ನೀಟ್ ಪರೀಕ್ಷೆ: 7787 ಹಾಜರು, 212 ಜನ ಗೈರು

| Published : May 05 2025, 12:46 AM IST

ಸಾರಾಂಶ

ನೀಟ್ ಪರೀಕ್ಷೆಯು ದಾವಣಗೆರೆ, ಹರಿಹರ ನಗರಗಳ ಒಟ್ಟು 17 ಕೇಂದ್ರಗಳಲ್ಲಿ ಮೊದಲ ದಿನವಾದ ಭಾನುವಾರ ಸುಗಮವಾಗಿ ನಡೆದಿದೆ. ಪರೀಕ್ಷೆ ತೆಗೆದುಕೊಂಡಿದ್ದ 7999 ವಿದ್ಯಾರ್ಥಿಗಳಲ್ಲಿ 7787 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 212 ಮಂದಿ ಗೈರಾಗಿದ್ದರು.

- ದಾವಣಗೆರೆ-ಹರಿಹರದ ಒಟ್ಟು 17 ಕೇಂದ್ರಗಳಲ್ಲಿ ಸುಗಮವಾಗಿ ನಡೆದ ಪರೀಕ್ಷೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನೀಟ್ ಪರೀಕ್ಷೆಯು ದಾವಣಗೆರೆ, ಹರಿಹರ ನಗರಗಳ ಒಟ್ಟು 17 ಕೇಂದ್ರಗಳಲ್ಲಿ ಮೊದಲ ದಿನವಾದ ಭಾನುವಾರ ಸುಗಮವಾಗಿ ನಡೆದಿದೆ. ಪರೀಕ್ಷೆ ತೆಗೆದುಕೊಂಡಿದ್ದ 7999 ವಿದ್ಯಾರ್ಥಿಗಳಲ್ಲಿ 7787 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 212 ಮಂದಿ ಗೈರಾಗಿದ್ದರು.

ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಉತ್ಸಾಹದಿಂದ ಬಂದಿದ್ದವರ ಪೈಕಿ ಕೆಲವರು ಫೋಟೋ ಇಲ್ಲದೇ, ಪರದಾಡಿದರು. ನೀಟ್ ಪರೀಕ್ಷೆಗೆ ಫೋಟೋ ಹಾಜರುಪಡಿಸುವುದು ಕಡ್ಡಾಯವಾಗಿತ್ತು. ಆದ್ದರಿಂದ ಫೋಟೋ ಬಿಟ್ಟು ಬಂದಿದ್ದವರು ಸುಮಾರು ಸಮಯ ಪರದಾಡಿದರು. ಕಡೆಗೆ ಸಮೀಪದ ಫೋಟೋ ಸ್ಟುಡಿಯೋ, ಫೋಟೋ ಲ್ಯಾಬ್‌ಗಳಿಗೆ ತೆರಳಿ, ಫೋಟೋ ತೆಗೆಸಿಕೊಂಡು ಬಂದು ಪರೀಕ್ಷೆ ಬರೆದರು.

ಉರಿ ಬಿಸಿಲು, ಧಗೆಯಿಂದ ತತ್ತರಿಸಿದ್ದ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯದ ಕೆಲ ಪ್ರಶ್ನೆಗಳಂತೂ ಅತ್ಯಂತ ಕಠಿಣವಾಗಿದ್ದವು ಎಂಬುದಾಗಿ ಪರೀಕ್ಷೆ ನಂತರ ಕೆಲವು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದರು.

ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 7999 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಪ್ರತಿ ಪರೀಕ್ಷಾ ಕೇಂದ್ರಲ್ಲೂ ಸಾಕಷ್ಟು ತಪಾಸಣೆ ನಡೆಸಿದ ನಂತರವೇ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಕಲ್ಪಿಸಲಾಯಿತು. ಪ್ರವೇಶ ಪತ್ರ, ಆಧಾರ್ ಕಾರ್ಡ್‌, ಇತರೆ ಗುರುತಿನ ಚೀಟಿ ಪರಿಶೀಲನೆ ಕಾರ್ಯ ಎಲ್ಲಾ ಕಡೆ ಇತ್ತು.

ಬ್ಯಾಗ್‌, ಕ್ಯಾಲ್ಕುಲೇಟರ್‌, ಎಲೆಕ್ಟ್ರಾನಿಕ್‌ ವಸ್ತುಗಳು, ಇತರೆ ಯಾವುದೇ ವಿದ್ಯುನ್ಮಾನ ಉಪಕರಣಗಳಿಗೆ ಪರೀಕ್ಷಾ ಕೇಂದ್ರದೊಳಗೆ ಒಯ್ಯಲು ಅವಕಾಶ ಇರಲಿಲ್ಲ. ಅಲ್ಲದೇ, ಹೈಹೀಲ್ಡ್‌ ಚಪ್ಪಲಿ, ಶೂಗಳನ್ನು ಕೇಂದ್ರದ ಹೊರ ಭಾಗದಲ್ಲೇ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಿಟ್ಟುಬರಬೇಕಾಯಿತು.

- - -

-4ಕೆಡಿವಿಜಿ4, 5: ದಾವಣಗೆರೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆಗೆ ಬರೆಯಲು ತಮ್ಮ ಕೊಠಡಿ ಸಂಖ್ಯೆ, ಪ್ರವೇಶ ಪತ್ರದ ಸಂಖ್ಯೆ ಪರಿಶೀಲಿಸುತ್ತಿರುವ ವಿದ್ಯಾರ್ಥಿಗಳು. -4ಕೆಡಿವಿಜಿ6: ದಾವಣಗೆರೆ ವಿವಿಧ ಪರೀಕ್ಷಾ ಕೇಂದ್ರವೊಂದಕ್ಕೆ ನೀಟ್ ಪರೀಕ್ಷೆಗೆ ಬರೆಯಲು ಬಂದಿದ್ದ ವಿದ್ಯಾರ್ಥಿನಗಳು ಕೇಂದ್ರದ ಅಧಿಕಾರಿಗಳ ಬಳಿ ದಾಖಲಾತಿ ಹಾಜರುಪಡಿಸುತ್ತಿರುವುದು. -4ಕೆಡಿವಿಜಿ7: ದಾವಣಗೆರೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆಗೆ ಬರೆಯಲು ಪಾಲಕರು ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರದ ಬಳಿ ಕರೆತಂದಿರುವುದು.