ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಫುಡ್ ಪಾರ್ಕ್ ನಿರ್ಮಾಣಕ್ಕೆ ಪಟ್ಟಣದಲ್ಲಿ ಈ ಹಿಂದೆ ನಾನು ಗುರುತಿಸಿದ್ದ ಜಾಗಕ್ಕೆ ಕೆಲ ಸದಸ್ಯರು ಮತ್ತು ರಸ್ತೆ ಬದಿ ವ್ಯಾಪಾರಸ್ಥರು ಒಪ್ಪುತ್ತಿಲ್ಲ. ಪ್ರತ್ಯೇಕವಾದ ಸೂಕ್ತ ಜಾಗ ದೊರೆತಲ್ಲಿ ಫುಡ್‌ಪಾರ್ಕ್ ನಿರ್ಮಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಪಟ್ಟಣದ ರಸ್ತೆ ಬದಿಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಉಪಹಾರ ಮಾರಾಟ ಮಾಡುವ ವ್ಯಾಪಾರಸ್ಥರೊಂದಿಗೆ ಪುರಸಭೆ ಜನಪ್ರತಿನಿಧಿಗಳು ಚರ್ಚಿಸಿ ಅವರ ಮನವೋಲಿಸುವುದಾದರೆ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ಫುಡ್‌ಪಾರ್ಕ್ ನಿರ್ಮಿಸಿಕೊಡಲಾಗುವುದು ಎಂದರು.
ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆ ನಡೆಯುವ ಸ್ಥಳದಲ್ಲಿ ರಸ್ತೆ, ಹೈಟೆಕ್ ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಮಾಂಸ ಮಾರಾಟ ಒಂದೇ ಕಡೆ ನಡೆಯಬೇಕು ಎಂದರು.ಪಾದಾಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಹೂವು, ಹಣ್ಣು, ತರಕಾರಿ ಮಾರಾಟಗಾರರಿಗೆ ವ್ಯವಸ್ಥೆ ಮಾಡಿ ಪಟ್ಟಣದ ಸೌಂದರ್ಯ ಕಾಪಾಡಬೇಕು ಸೂಚಿಸಿದ ಸಚಿವರು, ಸಂತೆ ಮೈದಾನ ನವೀಕರಣಕ್ಕೆ ಸಿದ್ಧಪಡಿಸಲಾದ ಮತ್ತು ಟೌನ್ ಪೊಲೀಸ್ ಠಾಣೆ ಮುಂಭಾಗದಲ್ಲಿ ತರಕಾರಿ ಮಾರಾಟಕ್ಕೆ ಸಿದ್ಧಪಡಿಸಿರುವ ನೀಲನಕ್ಷೆ ಪ್ರದರ್ಶಿಸಿದರು.
ಪಟ್ಟಣದ ಟಿ.ಮರಿಯಪ್ಪ ವೃತ್ತ, ಮಂಡ್ಯ ವೃತ್ತ, ಮೈಸೂರು ರಸ್ತೆ, ಶ್ರೀಸೌಮ್ಯಕೇಶವಸ್ವಾಮಿ ದೇವಾಲಯದ ರಸ್ತೆ, ತಾಲೂಕು ಆಡಳಿತ ಕಚೇರಿ ಆವರಣ ಸೇರಿದಂತೆ ಎಲ್ಲೆಡೆ ದ್ವಿಚಕ್ರ ಮತ್ತು ಕಾರುಗಳ ನಿಲುಗಡೆಯಿಂದ ಟ್ರಾಫಿಕ್ ಸಮಸ್ಯೆ ಅಧಿಕವಾಗುತ್ತಿದೆ. ಪುರಸಭೆ ಮತ್ತು ಪೊಲೀಸರು ಜಂಟಿಯಾಗಿ ಟ್ರಾಫಿಕ್ ಸಮಸ್ಯೆಗೆ ಅಂತ್ಯ ಹಾಡಬೇಕು ಎಂದು ತಾಕೀತು ಮಾಡಿ ಕೆಲವು ಸ್ಥಳಗಳನ್ನು ಪಾಕಿಂಗ್ ವ್ಯವಸ್ಥೆಗೆ ಸೂಚಿಸಿದರು.ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಸಾರಿಗೆ, ಖಾಸಗಿ ಬಸ್ಸುಗಳ ಸಂಚಾರ ಜೊತೆಗೆ ಆಟೋ ನಿಲ್ದಾಣ ಇರುವುದರಿಂದ ಪ್ರಯಾಣಿಕರು ಮತ್ತು ಸಾರ್ವಜನಿಕರ ಸಂಖ್ಯೆ ಅಧಿಕವಾಗಿದೆ. ಈ ಸ್ಥಳದಲ್ಲಿ ಮಧ್ಯಮ ದರ್ಜೆ ಶೌಚಾಲಯ ನಿರ್ಮಿಸಿದರೆ ದೀರ್ಘಕಾಲ ಬಳಕೆಗೆ ಬರುವುದಿಲ್ಲ. ಹಾಗಾಗಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ರಾಜಕಾಲುವೆ ಸೇರಿದಂತೆ ಪುರಸಭೆಗೆ ಸೇರಿದ ಜಾಗಕ್ಕೆ ಯಾರೇ ಅತಿಕ್ರಮ ಪ್ರವೇಶಿದ್ದರೂ ಕೂಡ ಮುಲಾಜಿಲ್ಲದೆ ತೆರವುಗೊಳಿಸಿ. ಪುರಸಭೆ ಜಾಗವನ್ನು ಯಾರೇ ಬಳಸಿದರೂ ನೆಲಬಾಡಿಗೆ ಪಡೆಯಬೇಕು. ಪುಕ್ಕಟೆ ಯಾರಿಗೂ ಕೊಡಬೇಡಿ ಎಂದು ತಾಕೀತು ಮಾಡಿದರು.ಪಟ್ಟಣದ ಡಾ.ಅಂಬೇಡ್ಕರ್ ಭವನ ಮತ್ತು ಹಳೆ ರೇಷ್ಮೆ ಇಲಾಖೆ ಕಟ್ಟಡವನ್ನು ತೆರವುಗೊಳಿಸಿ ಈ ಸ್ಥಳದಲ್ಲಿ ಸುಸಜ್ಜಿತ ಹೊಸ ಪುರಸಭೆ ಕಚೇರಿ ಕಟ್ಟಡ ನಿರ್ಮಿಸುವ ಸಚಿವರ ಸಲಹೆಗೆ ಪಕ್ಷಾತೀತವಾಗಿ ಎಲ್ಲ ಸದಸ್ಯರಿಂದ ಒಮ್ಮತ ವ್ಯಕ್ತವಾಯಿತು.
ಈಗ ಇರುವ ಡಾ.ಅಂಬೇಡ್ಕರ್ ಭವನದಲ್ಲಿ ಸಭಾಂಗಣ ಸಾಲುತ್ತಿಲ್ಲ. ಅಲ್ಲದೇ, ವಾಹನಗಳ ನಿಲುಗಡೆಗೂ ತೊಂದರೆಯಾಗುತ್ತಿದೆ. ಆದ್ದರಿಂದ ಮೂರ್‍ನಾಲ್ಕು ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಡಾ.ಅಂಬೇಡ್ಕರ್ ಭವನ ನಿರ್ಮಿಸಲು ಟಿ.ಬಿ.ಬಡಾವಣೆಯ ಉಪ್ಪಾರಹಳ್ಳಿ ಸಮೀಪ 1 ಎಕರೆ ಜಾಗವನ್ನು ನಿಗಧಿಪಡಿಸಲಾಗುವುದು ಎಂದರು.ಪಟ್ಟಣದ ಸುಭಾಷ್ ನಗರದಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗಿದೆ. ಸೂಕ್ತ ಕ್ರಮ ಜರುಗಿಸಿ ಎಂದು ಪುರಸಭಾ ಸದಸ್ಯ ಯೋಗೇಶ್ ಮತ್ತು ನರಸಿಂಹ ಸಲ್ಲಿಸಿದ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು. ಈ ಬಗ್ಗೆ ಎಸ್ಪಿಯವರ ಗಮನಕ್ಕೂ ತರುತ್ತೇನೆ. ಶೀಘ್ರದಲ್ಲಿ ಗಾಂಜಾ ವಹಿವಾಟು ಸಂಪೂರ್ಣ ನಿಲ್ಲಬೇಕು ಎಂದು ಸ್ಥಳದಲ್ಲಿದ್ದ ಸಿಪಿಐ ನಿರಂಜನ್ ಅವರಿಗೆ ತಾಕೀತು ಮಾಡಿದರು.
ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ಸಾಗಿದೆ. ಇದರ ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಪುಸಭೆ ಸದಸ್ಯ ಚನ್ನಪ್ಪ ಸಚಿವರ ಗಮನ ಸೆಳೆದರು. ಈ ವೇಳೆ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷೆ ವಸಂತ, ಮುಖ್ಯಾಧಿಕಾರಿ ಶ್ರೀನಿವಾಸ್ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಎಲ್ಲಾ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಇದ್ದರು.