್ಲಿ‌ ನಡೆಯಲಿವೆ ಎಂದು ವಿವರಿಸಿದರು.

ದತ್ತಪೀಠದ ವಿಷಯದಲ್ಲಿ ಕಾನೂನು ಹೋರಾಟದಲ್ಲಿ ಹಿಂದುಗಳಿಗೆ ಮುನ್ನಡೆಯಾದರೆ, ಮುಸ್ಲಿಂ ಸಮುದಾಯದವರಿಗೆ ಹಿನ್ನಡೆಯುಂಟಾಗಿದೆ. ಹೀಗಿರುವಾಗ ಸರ್ಕಾರ ಮಧ್ಯ ಪ್ರವೇಶಿಸಿ ವಿವಾದ ಬಗೆಹರಿಸಲು ಮುಂದಾಗಬೇಕಿತ್ತು. ಆದರೆ ಸರ್ಕಾರ ದತ್ತಪೀಠದ ವಿವಾದದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದತ್ತಪೀಠ ವಿವಾದವನ್ನು ಶಾಂತ ರೀತಿಯಿಂದ ಪರಿಹರಿಸಬೇಕು ಎಂಬ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ. ಹಿಂದು ಮುಸ್ಲಿಂ ಎಂದು ಒಡಕು ಮೂಡಿಸಿ ರಾಜ್ಯವನ್ನು ಸರ್ಕಾರವೇ ಹಾಳು ಮಾಡುತ್ತಿದೆ ಎಂಬ ಅನುಮಾನ ಆರಂಭಗೊಂಡಿದೆ. ಅದರಲ್ಲೂ ರಾಜ್ಯದಲ್ಲಿ ಇಂದು ಅಧಿಕಾರದಲ್ಲಿರುವ ಸರ್ಕಾರ ವಿಪರೀತ ಎನ್ನುವಂತೆ ವರ್ತಿಸುತ್ತಿದೆ ಎಂದು ದೂರಿದರು.

ಕಳೆದ ವರ್ಷ ದತ್ತಮಾಲಾ ಅಭಿಯಾನದ ವೇಳೆ ನಾಗೇನಹಳ್ಳಿ ದರ್ಗಾದಲ್ಲಿಯೂ ದತ್ತಜಯಂತಿ ಆಚರಣೆ ಮಾಡುವ ಮೂಲಕ ಸಾಮರಸ್ಯದ ಪಾಠ ಮಾಡಲು ಮುಂದಾಗಿದ್ದೆವು. ಆದರೆ ಅದಕ್ಕೂ ಕಲ್ಲು ಹಾಕಿದರು. ಒಟ್ಟಾರೆ ದತ್ತಪೀಠ ವಿವಾದ ಮುಗಿಯಬಾರದು ಎಂಬುದು ಸರ್ಕಾರದ ಉದ್ದೇಶವಿದ್ದಂತೆ ಕಾಣುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಖಾದ್ರಿ ವಂಶಸ್ಥರು ಇನ್ನಾದರೂ ತಮ್ಮ ಹಠವನ್ನು ಬಿಟ್ಟು ಸುಮ್ಮನಿರುವುದನ್ನು ಕಲಿಯಬೇಕು. ಜೊತೆಗೆ ವಾಸ್ತವಿಕತೆ ಏನು ಎಂಬುದನ್ನು ಅರಿತುಕೊಳ್ಳಬೇಕು. ದತ್ತಪೀಠದ ವಿಷಯದಲ್ಲಿ ಪದೇ ಪದೇ ವಿವಾದ ಸೃಷ್ಟಿ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.

ಶ್ರೀರಾಮ ಸೇನೆ ವಲಯಾಧ್ಯಕ್ಷ ರಂಜಿತ್ ಶೆಟ್ಟಿ, ದುರ್ಗಾಸೇನೆ ಅಧ್ಯಕ್ಷೆ ನವೀನಾ ಹಾಗೂ ಕಾರ್ಯಕರ್ತರು ಇದ್ದರು.

ಕುಂಭಮೇಳದಲ್ಲಿ ದತ್ತಪೀಠ ವಿಷಯ ಪ್ರಸ್ತಾಪಚಿಕ್ಕಮಗಳೂರು : ಬರುವ 2025ರ ಜನವರಿ 14 ರಿಂದ ಪ್ರಯಾಗ್‌ ರಾಜ್‌ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ದತ್ತಪೀಠ ವಿಷಯವನ್ನು ಪ್ರಸ್ತಾಪ ಮಾಡಲಾಗುವುದು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ್‌ ಕುಲಕರ್ಣಿ ಹೇಳಿದ್ದಾರೆ.

ಸೋಮವಾರ ದತ್ತಮಾಲಾ ಧಾರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೋಗಲು ಯೋಚಿಸಲಾಗಿದೆ. ಜನವರಿ 16 ರಿಂದ ಮೂರು ದಿನಗಳ ಕಾಲ ಕಾಶಿ, ಅಯೋಧ್ಯ ಹಾಗೂ ಪ್ರಯಾಗ್‌ ರಾಜ್‌ನಲ್ಲಿ ಪ್ರವಾಸ ಮಾಡಲು ತೀರ್ಮಾನಿಸಲಾಗಿದೆ. ದತ್ತಭಕ್ತರಾದ ನಾಗಸಾಧುಗಳು, ಅಘೋರಿಗಳಿಗೂ ಸಹ ಈ ವಿಷಯ ತಿಳಿಸುವುದು ಸಂಘಟನೆಯ ಅಜೆಂಡವಾಗಿದೆ. ಹೀಗಾಗಿ ಈ ಹೋರಾಟಕ್ಕೆ ರಾಷ್ಟ್ರೀಯ ಸ್ವರೂಪ ನೀಡಲು ಉದ್ದೇಶಿಸಲಾಗಿದೆ. ಇದಕ್ಕೆ ಸಿದ್ಧತೆ ಆರಂಭವಾಗಿದೆ ಎಂದು ತಿಳಿಸಿದರು.

ಅಯೋಧ್ಯೆ ವಿವಾದ ಮುಗಿದು ರಾಮ ಮಂದಿರ ಹೇಗೆ ನಿರ್ಮಾಣಗೊಂಡಿತೋ ಹಾಗೆಯೇ ದತ್ತ ಮಂದಿರ ಇಲ್ಲಿ ನಿರ್ಮಾಣವಾಗಬೇಕೆಂಬುದು ನಮ್ಮ ಅಭಿಲಾಷೆಯಾಗಿದೆ ಎಂದರು.