ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ: ಅರಮನೆ

| Published : Feb 13 2024, 12:50 AM IST

ಸಾರಾಂಶ

ಮಸ್ಕಿ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ಸಂವಿಧಾನ ಜಾಗೃತಿ ಜಾಥಾದ ಪೂರ್ವಭಾವಿ ಸಭೆ ಜರುಗಿತು.

ಕನ್ನಡಪ್ರಭ ವಾರ್ತೆ ಮಸ್ಕಿ

ಪ್ರತಿಯೊಬ್ಬರಿಗೂ ಸಂವಿಧಾನದ ಆಶಯ ತಿಳಿಸಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಹಸೀಲ್ದಾರ್ ಅರಮನೆ ಸುಧಾ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಹಸೀಲ್ದಾರ್ ಅರಮನೆ ಸುಧಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆ ಜರುಗಿತು. ಸಂವಿದಾನದ ಮಹತ್ವ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಆದ್ದರಿಂದ ಸಂವಿಧಾನ ಜಾಗೃತಿ ಜಾಥಾದಲ್ಲಿ ಸರ್ವ ಜನಾಂಗದವರು ಕೂಡ ಭಾಗವಹಿಸಿ ಎಂದು ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೇವರಾಜ್ ಹಾಗೂ ಇಒ ಉಮೇಶ ಮಾತನಾಡಿ, ಮಸ್ಕಿ ತಾಲೂಕಿಗೆ ಲಿಂಗಸಗೂರು ತಾಲೂಕಿನಿಂದ ಜಾಗೃತಿ ಜಾಥಾ ಫೆ.15ರಂದು ಕನ್ನಾಳ ಗ್ರಾಪಂಯಲ್ಲಿ ಸ್ವಾಗತ ಮಾಡಿಕೊಳ್ಳಲಾಗುವುದು ನಂತರ ವಿವಿಧ ಗ್ರಾಪಂಗಳಲ್ಲಿ ಸಂಚರಿಸಿ ಮಸ್ಕಿ ಪಟ್ಟಣದ ಕೇಂದ್ರ ಶಾಲಾ ಆವರಣದಲ್ಲಿ ಸಂಜೆ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಫೆ.17ರಂದು ಮಸ್ಕಿ ತಾಲೂಕಿನಿಂದ ಸಿಂಧನೂರು ತಾಲೂಕಿನ ಉಮಾಲೂಟಿ ಗ್ರಾಪಂಗೆ ಜಾಗೃತಿ ಜಾಥಾವನ್ನು ಬೀಳ್ಕೊಡುಗೆ ಕೊಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಲಾ-ಕಾಲೇಜು ಮಕ್ಕಳಿಗೆ ಊಟದ ವ್ಯವಸ್ಥೆ ಅಲ್ಲಿನ ಸ್ಥಳೀಯ ಆಡಳಿತ ಮಾಡುತ್ತದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಪುರಸಭೆ ವತಿಯಿಂದ ಮಾಡಲಾಗುವುದು ಆದ್ದರಿಂದ ಸಾರ್ವಜನಿಕರ ಹಾಗೂ ಸಂಘಟನೆಗಳ ಸಹಕಾರ ಮುಖ್ಯವಾಗಿದೆ ಎಂದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಸಂಘಟನೆಗಳ ಮುಖಂಡರು, ಸಾರ್ವಜನಿಕರು ಇದ್ದರು.