ಮನುಷ್ಯನು ತಮ್ಮ ಮೂಢನಂಬಿಕೆಗಳನ್ನು ಬದಿಗೊತ್ತಿ ವಿಜ್ಞಾನ ಹಾಗೂ ವೈಜ್ಞಾನಿಕ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜು ಜನತೆಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಮನುಷ್ಯನು ತಮ್ಮ ಮೂಢನಂಬಿಕೆಗಳನ್ನು ಬದಿಗೊತ್ತಿ ವಿಜ್ಞಾನ ಹಾಗೂ ವೈಜ್ಞಾನಿಕ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜು ಜನತೆಗೆ ಕರೆ ನೀಡಿದರು. ತಮ್ಮ ಸ್ವಗ್ರಾಮವಾದ ಹುಲಿಕಲ್ ನ ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಪವಾಡ ಬಯಲು ಕಾರ್ಯಕ್ರಮದಲ್ಲಿ ಪಾಲೊಂಡು ಮಾತನಾಡಿದ ಅವರು. ವಿಜ್ಞಾನ ಬೆಳೆಯುತ್ತಿದೆ. ಆದರೆ ಮನ್ನಸ್ಸು ಖಿನ್ನತೆಗೆ ಜಾರುತ್ತಿದೆ. ಇಂತಹ ದುರ್ಬಲ ಮನಸ್ಸನ್ನು ಬಳಸಿಕೊಳ್ಳುವ ಜನ ಅನೇಕರಿದ್ದಾರೆ. ಇಂದಿನ ದಿನಗಳಲ್ಲಿ ಪಂಚಾಂಗಕ್ಕಿಂತ ಪಂಚ ಅಂಗಗಳ ಕಡೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಹಿಂದೆ ತಿನ್ನುವ ಆಸೆಯಿತ್ತು ಆಹಾರ ಇರಲಿಲ್ಲ. ಈಗ ಆಹಾರ ಇದೆ. ಆದರೆ ತಿನ್ನಲಿಕ್ಕೆ ಆಗ್ತಾ ಇಲ್ಲಾ. ಅಂದರೆ ನಾವಿಂದು ಎಂತಹ ಪರಿಸ್ಥಿತಿಯತ್ತ ಸಾಗುತ್ತಿದ್ದೇವೆ ಎಂಬುದನ್ನು ಅವಲೋಕಿಸಬೇಕಾಗಿದೆ. ಸಂತೋಷ ಇದೆ. ಅದನ್ನು ಅನುಭವಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಮನೆಯ ವಾಸ್ತುವಿಗಿಂತ ಮನಸ್ಸಿನ ವಾಸ್ತುವಿನ ಕಡೆ ಗಮನ ಹರಿಸಿ. ಹಾಗಾಗಿ ಇರುವಷ್ಟು ದಿನ ಸೌಖ್ಯವಾಗಿದ್ದು ಈ ಸಮಾಜಕ್ಕೆ ಏನಾದರೊಂದು ಕೊಡುವ ಮನಃಸ್ಥಿತಿ ನಮ್ಮದಾಗಬೇಕಾಗಿದೆ. ನಮಗೆ ಜನ್ಮ ನೀಡಿದ ಊರನ್ನು ನಾವೆಂದಿಗೂ ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ಡಾ.ಹುಲಿಕಲ್ ನಟರಾಜು ದಂಪತಿಗಳು ಹಾಗೂ ಇತರೆ ಕಲಾವಿದರನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು. ಪವಾಡ ಬಯಲು ಕಾರ್ಯಕ್ರಮದ ತರುವಾಯ ಬೆಂಗಳೂರು ಅಕ್ಷಯ ಸ್ಕೂಲ್ ಆಫ್ ಆರ್ಟ್ಸ್ ತಂಡದವರಿಂದ ಭರತ ನಾಟ್ಯ ಹಾಗೂ ಜಾನಪದ ನೃತ್ಯ ಏರ್ಪಡಿಸಲಾಗಿತ್ತು. ಶ್ರೀ ಕೆಂಪಮ್ಮ ದೇವಿಯ ಬ್ರಹ್ಮ ರಥೋತ್ಸವ ಅಂಗವಾಗಿ ಬಾಯಿಬೀಗ, ಮಡೆ. ಆರತಿ ಸೇವೆ, ಮಡಿತೇರು, ಗಜವಾಹನೋತ್ಸವ, ನವಿಲು ಹಾಗೂ ಭೂತವಾಹನೋತ್ಸವ, ಅಶ್ವ ವಾಹನೋತ್ಸವ, ಸೋಮನ ಕುಣಿತ, ಅನೇಕ ಧಾರ್ಮಿಕ ಕಾರ್ಯಗಳು ನೆರವೇರಿದವು. ಅಧ್ಯಕ್ಷರಾದ ಬಾಲಕೃಷ್ಣ, ಉಪಾಧ್ಯಕ್ಷ ಸತೀಶ್ ಕುಮಾರ್, ಗುಡಿಗೌಡ ಸುನಿಲ್ ಕುಮಾರ್, ಕಾರ್ಯದರ್ಶಿ ಗಂಗೇಗೌಡ ಸೇರಿದಂತೆ ಸಮಿತಿಯ ಸದಸ್ಯರುಗಳು, ಹುಲಿಕಲ್ ಮತ್ತು ಆಜುಬಾಜು ಗ್ರಾಮಸ್ಥರು ಹಾಗೂ ಅಪಾರ ಭಕ್ತರು ಪಾಲ್ಗೊಂಡಿದ್ದರು.