ನೌಕರರಿಗೆ ಸಮರ್ಪಕ ವೇತನ ಪಾವತಿಸಲು ಅಗತ್ಯ ಕ್ರಮ

| Published : Jul 25 2025, 01:12 AM IST

ಸಾರಾಂಶ

ಸುರಕ್ಷತಾ ಕ್ರಮ ಅನುಸರಿಸಿ ಅಪಘಾತ ಪ್ರಮಾಣವನ್ನು ತಗ್ಗಿಸುವ ಕಾರ್ಯದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ವಿಜಯಪುರ

ಹೊರಗುತ್ತಿಗೆ ನೌಕರರಿಗೆ ಮ್ಯಾನ್ ಪವರ್ ಏಜೆನ್ಸಿಗಳು ವೇತನ ನೀಡಲು ಸತಾಯಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬೀದರ್ ಮಾದರಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೊಸೈಟಿ ರಚಿಸಿ ಹೊರಗುತ್ತಿಗೆ ನೌಕರರಿಗೆ ತೊಂದರೆಯಾಗದಂತೆ ವೇತನ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಡೆದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪೆಟ್ರೋಲ್ ಹಾಗೂ ಡಿಸೈಲ್ ಮೇಲಿನ ಒಂದು ರುಪಾಯಿ ಸೆಸ್‌ ಅನ್ನು ಕಾರ್ಮಿಕ ನಿಧಿಗೆ ಒದಗಿಸಿದರೆ ರಾಜ್ಯದ ಕಾರ್ಮಿಕ ವಲಯದಲ್ಲಿ ಶೇ.೮೫ ರಷ್ಟು ಪ್ರಮಾಣದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ದೊಡ್ಡ ಅನುಕೂಲ ಕಲ್ಪಿಸಬಹುದಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಬೇಡಿಕೆಗೆ ಸಕಾರಾತ್ಮಕವಾದ ಸ್ಪಂದನೆ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಅಪಘಾತದಲ್ಲಿ ದುಡಿಯುವ ಜೀವಗಳು ಪ್ರಾಣ ಕಳೆದುಕೊಂಡಿವೆ. ಅನೇಕ ಕುಟುಂಬಗಳ ಆಧಾರ ಕುಸಿಯುವ ಜೊತೆಗೆ ಅಪಘಾತ ಪ್ರಕರಣಗಳಿಂದ ಜಿಡಿಪಿ ಪ್ರಮಾಣದ ಮೇಲೂ ಪರಿಣಾಮ ಬೀರುತ್ತಿದೆ. ಅ ಎಂದು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷಗಳು ವಿನಾಕಾರಣ ಟೀಕೆ ಮಾಡುತ್ತಿವೆ. ಪ್ರತಿ ವರ್ಷ ₹೫೦ ಸಾವಿರ ಕೋಟಿ ಅಂದರೆ, ಐದು ವರ್ಷಗಳ ಅವಧಿಯಲ್ಲಿ ₹೩ ಲಕ್ಷ ಕೋಟಿಯಷ್ಟು ಅನುದಾನವನ್ನು ಬಡವರಿಗೆ ಹಂಚಲು ಸರ್ಕಾರ ಸಂಕಲ್ಪ ಮಾಡಿದೆ. ಆದರೆ ಬಿಜೆಪಿಗೆ ಅದಾನಿ ಸಾಹೇಬರು ಸ್ನೇಹಿತರು, ೨೦೧೮ರಲ್ಲಿ ₹೬೪ ಸಾವಿರ ಕೋಟಿ ಇದ್ದ ಅವರ ವಹಿವಾಟು ಈಗ ಬಿಜೆಪಿ ಅವಧಿಯಲ್ಲಿ ₹೧೫ ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದನ್ನು ಜನರು ಅರ್ಥೈಸಿಕೊಳ್ಳಬೇಕು ಎಂದರು. ದೇಶದಲ್ಲಿ ಲಕ್ಷಾಂತರ ಯುವಕರು, ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಬಗ್ಗೆ ಚರ್ಚೆಯಾಗಬೇಕು. ಆದರೆ ಬಿಜೆಪಿ ಕೇವಲ ಉದ್ಯಮಿಗಳ ಸಾಲ ಮನ್ನಾ ಮಾಡುವುದಕ್ಕಷ್ಟೇ ಆಸಕ್ತಿ ತೋರಿದೆ ಎಂದರು. ಕಾರ್ಮಿಕರ ಸೇವೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ೯೧ ವಲಯದ ಕ್ಷೇತ್ರಗಳನ್ನು ಗುರುತಿಸಿ ಆ ವಲಯದ ಕಾರ್ಮಿಕರನ್ನು ಸಾಮಾಜಿಕ ಭದ್ರತೆಗೊಳಪಡಿಸಲು ಈ ಯೋಜನೆ ರೂಪಿಸಲಾಗಿದೆ. ೭೫ ಲಕ್ಷ ಕಾರ್ಮಿಕರಿಗೆ ನೇರವಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಸಂಘಟಿತ ಕಾರ್ಮಿಕರಿಗೆ ಅನೇಕ ಸೌಲಭ್ಯಗಳಿದ್ದವು. ಆದರೆ ಸೌಲಭ್ಯ ವಂಚಿತ ಅಸಂಘಟಿತ ಕಾರ್ಮಿಕರಿಗೂ ಸೌಲಭ್ಯ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು. ದುಡಿಯುವ ವರ್ಗದ ಸೇವೆಯನ್ನೇ ಸಚಿವ ಲಾಡ್ ತಮ್ಮ ಪೂಜೆಯನ್ನಾಗಿಸಿ ಕೊಂಡಿದ್ದಾರೆ. ಡಾ.ಬಾಬಾಸಾಹೇಬರು ಸಚಿವರಾಗುವುದಾದರೆ ಯಾವ ಖಾತೆ ಅಲಂಕರಿಸುವಿರಿ ಎಂದು ಪತ್ರಕರ್ತರು ಕೇಳಿದಾಗ ಕಾರ್ಮಿಕ ಸಚಿವನಾಗುವೆ ಎಂದು ಹೇಳಿದ್ದರು. ಡಾ.ಅಂಬೇಡ್ಕರ್‌ ಅವರಿಗೆ ಆದ ಅಪಮಾನ ನೂರಾರು, ಆದರೆ ದ್ವೇಷ ಸಾಧಿಸದೇ ಸರ್ವ ಜನರ ಒಳಿತಿಗಾಗಿ ಶ್ರಮಿಸಿದವರು. ಇಂತಹ ಪರರ ಕಲ್ಯಾಣ ಬಯಸುವ ಮನೋಭಾವ ಇದ್ದವರೇ ಕಾರ್ಮಿಕ ಸಚಿವರಾಗಲು ಬಯಸುತ್ತಾರೆ ಎಂದರು.

ಜಂಟಿ ಕಾರ್ಮಿಕ ಆಯುಕ್ತ ಎಸ್.ಬಿ. ರವಿಕುಮಾರ ಮಾತನಾಡಿ, ಸಾರಿಗೆ ಹಾಗೂ ಪೂರಕ ಉದ್ಯೋಗಗಳಲ್ಲಿ ತೊಡಗಿರುವ, ಶಾಮಿಯಾನ, ವಾಹನ ರಿಪೇರಿ, ಜಾನಪದ ಆಟ, ಮೈಕ್, ಫೋಟೋಗ್ರಾಫಿ ಹೀಗೆ ಎಲ್ಲ ವೃತ್ತಿಗಳಲ್ಲಿ ತೊಡಗಿರುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರ ವಲಯದಲ್ಲಿ ಸೇರ್ಪಡೆ ಮಾಡಿ ಸೌಲಭ್ಯ ಕಲ್ಪಿಸಲಾಗಿದೆ. ಜೋಮ್ಯಾಟೋ ಮಾದರಿಯಲ್ಲಿ ವಸ್ತು ಪೂರೈಸುವ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ವಿಮಾ ಸೌಲಭ್ಯ ಒದಗಿಸಲಾಗಿದ್ದು, ರಾಜ್ಯದಲ್ಲಿ ಪ್ರಥಮವಾಗಿ ಈ ಯೋಜನೆ ಜಾರಿಯಲ್ಲಿದೆ ಎಂದರು. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿದರು. ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಡಾ.ಕೆ. ಆನಂದ, ಪಾಲಿಕೆ ಸದಸ್ಯರಾದ ಆರತಿ ಶಹಾಪೂರ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ಷಹಜಾನ್ ಮುಲ್ಲಾ, ಶ್ರೀದೇವಿ ಉತ್ಲಾಸರ ಮೊದಲಾದವರು ಉಪಸ್ಥಿತರಿದ್ದರು.

ಜಪಾನ್ ಸೈಡ್ ಹೊಡೆದಿದ್ದೇವೆ ಎಂದು ಬೆನ್ನು ಚಪ್ಪರಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜ್ಯವು ತಲಾ ಆದಾಯದಲ್ಲಿ ಎರಡು ಲಕ್ಷ ರು. ಇದ್ದು ದೇಶದಲ್ಲಿಯೇ ಹೆಚ್ಚು. ಬಿಹಾರದಲ್ಲಿ ₹೪೩ ಸಾವಿರ ಇದೆ. ಈ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಪ್ರಮುಖವಲ್ಲ. ಈ ದುಡ್ಡು ನಿಮ್ಮದು, ಯಾವ ಸರ್ಕಾರವೇ ಇರಲಿ ಇದು ನಿಮ್ಮ ದುಡ್ಡು. ಶೇ.೬೪ ಜನರು ಅಕೌಂಟ್ ಬಳಸುತ್ತಿಲ್ಲ. ಆದರೂ ಅವರು ಜಿಎಸ್ ಟಿ ಕೊಡುತ್ತಾರೆ. ದೇಶದಲ್ಲಿ ಶ್ರೀಮಂತರು ಶ್ರೀಮಂತರೇ ಆಗುತ್ತಿದ್ದಾರೆ ಎಂದು ಸಂತೋಷ ಲಾಡ್ ಕಾರ್ಮಿಕ ಸಚಿವ ಹೇಳಿದರು.