ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಮಕಾಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಹೆಣ್ಣು-ಗಂಡು ಮತ್ತು ಜಾತಿ ಭೇದವಿಲ್ಲದೆ ಸಂಘ ನಿರಂತರ ಶಿಕ್ಷಣ ನೀಡಿದ ಪರಿಣಾಮ ಸಾವಿರಾರು ಜನ ಇಂದು ಬದುಕು ಕಟ್ಟಿಕೊಂಡಿದ್ದಾರೆ ಎಂದು ಮಾಜಿ ಶಾಸಕ, ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.ನಗರದ ಬಿ.ವಿ.ವಿ.ಸಂಘದ ಬಸವೇಶ್ವರ ವಾಣಿಜ್ಯ ಕಾಲೇಜಿನ ಸಭಾಭವನದಲ್ಲಿ ಮಹಾವಿದ್ಯಾಲಯ ಸುವರ್ಣ ಮಹೋತ್ಸವದ ನಿಮಿತ್ತ ಸೋಮವಾರ ನಡೆದ 1970-71ರ ಪ್ರಥಮ ಬ್ಯಾಚಿನ ಹಳೆ ವಿದ್ಯಾರ್ಥಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ಕಲೆತ ಸಾವಿರಾರು ವಿದ್ಯಾರ್ಥಿಗಳು ಜಗತ್ತಿನ ತುಂಬೆಲ್ಲ ಇದ್ದಾರೆ. ಸಂಘದ ಮಹಾವಿದ್ಯಾಲಯಗಳನ್ನು ಶಿಕ್ಷಣ ಪಡೆದ ಸಾವಿರಾರು ಜನರು ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂಬುವುದಕ್ಕೆ ಇಲ್ಲಿ ಸೇರಿದ ಹಳೆಯ ವಿದ್ಯಾರ್ಥಿಗಳೆ ಸಾಕ್ಷಿ, ಅಖಂಡ ಬಿಜಾಪುರ ಜಿಲ್ಲೆಯಾಗಿದ್ದಾಗ ತಾಲೂಕು ಕೇಂದ್ರವಾಗಿದ್ದ ಬಾಗಲಕೋಟೆಯಲ್ಲಿ ಈ ವಾಣಿಜ್ಯ ಮಹಾವಿದ್ಯಾಲಯವನ್ನು ಪ್ರಾರಂಭಿಸಿದ ಪರಿಣಾಮ ಇಂದು ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.ಅಂದಿನ ಕಾಲದಲ್ಲಿ ಎಸ್.ಸಿ.ನಂದಿಮಠ, ಶ್ರೀನಿವಾಸ ಅಯ್ಯಂಗಾರ, ಗೋಪಾಲರಾವ, ಎಂ.ಸಿ.ಹಿರೇಮಠ, ಸುಭ್ರಮಣ್ಯರಂತಹ ಬಹಳ ದೊಡ್ಡ ದೊಡ್ಡ ಶಿಕ್ಷಕರ ಅಪರಮಿತ ಜ್ಞಾನ ಭಂಡಾರ, ಅವರ ಶ್ರಮದಿಂದಾಗಿ ಸಂಸ್ಥೆ ಹಾಗೂ ಮಹಾವಿದ್ಯಾಲಯಗಳ ಹೆಸರು ಹಾಗೂ ಮಹತ್ವ ಬಂದು ಬೆಳವಣಿಗೆಗೆ ಕಾರಣವಾಯಿತು. ಶ್ರೀನಿವಾಸವಾಸ ಅಯ್ಯಂಗಾರರು ಇಲ್ಲಿ ಕ್ಯಾಂಪಸ್‌ನಲ್ಲಿ ಇದ್ದಾಗ ತಮ್ಮ ಆತ್ಮ ಚರಿತ್ರೆಯಲ್ಲಿ ಇಲ್ಲಿ ನನಗೆ ಅರವಿಂದರ ಸಾಕ್ಷಾತ್ಕಾರ ಅಯಿತು ಅಂತ ಬರೆಯುತ್ತಾರೆ. ಅಂಥ ಶಿಕ್ಷಕ ಪಡೆ ಇಲ್ಲಿ ಇತ್ತು ಅವರೆಲ್ಲರ ಶ್ರಮದಿಂದಾಗಿ ಬಿ.ವಿ.ವಿ.ಸಂಘ ಇಂದು ಶಿಕ್ಷಣ ಹಾಗೂ ದಾಸೋಹ ನೀರಂತರವಾಗಿದೆ ಎಂದರು.ಸುವರ್ಣ ಮಹೋತ್ಸವದ ಸಮಿತಿಯ ಸಂಯೋಜಕರಾದ ಜಗದೀಶ ಇಂಡಿ ಮಾತನಾಡಿ, ಕಾಲೇಜಿ ಆ ದಿನಗಳಲ್ಲಿ ಬುತ್ತಿಗಾಗಿ ಬಸ್‌ನ್ನು ಕಾಯುವ ಸಂದರ್ಭ ಹಾಗೂ ಒಬ್ಬಬ್ಬರು 12 ರೋಟ್ಟಿಗಳನ್ನು ಊಟ ಮಾಡುತ್ತಿದ್ದ ನೆನಪನ್ನು ಸ್ಮರಿಸುತ್ತ ಇಲ್ಲಿ ಕಲಿಸಿದ ಗುರುವೃಂದ ಹಾಗೂ ಅವರ ಬಗ್ಗೆ ಇರುವು ಭಯ-ಭಕ್ತಿಯನ್ನು ಸ್ಮರಿಸಿಕೊಂಡರು. ಅಂದು ನಮಗೆ ಅವಕಾಶಗಳು ಕಡಿಮೆ ಇಂದು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಇವೆ. ನಾವು ಕಲಿತ ಶಾಲೆ ಕಾಲೇಜು, ಶಿಕ್ಷಕರನ್ನು ಸ್ಮರಿಸುವುದು ಅಗತ್ಯವಾಗಿದೆ ಎಂದರು. ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ ಮಾತನಾಡಿ, ಸಂಘದಲ್ಲಿ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಅವರ ಶಿಕ್ಷಣಕ್ಕೆ ಬೇಕಾದ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಶಿಕ್ಷಣದ ಅಭಿವೃದ್ಧಿಗಾಗಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಕಲ್ಪವೃಕ್ಷವಿದ್ದಂತೆ. ಅವರಿಂದ ಇಂದು 168 ಕ್ಕೂ ಹೆಚ್ಚು ಸಂಸ್ಥೆಗಳನ್ನು ಕಾರ್ಯನಿರ್ವಹಿಸುತ್ತಿವೆ. ನಮ್ಮಲ್ಲಿರುವ ಡೆಂಟಲ್ ಕಾಲೇಜಿನ ಹೋಸ ಕಟ್ಟಡ ವಿನ್ಯಾಸ ಹಾಗೂ ಸೌಲಭ್ಯ ಇಡಿ ಏಷ್ಯಾದಲ್ಲಿಯೇ ನಂ.1 ಸ್ಥಾನದಲ್ಲಿದೆ ಎಂದರು.ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕುಮಾರಿ ಸಂಜನಾ ಮತ್ತು ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಎಸ್.ಎಚ್.ಹಿರೇಮಠ ವಂದಿಸಿದರು. ಡಾ.ಐ.ಕೆ.ಮಠದ ಹಾಗೂ ಎನ್.ಎನ್.ದೊಡಮನಿ ಕಾರ್ಯಕ್ರಮ ನಿರೂಪಿಸಿದರು.ವೇದಿಕೆ ಮೇಲೆ ಸುವರ್ಣ ಸಮಿತಿಯ ಅಧ್ಯಕ್ಷ ಸಿ.ಎಂ.ಜಿಗಜಿನ್ನಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ನಂತರ ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಒಟ್ಟಿನಲ್ಲಿ ಸವಿ ಸವಿ ನೆನಪುಗಳ ಸ್ನೇಹಮಯವಾದ ಭಾವಪೂರ್ಣ ಸಮಾರಂಭ ಇದಾಗಿತ್ತು. ಬೇರೆ ಬೇರೆ ರಾಜ್ಯದಲ್ಲಿರುವ ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.