ಸಾರಾಂಶ
-ದೇವಲಾಪುರ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಹೊಸಕೋಟೆಶಿಕ್ಷಣದ ಮೇಲೆ ದೇಶದ ಅಭಿವೃದ್ಧಿ ಅವಲಂಬಿಸಿದ್ದು, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಅಗತ್ಯ ಅನುದಾನ ಒದಗಿಸುತ್ತೇನೆ ಹಾಗೂ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ದೇವಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ತಾಲೂಕಿನಲ್ಲಿರುವ ಸರ್ಕಾರಿ ಶಾಲೆ, ಕಾಲೇಜು ಸೇರಿದಂತೆ ಶೈಕ್ಷಣಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯ ಅನುದಾನ ಸರ್ಕಾರದಿಂದ ನಿರಂತರವಾಗಿ ತರುತ್ತಿದ್ದೇನೆ. ಪ್ರಮುಖವಾಗಿ ಶಾಲಾ ಕಾಲೇಜು ಕೊಠಡಿಗಳಿಗೆ ಹೊಸ ವಿನ್ಯಾಸ ನೀಡುವ ಉದ್ದೇಶದಿಂದ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದ ಅನುದಾನದ ಜೊತೆಗೆ ಸಿಎಸ್‌ಆರ್ ಅನುದಾನವನ್ನ ಸಹ ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ನಬಾರ್ಡ್ ಯೋಜನೆಯಡಿ ದೇವಲಾಪುರ ಕಾಲೇಜು ಆವರಣದಲ್ಲಿ 1.68 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಕೊಠಡಿಗಳ ನಿರ್ಮಾಣ ಮಾಡುತ್ತಿದ್ದೇವೆ ಎಂದು ಹೇಳಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಮುತ್ಸಂದ್ರ ಬಾಬುರೆಡ್ಡಿ ಮಾತನಾಡಿ, ಶಾಸಕ ಶರತ್ ಬಚ್ಚೇಗೌಡ ತಾಲೂಕಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶೈಕ್ಷಣಿಕ ಲಭ್ಯವಾಗಬೇಕು ಎಂಬುದು ಅವರ ಆಶಯವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಅನುಗೊಂಡನಹಳ್ಳಿ ಹೋಬಳಿಯ ಕಣೇಕಲ್ ಹಾಗೂ ದೊಡ್ಡ ದೊಡ್ಡದುನ್ನಸಂದ್ರ ಗ್ರಾಮಗಳಲ್ಲಿ ಸುಮಾರು 75 ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ತಹಸೀಲ್ದಾರ್ ಸೋಮಶೇಖರ್, ಇಒ ನಾರಾಯಣಸ್ವಾಮಿ, ಬಿಇಒ ಪದ್ಮನಾಭ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಕಾಶ್, ಬೋಧನ ಹೊಸಹಳ್ಳಿ ಪ್ರಕಾಶ್, ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್ ಸಿಂಗ್, ಬಿಎಂಆರ್‌ಡಿಎ ಸದಸ್ಯ ಕೊರಳೂರು ಸುರೇಶ್ ಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಮಾರೇಗೌಡ, ಮಾಜಿ ಸದಸ್ಯೆ ಗೀತಾ, ಗುತ್ತಿಗೆದಾರ ಬ್ಯಾಟೆಗೌಡ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.