ಸಾರಾಂಶ
ದಾಂಡೇಲಿ: ನಾವು ದೇವರು, ಧರ್ಮ ಹಾಗೂ ಪುರಾಣಗಳ ಸಂಗತಿಗಳನ್ನು ವರ್ತಮಾನದ ಜತೆಗೆ ಸಂಹವನ ಮಾಡಬೇಕಾದ ಅಗತ್ಯವಿದೆ ಎಂದು ಸಾಹಿತಿ ಶ್ರೀದೇವಿ ಕೆರೆಮನೆ ಹೇಳಿದರು.ದಾಂಡೇಲಿ ತಾಲೂಕು ಕಸಾಪ ತಿಂಗಳವಾರು ಸಾಹಿತ್ಯ ಸರಣಿ ಕಾರ್ಯಕ್ರಮದಡಿ ಹಮ್ಮಿಕೊಂಡ ಸಾಹಿತಿ ಪ್ರವೀಣ ನಾಯಕ ಅವರ ''''''''ಈ ಸಮಯ ಕಳೆದು ಹೋಗುತ್ತದೆ'''''''' ಎಂಬ ಕೃತಿ ಅವಲೋಕನ ಮಾಡಿ ಅವರು ಮಾತನಾಡಿದರು.
ನಾವು ಇಂದು ದೇವರನ್ನೇ ಭ್ರಷ್ಟಾಚಾರದ, ಅನಾಚಾರದ, ಅಪಪ್ರಚಾರದ ಕೆಲಸಕ್ಕೆ ಎಳೆದು ತಂದಿದ್ದೇವೆ. ಭಕ್ತಿಯ ಸ್ಥಳವನ್ನು ಭಯ ಹುಟ್ಟಿಸುವ ಸ್ಥಳವನ್ನಾಗಿ ಮಾರ್ಪಡಿಸಿದ್ದೇವೆ. ಇದು ಆತಂಕದ ವಿಚಾರ ಎಂದು ಹೇಳಿದರು.ಸಾಹಿತ್ಯ ಇಂತಹ ಸೂಕ್ಷ್ಮ ಸಂಗತಿಗಳ ಮೇಲೆ ಬೆಳಕು ಚೆಲುವ ಕೆಲಸ ಮಾಡಬೇಕಾಗಿದೆ. ಅಂತಹ ಅನೇಕ ವಿಚಾರಗಳು ಪ್ರವೀಣ ನಾಯಕ ಅವರ ಈ ಕೃತಿಯಲ್ಲಿ ಕಂಡುಬರುತ್ತವೆ. ಪುರಾಣ ಪಾತ್ರಗಳು ಮತ್ತೆ ಅದರೊಳಗಿರುವ ವೈರುಧ್ಯಗಳ ಬಗ್ಗೆ ಬಿಡಿಬಿಡಿಯಾಗಿ ಪ್ರವೀಣ ನಾಯಕ ತಿಳಿಸಿ ಹೇಳಿದ್ದಾರೆ. ಎಲ್ಲ ವಯೋಮಾನದವರೂ ಓದಿ ಅರ್ಥೈಸಿಕೊಳ್ಳುವಷ್ಟು ಸುಲಭವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚೌಹಾಣ, ನಾವು ಮನುಷ್ಯನನ್ನು ಆತನ ಜ್ಞಾನ, ವಿದ್ವತ್ತು, ಅನುಭವಗಳಿಂದ ಅಳೆಯಬೇಕೆ ಹೊರತು ಶ್ರೀಮಂತಿಕೆಯಿಂದ ಅಳೆಯಬಾರದು. ನಮ್ಮ ನಡವಳಿಕೆಯಲ್ಲಿಯೇ ನಾವು ನಮ್ಮತನವನ್ನು ಹಾಗೂ ಮಾನವೀಯತೆ ತೋರಿಸಬೇಕು. ಆದರೆ ಈಗ ಆಧುನಿಕತೆಯ ಶೋಕಿಯಲ್ಲಿ ಮನುಷ್ಯ ಮೌಲ್ಯಗಳನ್ನು ಮಾಡಿಕೊಳ್ಳುವಂತಹ ನಿದರ್ಶನಗಳನ್ನು ಕಾಣುತ್ತಿದ್ದೇವೆ ಎಂದರು.ಕೃತಿಕಾರ ಪ್ರವೀಣ ಜಿ. ನಾಯಕ ಮಾತನಾಡಿ, ಸಾಹಿತ್ಯ ಯಾವತ್ತು ನಿಂತ ನೀರಾಗಬಾರದು, ಅದು ಹೊಸ ಆಲೋಚನೆಗಳ ಜತೆ ಮುನ್ನಡೆಯುತ್ತಿರಬೇಕು. ಹಿಂದೆ ಹೇಳಿದ್ದು, ನಡೆದಿದ್ದು ಎಲ್ಲವೂ ಈಗ ವಾಸ್ತವವಾಗುವುದಿಲ್ಲ. ಪುರಾಣ ಪಾತ್ರಗಳಲ್ಲಿ ಬರುವ ಸಂಘರ್ಷಗಳ ಬಗ್ಗೆ, ವೈರುಧ್ಯಗಳ ಬಗ್ಗೆ ಇಂದಿನ ಬರಹಗಾರರು ವಿಮರ್ಶೆ ಮಾಡಬೇಕಾದ ಅಗತ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಸಾಹಿತ್ಯ ವೈಜ್ಞಾನಿಕ ಸತ್ಯಗಳನ್ನು ಹೇಳುವ ಕೆಲಸ ಮಾಡಬೇಕಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಆನೆಹೊಸೂರ ಕನ್ನಡ ಸಾಹಿತ್ಯ ಪರಿಷತ್ತಿನ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ತಿಂಗಳವಾರು ಹಮ್ಮಿಕೊಂಡಿರುವ ಸರಣಿ ಕಾರ್ಯಕ್ರಮದ ಬಗ್ಗೆ ತಿಳಿಸಿ ಕಾರ್ಯಕ್ರಮದ ದಾಸೋಹ ನೀಡುತ್ತಿರುವ ಎಲ್ಲ ಸಹೃದಯಿಗಳಿಗೆ ಅಭಿನಂದಿಸಿದರು.ಕಾರ್ಯಕ್ರಮದ ದಾಸೋಹಿಗಳಾಗಿದ್ದ ಪ್ರವೀಣ ಜಿ. ನಾಯಕ ಹಾಗೂ ನಾಗರೇಖಾ ಗಾಂವಕರ ದಂಪತಿಯನ್ನು ಕಸಾಪ ಪದಾಧಿಕಾರಿಗಳು ಗೌರವಿಸಿದರು.
ಸಾಹಿತಿ ನಾಗರೇಖಾ ಗಾಂವಕರ ಸ್ವಾಗತಿಸಿದರು. ಕಸಾಪ ದಾಂಡೇಲಿ ತಾಲೂಕು ಘಟಕದ ಕಾರ್ಯದರ್ಶಿ ಪ್ರವೀಣ ನಾಯಕ ಪ್ರಾಸ್ತಾವಿಕ ನುಡಿದರು. ಸಾಹಿತಿ ವೆಂಕಮ್ಮ ನಾಯಕ ವಂದಿಸಿದರು. ಉಪನ್ಯಾಸಕಿ ಅನಿತಾಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ಗೌರವ ಕೋಶಾಧ್ಯಕ್ಷ ಶ್ರೀಮಂತ ಮದರಿ ಹಾಗೂ ಕಲ್ಪನಾ ಪಾಟೀಲ, ಆಶಾ ದೇಶಭಂಡಾರಿ, ಸುರೇಶ ಪಾಲನಕರ ಮುಂತಾದವರು ಸಹಕರಿಸಿದರು.