ಸುಂದರ ಸಾಗರ ನಿರ್ಮಾಣಕ್ಕೆ ಅಗತ್ಯ ಅನುದಾನ: ಬೇಳೂರು

| Published : Jan 14 2024, 01:33 AM IST

ಸಾರಾಂಶ

ಸೊರಬ ರಸ್ತೆ ಮತ್ತು ಬೈಪಾಸ್ ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಸಾಗರದ ಅಭಿವೃದ್ಧಿಯಲ್ಲಿ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸುಂದರ ಸಾಗರ ನಿರ್ಮಿಸುವ ಉದ್ದೇಶದಿಂದ ಗುಣಮಟ್ಟದ ರಸ್ತೆ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿವೆ. ರಾಜ್ಯ ಸರ್ಕಾರ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ ಸುಂದರ ಸಾಗರ ನಿರ್ಮಿಸುವ ಉದ್ದೇಶದಿಂದ ಗುಣಮಟ್ಟದ ರಸ್ತೆ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಸಾಗರದ ಅಭಿವೃದ್ಧಿಯಲ್ಲಿ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಶನಿವಾರ ನಗರದ ಸೊರಬ ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿ ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೊರಬ ರಸ್ತೆ ಮತ್ತು ಬೈಪಾಸ್ ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಅಗಲೀಕರಣ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಜಾಗದ ಅಗತ್ಯವಿದ್ದು, ಅಂಥ ಜಾಗದ ಮಾಲಿಕರೊಂದಿಗೆ ನಗರಸಭೆ ಅಧಿಕಾರಿಗಳು ಮಾತನಾಡುತ್ತಾರೆ. ಅಗತ್ಯವಿದ್ದಲ್ಲಿ ನಾನೂ ಅವರ ಮನವೊಲಿಸುವ ಕೆಲಸ ಮಾಡುತ್ತೇನೆ. ಜೊತೆಯಲ್ಲಿ ಜಾಗ ಬಿಟ್ಟುಕೊಟ್ಟವರಿಗೆ ಸೂಕ್ತ ಪರಿಹಾರವನ್ನು ನಗರಸಭೆಯಿಂದ ಕೊಡಲಾಗುತ್ತದೆ ಎಂದರು.

ಈಗ ನಡೆಯುತ್ತಿರುವ ಕಾಮಗಾರಿ ಮುಗಿದ ಬಳಿಕ, ಸುಸಜ್ಜಿತ ಬಸ್ ನಿಲ್ದಾಣ, ಫುಡ್ ಕೋರ್ಟ್‌ಗಳನ್ನು ತೆರೆಯಲಾಗುತ್ತದೆ. ಅದರಲ್ಲೂ ಈಗ ಅಂಗಡಿ ನಡೆಸುತ್ತಿರುವವರಿಗೆ ಆದ್ಯತೆ ಮೇರೆಗೆ ಜಾಗ ನೀಡಲಾಗುತ್ತದೆ. ಬೇರೆಯವರಿಗೆ ಅವಕಾಶ ಇರುವುದಿಲ್ಲ. ಸುಂದರ ಸಾಗರ ನಿರ್ಮಿಸುವ ಉದ್ದೇಶದಿಂದ ಸಿಕ್ಕಸಿಕ್ಕಲ್ಲಿ, ರಸ್ತೆ ಪಕ್ಕದಲ್ಲಿ ಅನಗತ್ಯ ಮಳಿಗೆ ಹಾಕಲು ಅವಕಾಶ ಕೊಡುವುದಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಪಾರ್ಕ್‌ಗಳ ಅಭಿವೃದ್ಧಿಗೆ ಅನುದಾನ ತೆಗೆದಿರಿಸಲಾಗಿದೆ. ಸದ್ಯದಲ್ಲಿಯೇ ಅವುಗಳನ್ನು ಸುಂದರವಾಗಿ ಸಿದ್ಧಪಡಿಸಿ, ಜನರ ಅನುಕೂಲಕ್ಕೆ ನೀಡಲಾಗುವುದು ಎಂದರು.

ಸಾಗರದಲ್ಲಿ ದೊಡ್ಡ ರಂಗಮಂದಿರ ನಿರ್ಮಿಸುವ ಕನಸು ನನ್ನದಾಗಿತ್ತು. ಅದಕ್ಕೆ ಈಗ ₹4.80 ಕೋಟಿ ಅನುದಾನ ಬಿಡುಗಡೆ ಆಗುತ್ತಿದೆ. ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಹಣ ಪಡೆಯುವ ಕುರಿತು ಈಗಾಗಲೇ ಚರ್ಚೆ ನಡೆದಿದೆ. ಅಗತ್ಯವಿರುವ ಯೋಜನೆಗಳಿಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡುತ್ತಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪ್ರಮುಖರಾದ ಐ.ಎನ್.ಸುರೇಶಬಾಬು, ಗಣಪತಿ ಮಂಡಗಳಲೆ, ಸೋಮಶೇಖರ್ ಲ್ಯಾವಿಗೆರೆ, ರವಿ ಲಿಂಗನಮಕ್ಕಿ, ಮಂಜುನಾಥ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ನಾರಾಯಣ ಮೊದಲಾದವರಿದ್ದರು.

- - - ಬಾಕ್ಸ್ ಸಾಗರ, ಹೊಸನಗರಕ್ಕೆ 24 ತಾಸು ನೀರು ಕೊಟ್ಟರೆ ಶರಾವತಿ ಬೆಂಗಳೂರಿಗೆ ಹರಿದಾಳು

ರಾಜ್ಯ ಸರ್ಕಾರ ಸಾಗರ, ಹೊಸನಗರ ಭಾಗದ ಜನರಿಗೆ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತೇವೆ ಎಂದು ಅಗ್ರಿಮೆಂಟ್ ಮಾಡಿಕೊಟ್ಟರೆ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಬಗ್ಗೆ ಯೋಚಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಬೇಳೂರು ಉತ್ತರಿಸಿದರು.

ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ಕಳೆದುಕೊಂಡಿರುವ ಸಂತ್ರಸ್ತರು ಸಾಗರ, ಹೊಸನಗರ ಭಾಗದಲ್ಲಿದ್ದಾರೆ. ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ. ಕುಡಿಯುವ ನೀರನ್ನು ಕೊಡುವುದಿಲ್ಲವೆಂದು ಹೇಳಲು ಬರುವುದಿಲ್ಲ. ನಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಿದರೆ ನೀರು ಹರಿಸುವ ಬಗ್ಗೆ ಯೋಚಿಸಲಾಗುತ್ತದೆ ಎಂದು ಹೇಳಿದರು. - - -

-13ಕೆ.ಎಸ್.ಎ.ಜಿ.2:

ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸೊರಬ ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲಿಸಿದರು.