ವಿದ್ಯಾರ್ಥಿಗಳಲ್ಲಿ ಸಂಶೋಧನಾಸಕ್ತಿ ಬೆಳವಣಿಗೆ ಅಗತ್ಯ: ರವಿನಾರಾಯಣ್

| Published : Mar 17 2025, 12:30 AM IST

ವಿದ್ಯಾರ್ಥಿಗಳಲ್ಲಿ ಸಂಶೋಧನಾಸಕ್ತಿ ಬೆಳವಣಿಗೆ ಅಗತ್ಯ: ರವಿನಾರಾಯಣ್
Share this Article
  • FB
  • TW
  • Linkdin
  • Email

ಸಾರಾಂಶ

ವಿಜ್ಞಾನ-ತಂತ್ರಜ್ಞಾನ ನಾಗಾಲೋಟದಲ್ಲಿ ಬೆಳವಣಿಗೆ ಕಾಣುತ್ತಿದೆ. ಕೃತಕ ಬುದ್ಧಿಮತ್ತೆ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ವಿಜ್ಞಾನ-ತಂತ್ರಜ್ಞಾನದಲ್ಲಾಗುತ್ತಿರುವ ಬೆಳವಣಿಗೆಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡಬೇಕಿದೆ. ವಿದ್ಯಾರ್ಥಿಗಳು ಕೂಡ ವಿಜ್ಞಾನವನ್ನು ಅರಿತು ಹೊಸ ಹೊಸ ಮಾದರಿಗಳನ್ನು ಸೃಷ್ಟಿಸುವುದರೊಂದಿಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಮೂಡಿಸಿ ಸಂಶೋಧನಾಸಕ್ತಿ ಹೆಚ್ಚಿಸುವ ಅಗತ್ಯವಿದೆ ಎಂದು ವಿಜ್ಞಾನ ಶಿಕ್ಷಕ ರವಿನಾರಾಯಣ್ ಹೇಳಿದರು.

ಪಟ್ಟಣದ ಕುದರಗುಂಡಿ ಕಾಲೋನಿಯಲ್ಲಿರುವ ನಳಂದ ವಿದ್ಯಾಪೀಠದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಕುತೂಹಲ ಕೆರಳಿಸಬೇಕು. ಆಗ ವಿಷಯದ ಬಗ್ಗೆ ಆಸಕ್ತಿ ಮೂಡುತ್ತದೆ. ವೈಜ್ಞಾನಿಕವಾಗಿ ಆಲೋಚಿಸುವ, ಚಿಂತಿಸುವ ಮನೋಭಾವ ಬೆಳವಣಿಗೆ ಕಾಣುತ್ತದೆ. ಭವಿಷ್ಯದಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ ಎಂದರು.

ವಿಜ್ಞಾನ-ತಂತ್ರಜ್ಞಾನ ನಾಗಾಲೋಟದಲ್ಲಿ ಬೆಳವಣಿಗೆ ಕಾಣುತ್ತಿದೆ. ಕೃತಕ ಬುದ್ಧಿಮತ್ತೆ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ವಿಜ್ಞಾನ-ತಂತ್ರಜ್ಞಾನದಲ್ಲಾಗುತ್ತಿರುವ ಬೆಳವಣಿಗೆಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡಬೇಕಿದೆ. ವಿದ್ಯಾರ್ಥಿಗಳು ಕೂಡ ವಿಜ್ಞಾನವನ್ನು ಅರಿತು ಹೊಸ ಹೊಸ ಮಾದರಿಗಳನ್ನು ಸೃಷ್ಟಿಸುವುದರೊಂದಿಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದರು.

ವಿದ್ಯಾರ್ಥಿ ದಿಸೆಯಿಂದಲೇ ಸಂಶೋಧನಾಸಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಈಗ ಸಣ್ಣ ಪುಟ್ಟ ವಿಜ್ಞಾನದ ಮಾದರಿಗಳನ್ನು ತಯಾರಿಸುತ್ತಾ ಭವಿಷ್ಯದಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ಮುಕ್ತವಾಗಿ ತೆರೆದುಕೊಳ್ಳಬಹುದು. ವಿಜ್ಞಾನದ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಾ ಹೋದಂತೆ ಮತ್ತೇನೋ ಹೊಸತು ಸಿಗುತ್ತದೆ. ಅದಕ್ಕಾಗಿ ವಿಜ್ಞಾನದ ಮೇಲಿನ ಕುತೂಹಲವನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ನುಡಿದರು.

ಪೋಷಕರೂ ಕೂಡ ಮಕ್ಕಳ ಚಟುವಟಿಕೆಗಳ ಕಡೆಗೆ ಗಮನಹರಿಸಬೇಕು. ವೈಜ್ಞಾನಿಕತೆಯ ಕಡೆಗೆ ಮಕ್ಕಳನ್ನು ಕೊಂಡೊಯ್ಯಬೇಕು. ಇದರಿಂದ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ದೊಡ್ಡದಾಗಿ ಆಲೋಚಿಸುವ ಮನೋಭಾವ ಅವರಲ್ಲಿ ಬೆಳವಣಿಗೆ ಕಾಣುವುದರಿಂದ ಅವರ ಬೌದ್ಧಿಕ ಮಟ್ಟ ವಿಸ್ತಾರಗೊಳ್ಳುತ್ತದೆ ಎಂದರು.

ನಳಂದ ವಿದ್ಯಾಪೀಠದ ಡಾ.ಆರ್.ರಾಮಕೃಷ್ಣ ಮಾತನಾಡಿ, ವಿಜ್ಞಾನಕ್ಕೆ ಕೊನೆ ಎಂಬುದೇ ಇಲ್ಲ. ಹುಡುಕಿದಷ್ಟು ಹೊಸದು ಸಿಗುತ್ತಲೇ ಇರುತ್ತದೆ. ಅದಕ್ಕಾಗಿ ವಿಜ್ಞಾನಕ್ಕೆ ವಿಶೇಷವಾದ ಮಹತ್ವವಿದೆ. ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಹೆಚ್ಚಿನ ಆಸಕ್ತಿ ತೋರಿದರೆ ರಾಷ್ಟ್ರಕ್ಕೆ ಏನಾದರೂ ಕೊಡುಗೆ ನೀಡಬಹುದು ಎಂದರು.

ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳ ಬಾಗಿಲು ಮುಕ್ತವಾಗಿ ತೆರೆದುಕೊಂಡಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಬೆಳವಣಿಗೆ ಕಾಣುವುದಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು. ಸಮಯ ಎನ್ನುವುದು ಬಹಳ ಅಮೂಲ್ಯವಾದುದು. ಅದನ್ನು ವ್ಯರ್ಥ ಮಾಡಿದರೆ ಮತ್ತೆ ಸಿಗುವುದಿಲ್ಲ. ವಿದ್ಯಾರ್ಥಿಗಳೂ ಕೂಡ ಸಮಯಕ್ಕೆ ಮಹತ್ವ ಕೊಟ್ಟು ಶೈಕ್ಷಣಿಕವಾಗಿ ಬೆಳವಣಿಗೆ ಕಾಣಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಎ.ಸಿ.ಸವಿತಾ ಹಾಗೂ ಶಿಕ್ಷಕರು ಹಾಜರಿದ್ದರು.