ಮಾನಸಿಕ ಆರೋಗ್ಯ ಸಮಸ್ಯೆಗಳ ಲಕ್ಷಣಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ
ಬ್ಯಾಡಗಿ: ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ, ಸೂಕ್ತ ಸಮಯದಲ್ಲಿ ತಜ್ಞರಿಂದ ಚಿಕಿತ್ಸೆ ಪಡೆದು, ಮಾನಸಿಕ ಆರೋಗ್ಯದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹಾವೇರಿಯ ಮನೋರೋಗ ತಜ್ಞ ಡಾ. ವಿಜಯಕುಮಾರ ಬಳಿಗಾರ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಮಾನಸಿಕ ಆರೋಗ್ಯ ಸಮಸ್ಯೆಗಳ ಲಕ್ಷಣಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಕೀಳಾಗಿ ಕಾಣದೆ, ಅವರೊಂದಿಗೆ ಮಾನವೀಯವಾಗಿ ವರ್ತಿಸಬೇಕು. ಕುಟುಂಬದ ಸದಸ್ಯರು ಹಾಗೂ ಸಮಾಜದವರು ಅವರಿಗೆ ಸೂಕ್ತ ಬೆಂಬಲ ನೀಡಬೇಕು ಎಂದು ಹೇಳಿದರು.ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ರಾಜೇಶ್ವರಿ ಜೆ. ಪುರಾಣಿಕ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಸಿ. ಶಿಡೇನೂರ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ದಿವಾಣಿ ನ್ಯಾಯಾಧೀಶ ಬಸವರಾಜ ಟಿ. ನಾಯಕ, ಅಪರ ಸರ್ಕಾರಿ ವಕೀಲ ಟಿ.ಸಿ. ಶೀಗಿಹಳ್ಳಿ, ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ಹಿರಿಯ ಆರೋಗ್ಯ ಮೇಲ್ವಿಚಾರಕರಾದ ಬಿ.ಎಚ್. ಶೇಧಿಯಣ್ಣನವರ ಹಾಗೂ ಮಾಲಾ ಅಗಡಿ, ಸಂಘದ ಉಪಾಧ್ಯಕ್ಷ ಜಿ.ಬಿ. ಯಲಗಚ್ಚ, ಕಾರ್ಯದರ್ಶಿ ಎಚ್.ಜಿ. ಮುಳುಗುಂದ, ಸಹಕಾರ್ಯದರ್ಶಿ ಎಂ.ಎಸ್. ಕುಮ್ಮೂರ, ವಕೀಲರಾದ ಎಂ.ಜೆ. ಮುಲ್ಲಾ, ಬಿ.ಎಸ್. ಚೂರಿ, ಎಫ್.ಎಂ. ಮುಳುಗುಂದ, ಒ.ಕೆ. ಹೊಮ್ಮರಡಿ, ಕೆ.ಜಿ. ಬೆಳಕೇರಿಮಠ, ಎಸ್.ಒ. ಬರ್ಕಿ, ಒ.ಒ. ಪಾಟೀಲ್, ಭಾರತಿ ಕುಲಕರ್ಣಿ, ಮಂಜುಳಾ ಜಿಗಳಿ ಭಾಗವಹಿಸಿದ್ದರು.