ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ಮಾ.21 ರಿಂದ ಏಪ್ರಿಲ್ 4ರವರೆಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಜರುಗಲಿದ್ದು, ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಅಕ್ರಮಗಳಿಗೆ ಅವಕಾಶ ನೀಡದೇ ಪಾರದರ್ಶಕ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ. ಎಂ. ಹೇಳಿದರು.ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 94 ಪರೀಕ್ಷಾ ಕೇಂದ್ರಗಳಲ್ಲಿ 33209 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಕಾರ್ಯಕ್ಕೆ 94 ಮುಖ್ಯ ಆಕ್ಷಕರು, 47 ಉಪ ಅಧಿಕ್ಷಕರು, 94 ಅಭಿರಕ್ಷಕರು, 31 ಪರೀಕ್ಷಾ ಕೇಂದ್ರದ ವೀಕ್ಷಕರು, 21 ವೆಬ್ ಕಾಸ್ಟಿಂಗ್ ಸಿಬ್ಬಂದಿ, 94 ಮೊಬೈಲ್ ಸ್ವಾನಾಕಾರಿ, 94 ಸ್ಥಾನಿಕ ಜಾಗೃತ ದಳದವರು, 36 ಮಾರ್ಗಾಧಿಕಾರಿಗಳು ಮತ್ತು 1400ಕ್ಕೂ ಅಧಿಕ ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ, ಅವ್ಯವಹಾರ ನಡೆಯದಂತೆ ಪರೀಕ್ಷಾ ಕೇಂದ್ರದಿಂದ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ಜಾರಿಗೊಳಿಸುವುದರ ಮೂಲಕ ಶಿಸ್ತು ಬದ್ಧವಾಗಿ ಪರೀಕ್ಷೆ ಜರುಗಿಸಲಾಗುವುದು ಎಂದು ಹೇಳಿದರು.ಎಲ್ಲ 94 ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಅಲ್ಲಿನ ಕಟ್ಟಡದ ಸ್ವಚ್ಛತೆ, ಕುಡಿಯುವ ನೀರು, ಶೌಚಗೃಹ ಸೇರಿ ಇನ್ನಿತರ ಮೂಲ ಸೌಲಭ್ಯಗಳ ವ್ಯವಸ್ಥೆ, ಮಕ್ಕಳ ಸುರಕ್ಷತೆ, ಆಸನದ ವ್ಯವಸ್ಥೆ ಮಾಡಿದ ಬಗ್ಗೆ ಖಾತರಿ ಪಡಿಸಿಕೊಂಡು ಎಲ್ಲ ಮಕ್ಕಳು ಗಾಳಿ ಬೆಳಕಿರುವ ಕೊಠಡಿಗಳಲ್ಲಿ ಕುಳಿತು ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೆಸ್ಕಾಂ ಅಧಿಕಾರಿಗಳು ನಿರಂತರ ವಿದ್ಯುತ್ ಪೂರೈಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಈ ಬಾರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಆದೇಶದಂತೆ ಗೈರು ಹಾಜರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ತಿಳಿಸಬೇಕು. ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ, ಸಿಬ್ಬಂದಿ, ಇತರ ಇಲಾಖಾ ಅಧಿಕಾರಿಗಳ ಜವಾಬ್ದಾರಿ ಕೂಡ ಇದ್ದು, ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಡಿಡಿಪಿಐ ಎಂ.ವಿವೇಕಾನಂದ , ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೆದಾರ್ ಸೇರಿದಂತೆ ಇತರರು ಇದ್ದರು.ಹಾಲ್ ಟಿಕೆಟ್ ನೆಪವೊಡ್ಡಿ ವಿದ್ಯಾರ್ಥಿಗಳಿಗೆ ತೊಂದರೆ ಮಾಡದೇ ಸಂಬಂಧಪಟ್ಟವರನ್ನು ವಿಚಾರಿಸಿ ಅಭ್ಯರ್ಥಿಗ ಪರೀಕ್ಷೆ ಬರೆಯಲು ಬಿಡಬೇಕು. ಇಂದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲು, ಒತ್ತಡ, ನಿರೀಕ್ಷೆಗಳಿವೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು.
- ಜಾನಕಿ ಕೆ.ಎಂ. ಜಿಲ್ಲಾಧಿಕಾರಿ