ಕನ್ನಡಪ್ರಭ ವಾರ್ತೆ ಮಡಿಕೇರಿ

ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶ ಆಗುವ ಸಾಧ್ಯತೆ ಇದ್ದು, ಆ ದಿಸೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ಶೇ.50 ಕ್ಕಿಂತಲೂ ಕಡಿಮೆ ಮಳೆ ಆಗಿದೆ. ಆದರೂ ಸಹ ಮಳೆಗಾಲದ ಅವಧಿಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಈ ಹಿಂದಿನಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಪ್ರವಾಹ ಪೀಡಿತ ಹಾಗೂ ಭೂಕುಸಿತ ಪ್ರದೇಶ ಸೇರಿದಂತೆ ಸೂಕ್ಷ್ಮ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅಂತಹ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ನೋಡಲ್ ಅಧಿಕಾರಿಗಳು, ತಹಶೀಲ್ದಾರರು, ತಾ.ಪಂ.ಇಒಗಳು, ಸ್ಥಳೀಯ ಪೊಲೀಸ್ ಠಾಣೆ ಇನ್ಸ್ಪೆಕ್ಟರ್, ಸ್ಥಳೀಯ ಎಂಜಿನಿಯರ್‌ಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ತಾಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ಸಭೆ ನಡೆಸಬೇಕಿದ್ದು, ಆ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿಯೂ ಸಹ ಸಭೆ ನಡೆಸಿ ಪ್ರವಾಹ ಪೀಡಿತ ಹಾಗೂ ಭೂಕುಸಿತ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರವಹಿಸಲು ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸಲಹೆ ಮಾಡಿದರು. ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಟ್ಟಡಗಳ ಸುಸ್ಥಿತಿ ಬಗ್ಗೆ ವರದಿ ನೀಡಬೇಕು. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಕೇಂದ್ರವಿದ್ದು, ತಾಲೂಕು ಮಟ್ಟದಲ್ಲಿಯೂ ಸಹ ಸಹಾಯವಾಣಿ ಕೇಂದ್ರ ಆರಂಭಿಸಬೇಕು. ಮಳೆಗಾಲದ ಅವಧಿಯಲ್ಲಿ ಸಹಾಯವಾಣಿ ಕೇಂದ್ರದಲ್ಲಿ ದಿನದ 24 ಗಂಟೆ ಅವಧಿಯಲ್ಲಿ ಮೂರು ಪಾಳಿಯಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ಈಗಾಗಲೇ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ(ಜಿಎಸ್‌ಐ) ನೀಡಿರುವ ಮಾಹಿತಿಯಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕಂದಾಯ, ಲೋಕೋಪಯೋಗಿ, ಪಂಚಾಯತ್ ರಾಜ್, ಪೌರಾಡಳಿತ, ನಗರಾಭಿವೃದ್ಧಿ, ಸೆಸ್ಕ್, ಅರಣ್ಯ, ಹೀಗೆ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಹಾನಿ ಸಂಬಂಧಿಸಿದಂತೆ ಆಯಾಯ ಸಂದರ್ಭದಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು. ರಸ್ತೆ ಬದಿ ಮರ ಬೀಳುವುದು, ವಿದ್ಯುತ್ ಕಂಬ ಬದಲಿಸುವುದು, ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಪ್ರವಾಹ ಪೀಡಿತ ಹಾಗೂ ಸೂಕ್ಷ್ಮ ಪ್ರದೇಶದಲ್ಲಿನ ಕುಟುಂಬಗಳ ಬಗ್ಗೆ ಮಾಹಿತಿ ಇರಬೇಕು. ಹೆಚ್ಚಿನ ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಉಂಟಾದಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿರಬೇಕು ಎಂದು ಜಿಲ್ಲಾಧಿಕಾರಿ ಅವರು ನುಡಿದರು. ಎನ್‌ಸಿಸಿ, ಎನ್‌ಎಸ್‌ಎಸ್, ರೆಡ್‌ಕ್ರಾಸ್ ಸಂಸ್ಥೆ, ಮಾಜಿ ಸೈನಿಕರು, ಸ್ವಯಂ ಪ್ರೇರಣೆಯಿಂದ ಪ್ರಾಕೃತಿಕ ವಿಕೋಪ ನಿರ್ವಹಣಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರ ಸಹಕಾರವನ್ನು ಪಡೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಕಾಳಜಿ ಕೇಂದ್ರದಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ ಮತ್ತಿತರ ಮೂಲ ಸೌಲಭ್ಯ ಇರಬೇಕು ಎಂದು ಅವರು ಹೇಳಿದರು.

ಕೆಲವು ಸಂದರ್ಭದಲ್ಲಿ ಮಾರುತಗಳ ಅಲೆಯಿಂದಾಗಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಈ ಬಗ್ಗೆಯು ಸಹ ಸ್ಥಳೀಯರಿಗೆ ಮಾಹಿತಿ ನೀಡುವಂತಾಗಬೇಕು ಎಂದರು. ಮಳೆಗಾಲದ ಅವಧಿಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಅಗತ್ಯ ಔಷಧಿ ದಾಸ್ತಾನು ಇರಬೇಕು ಎಂದರು. ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸಂದೇಶಗಳು ಹೋಗದಂತೆ ಗಮನಹರಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ವತಿಯಿಂದ ಕಾಲ ಕಾಲಕ್ಕೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಜನ-ಜಾನುವಾರು ರಕ್ಷಣೆ ಅತೀ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಮಾತನಾಡಿ ಈಗಾಗಲೇ ಪೊಲೀಸ್ ಇಲಾಖೆಯಿಂದ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಿಂದ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಅಗ್ನಿಶಾಮಕ, ಅರಣ್ಯ, ವಿದ್ಯುತ್ ಇಲಾಖೆ ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳು ಸ್ಥಳೀಯವಾಗಿ ಪೊಲೀಸ್ ಠಾಣಾ ಅಧಿಕಾರಿ ಜೊತೆ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಅವರು ಕೋರಿದರು. ಮಳೆಗಾಲದಲ್ಲಿ ರಕ್ಷಣೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಗಂಬೂಟ್, ಲೈಪ್ ಜಾಕೇಟ್, ಟಾರ್ಚ್, ಮತ್ತಿತರ ವಸ್ತುಗಳು ಜೊತೆಯಲ್ಲಿ ಇರಬೇಕು. ಜೆಸಿಬಿ, ಕ್ರೇನ್, ಜೀಪು, ಮತ್ತಿತರ ಸಂಬಂಧ ಸ್ಥಳೀಯವಾಗಿ ವಾಹನ ಮಾಲೀಕರ ದೂರವಾಣಿ ಸಂಖ್ಯೆಗಳನ್ನು ಜತನ ಮಾಡಿಕೊಂಡಿರಬೇಕು. ನೋಡಲ್ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಬೇಕು ಎಂದರು.‘ಜಿ.ಪಂ.ಸಿಇಒ ಆನಂದ ಪ್ರಕಾಶ್ ಮೀನಾ ಅವರು ಮಾತನಾಡಿ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ಮಳೆಯಾಗಿದೆ. ಒಂದು ರೀತಿ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಒಂದು ಕಡೆ ಅನಾವೃಷ್ಠಿ, ಮುಂದಿನ ದಿನಗಳಲ್ಲಿ ಅತೀವೃಷ್ಠಿಯೂ ಸಂಭವಿಸಬಹುದು. ಹೀಗೆ ಎರಡರ ಬಗ್ಗೆಯೂ ಸಹ ಅವಲೋಕನ ಮಾಡಬೇಕಿದೆ ಎಂದು ಅವರು ತಿಳಿಸಿದರು. ತಾಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸಿ, ಸಲಹೆ, ಮಾರ್ಗದರ್ಶನ ಪಡೆಯಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಜಗನ್ನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ತಹಸೀಲ್ದಾರ್ ಪ್ರವೀಣ್ ಕುಮಾರ್, ಕೃಷ್ಣಮೂರ್ತಿ, ಕಿರಣ್ ಗೌರಯ್ಯ, ಸಂಜನಾ, ಶ್ರೀಧರ, ಸೆಸ್ಕ್ ಇಇ ರಾಮಚಂದ್ರ, ಲೋಕೋಪಯೋಗಿ ಇಲಾಖೆ ಇಇ ಕೆ.ಟಿ.ಪ್ರಭು, ಜಿ.ಪಂ.ಇಇ ಜಿ.ಕೆ.ನಾಯಕ್, ಪೊಲೀಸ್ ಇನ್ಸ್ಪೆಕ್ಟರ್ ಐ.ಪಿ.ಮೇದಪ್ಪ, ತಾ.ಪಂ.ಇಒಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇತರರು ಹಲವು ಮಾಹಿತಿ ನೀಡಿದರು.