ರಾಜ್ಯದ ಆಯ್ದ ಸರ್ಕಾರಿ ಶಾಲೆಗಳಲ್ಲಿ ನೀಟ್ ತರಬೇತಿ

| Published : Jun 22 2024, 12:49 AM IST

ರಾಜ್ಯದ ಆಯ್ದ ಸರ್ಕಾರಿ ಶಾಲೆಗಳಲ್ಲಿ ನೀಟ್ ತರಬೇತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇನ್ನು ಮುಂದೆ ರಾಜ್ಯದ ಆಯ್ದ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ವತಿಯಿಂದ ಉಚಿತ ನೀಟ್ ತರಬೇತಿ ನೀಡಲು ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನೀಟ್‌ ಪರೀಕ್ಷೆಯಲ್ಲಿ ಆಗಿರುವ ಅದ್ವಾನದಿಂದ ವಿದ್ಯಾರ್ಥಿಗಳು ಕಂಗಲಾಗಿದ್ದಾರೆ. ಕೇಂದ್ರ ನೀಟ್ ಪರೀಕ್ಷೆಯಲ್ಲಿ ಹಸ್ತಕ್ಷೇಪ ಮಾಡಿ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆಸಿದೆ. ಇದಕ್ಕೆ ತಮಿಳುನಾಡು ಸರ್ಕಾರ ಈ ಬಗ್ಗೆ ಮೊದನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ನೀಟ್‌ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಕೇಂದ್ರ ಸರ್ಕಾರದ ವೈಫಲ್ಯವನ್ನು ನಾವು ಖಂಡಿಸುತ್ತೇವೆ ಎಂದರು.

ಇನ್ನು ಮುಂದೆ ನೀಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವೇ ನುರಿತ ಉಪನ್ಯಾಸಕರಿಂದ ತರಬೇತಿ ಕೊಡಿಸಲಿದೆ. ಈ ಬಗ್ಗೆ ಈಗಾಗಲೇ ಚರ್ಚೆಯಾಗಿದ್ದು, ಆಯ್ದ ಶಾಲೆಗಳಲ್ಲಿ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

1900 ಅನಧಿಕೃತ ಶಾಲೆಗಳ ವಿರುದ್ಧ ಕ್ರಮ:

ರಾಜ್ಯದಲ್ಲಿ ಸುಮಾರು 1900 ಅನಧಿಕೃತ ಶಾಲೆಗಳನ್ನು ಸರ್ಕಾರ ಗುರುತಿಸಿದ್ದು ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಕೆಲವರು ಕಟ್ಟಡವನ್ನು ಅನಧಿಕೃತವಾಗಿ ಕಟ್ಟಿ ಅಲ್ಲಿ ಶಾಲೆ ನಡೆಸುತ್ತಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರುವುದಿಲ್ಲ. ಇಂತಹ ಶಾಲೆಗಳನ್ನು ಈಗಾಗಲೇ ಗುರುತಿಸಿದ್ದು, ಅನಧಿಕೃತವಾಗಿ ನಡೆಯುತ್ತಿರುವ ಶಾಲೆಗಳ ಆಡಳಿತ ಮಂಡಳಿಗಳಿಗೆ ಈಗಾಗಲೇ ನೋಟಿಸ್‌ ಕೂಡ ನೀಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ 600 ಪಬ್ಲಿಕ್‌ ಶಾಲೆ ಆರಂಭ:

ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ರಾಜ್ಯದಲ್ಲಿ ಒಟ್ಟು 3000 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈ ಪೈಕಿ ಮೊದಲ ಹಂತದಲ್ಲಿ 600 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 11 ಶಾಲೆಗಳಿದ್ದು, 41 ಶಾಲೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರಿಂದ ಅಹವಾಲು ಸ್ವೀಕಾರ:

ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಲು ಜೂ.28ರಂದು ಶಿವಮೊಗ್ಗದಲ್ಲಿ ಜನಸ್ಪಂದನ ಮತ್ತು 29 ರಂದು ಕೆಡಿಪಿ ಸಭೆ ಹಮ್ಮಿಕೊಳ್ಳಲಾಗುವುದು.ಕಳೆದ ವರ್ಷ ಇಂತಹುದೇ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರ ಅನೇಕ ಕುಂದು ಕೊರತೆಗಳನ್ನು ನೀಗಿಸಲಾಗಿತ್ತು. ಈ ಬಾರಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಬಾನು, ಪ್ರಮುಖರಾದ ಆರ್. ಪ್ರಸನ್ನಕುಮಾರ್, ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಕಲಗೋಡು ರತ್ನಾಕರ್, ಸಿದ್ದಪ್ಪ, ಚಿನ್ನಪ್ಪ, ಶಿವಾನಂದ್, ಎಸ್.ಟಿ.ಚಂದ್ರಶೇಖರ್ ಇದ್ದರು.

ಮುಳುಗಡೆ ಸಂತ್ರಸ್ತರ ಸಮಸ್ಯೆ: ಸುಪ್ರಿಂಗೆ ಮಧ್ಯಂತರ ಅರ್ಜಿ ಸಲ್ಲಿಕೆ

ಜಿಲ್ಲೆಯಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕಳೆದ 7 ದಶಕಗಳಿಂದ ನನೆಗುದಿಗೆ ಬಿದ್ದಿರುವ ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುತ್ತಿದ್ದು, ಈಗಾಗಲೇ ಸುಪ್ರೀಂ ಕೋರ್ಟ್‍ನಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನ್ಯಾಯವಾದಿಗಳ ತಂಡವನ್ನು ರಚಿಸಲಾಗುವುದು. ಅರಣ್ಯಭೂಮಿಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಮಟ್ಟದಲ್ಲಿ 13 ಸಭೆ ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಏಳೆಂಟು ಸಭೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಆ ಮೂಲಕ ಬಗರ್‌ ಹುಕುಂ ಮೊದಲಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮುಂದುವರೆದಿದೆ ಎಂದು ಹೇಳಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಜಿಲ್ಲಾ ಮಟ್ಟದಲ್ಲಿರುವ ಸಮಸ್ಯೆಗಳನ್ನು ಅವರವರ ಹಂತದಲ್ಲಿಯೇ ಬಗೆಹರಿಸಿಕೊಳ್ಳಲು ಮುಖ್ಯಮಂತ್ರಿಗಳು ಸಂಬಂಧಿಸಿದ ಸಚಿವರಿಗೆ ಸೂಚಿಸಿದ್ದಾರೆ. ಅರಣ್ಯಕ್ಕೆ ಸಂಬಂಧಿಸಿದ ಕಾನೂನು ಸಡಿಲವಾಗಬೇಕು. ಇಲ್ಲವಾದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟರು.ಭಾನುಪ್ರಕಾಶ್ ನಿಧನದಿಂದ ನನಗೆ ಅತೀವ ದುಃಖ ತಂದಿದೆಇತ್ತೀಚೆಗೆ ನಿಧನರಾದ ಬಿಜೆಪಿ ಹಿರಿಯ ನಾಯಕ ಎಂ.ಬಿ.ಭಾನುಪ್ರಕಾಶ್ ಅವರು ಒಳ್ಳೆಯ ಗುಣ ಸ್ವಭಾವದವರಾಗಿದ್ದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಭಾನುಪ್ರಕಾಶ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಚುನಾವಣೆ ಗೆದ್ದಿದ್ದರು. ನಾನು ಕೂಡ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದೆ. ಅವರು ಉತ್ತಮ ಸಹಕಾರಿ ಮನೋಭಾವ ಹೊಂದಿದವರಾಗಿದ್ದರು. ಅವರ ನಿಧನ ನನಗೆ ಬಹಳ ದುಃಖ ತಂದಿದೆ. ಇಂದು ಸಂಜೆ ಮೃತರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳುವುದು ನನ್ನ ಕರ್ತವ್ಯ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.