ಸಾರಾಂಶ
ನರಗುಂದ: ತಾಲೂಕಿನ ಹಿರೇಕೊಪ್ಪ ಗ್ರಾಪಂ 2ನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಜರುಗಿತು. ಒಟ್ಟು 14 ಸದಸ್ಯರ ಸ್ಥಾನ ಬಲ ಹೊಂದಿರುವ ಗ್ರಾಪಂ ಅಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ವಿಠ್ಠಲ ಬೇವಿನಗಿಡದ ಅವರು ಮಾತ್ರ ಉಮೇದುದಾರರಾಗಿ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾರು ನಾಮಪತ್ರ ಸಲ್ಲಿಸದಿರುವುದರಿಂದ ವಿಠಲ ಬೇವಿನಗಿಡದವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಸ್. ಕೆ. ಇನಾಮದಾರ ಘೋಷಿಸಿದರು.
ಚುನಾವಣಾಧಿಕಾರಿಗಳು ಮಾತನಾಡಿ, ಮುಂದಿನ ಅವಧಿಗೆ ಆಯ್ಕೆಗೊಂಡ ಹಿರೇಕೊಪ್ಪ ಗ್ರಾಪಂ ಅಧ್ಯಕ್ಷರು ತಮ್ಮ ಸದಸ್ಯರೊಂದಿಗೆ ಸೇರಿ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ರೂಪಿಸಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಹಾಗೂ ಸಾರ್ವಜನಿಕರಿಗೆ ಸರ್ಕಾರದ ಎಲ್ಲ ಯೋಜನೆಗಳು ದೊರೆಯುವಂತೆ ಕಾರ್ಯ ನಿರ್ವಹಿಸಲು ತಿಳಿಸಿದರು.ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರನ್ನು ಗ್ರಾಮದ ಹಿರಿಯರು, ಸ್ಥಳೀಯ ರಾಜಕೀಯ ಪಕ್ಷಗಳ ಪ್ರಮುಖರು, ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧಿಕಾರಿಗಳು ಸನ್ಮಾನಿಸಿ ಶುಭಕೋರಿದರು.
ಕಾಂಗ್ರೆಸ್ ಬೆಂಬಲಿತ ಗ್ರಾಪಂ 6 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಗೈರಾಗಿರುವುದು ಕಂಡು ಬಂತು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಅಶ್ವಿನಿ ಹಿರೇಮಠ, ಲಕ್ಷ್ಮವ್ವ ಮುರಾರಿ, ಮಂಜುಳಾ ಜಗಾಪೂರ, ರೂಪಾ ಹಡಪದ, ಚಿದಾನಂದ ಅಂಗಡಿ, ಮಾಯಪ್ಪ ಮಾದರ, ಶಿವರೆಡ್ಡಿ ಪೆಟ್ಲೂರ, ಶಂಕರಗೌಡ ಪಾಟೀಲ, ಮಹೇಶ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎ. ವಾಲಿ ಮತ್ತು ಗ್ರಾಪಂ ಸಿಬ್ಬಂದಿ ಇದ್ದರು.