ಕನ್ನಡಪ್ರಭ ವಾರ್ತೆ ವಿಜಯಪುರ
ನೀಟ್ ಯುಜಿ 2026 ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯ ಗಂಭೀರ ಆರೋಪಗಳನ್ನು ತೀವ್ರವಾಗಿ ಖಂಡಿಸಿ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಳುಹಿಸುವಂತೆ ವಿನಂತಿಸಿದರು.ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಭೋಗೇಶ ಸೋಲಾಪುರ ಮಾತನಾಡಿ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವಂತಹ ಈ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ. ಇದು ಕೇವಲ ಒಂದು ಪರೀಕ್ಷೆಯ ಸೋರಿಕೆಯಲ್ಲ, ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಮೇಲಿನ ದೊಡ್ಡ ದಾಳಿಯಾಗಿದೆ. 23 ಲಕ್ಷ ವಿದ್ಯಾರ್ಥಿಗಳು ಇದೇ ಮೇ 3ರಂದು ಬರೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇವರೆಲ್ಲ ಮುಂದೆ ವೈದ್ಯರಾಗುವ ಅಪಾರ ಕನಸಿನೊಂದಿಗೆ ಹಗಲುರಾತ್ರಿ ಓದಿ ನೀಟ್ ಪರೀಕ್ಷೆ ಬರೆದಿದ್ದವರು. ಈ ಮಕ್ಕಳ ಜೊತೆಗೆ ಅವರ ಪೋಷಕರೂ ಕೂಡ ಸಮಯ, ಹಣ, ತನು-ಮನ, ನೆಮ್ಮದಿ ಎಲ್ಲವನೂ ತಮ್ಮ ಮಕ್ಕಳ ಈ ಪರೀಕ್ಷೆಗೆ ತೊಡಗಿಸಿದ್ದರು. ಆದರೆ, ಯಾವುದೇ ಅಕ್ರಮಗಳಿಲ್ಲದೆ ಒಂದು ಸರಳ ಪರೀಕ್ಷೆಯನ್ನು ಮಾಡಲಾಗದಷ್ಟು ನಮ್ಮ ವ್ಯವಸ್ಥೆ ಅಪರಾಧಿಗಳ ಮೈದಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮ, ನೇಮಕಾತಿಗಳಲ್ಲಿ ಅಕ್ರಮ, ಕರ್ತವ್ಯದಲ್ಲಿ ಅಕ್ರಮ. ಏನೇ ಅಕ್ರಮ ಮಾಡಿದರೂ ದಕ್ಕಿಸಿಕೊಳ್ಳಬಹುದು ಎನ್ನುವ ಧೈರ್ಯ. ಅದಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳೂ ಇವೆ. ಎಲ್ಲಿಯ ವರೆಗೆ ಅಪರಾಧ ಕೃತ್ಯಗಳಲ್ಲಿ ತೊಡಗಿರುವವರಿಗೆ ಶಿಕ್ಷೆ ಆಗುವುದಿಲ್ಲವೋ, ಅಲ್ಲಿಯ ವರೆಗೆ ದೇಶ ಅಪಾಯದ ಹಾದಿಯಲ್ಲಿ ಸಾಗುತ್ತಲೇ ಇರುತ್ತದೆ. ಕಷ್ಟ, ನಷ್ಟ, ನೋವು, ಸಾಲುಗಳನ್ನು ಅನುಭವಿಸತ್ತಲೇ ಇರುತ್ತದೆ. ಇಲ್ಲಿ ದೇಶ ಎಂದರೆ ದೇಶದ ಜನ ಎಂಬ ಅರಿವುಗೇಡಿಗಳಿಗೆ ಇಲ್ಲ ಎಂದರು.ಇಂದು ರದ್ದಾಗಿರುವ ಪರೀಕ್ಷೆಯಿಂದ ನೊಂದಿರುವ ವಿದ್ಯಾರ್ಥಿಗಳ ಪೋಷಕರು ಇಂದಿನ ಈ ಸ್ಥಿತಿಗೆ ತಾವೆಷ್ಟು ಕಾರಣರು ಎಂದು ಯೋಚಿಸಿದರೆ ಬಹುಶಃ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಬಹುದು. ಕೇಂದ್ರ ಸರ್ಕಾರವು ತಪ್ಪಿತಸ್ಥರ ಮೇಲೆ ಸಿಬಿಐ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು. ವಿದ್ಯಾರ್ಥಿಗಳಿಗೆ ತ್ವರಿತವಾಗಿ ಪಾರದರ್ಶಕ ಪುನರ್ ಪರೀಕ್ಷೆ ನಡೆಸುವುದು ಮತ್ತು ಅವರ ಮಾನಸಿಕ ಆರೋಗ್ಯವನ್ನು ಗಣನೆಗೆ ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಸುಶೀಲಾ ಮಿಣಜಿಗಿ, ಜ್ಯೋತಿ ಮಿಣಜಿಗಿ, ಲಕ್ಷ್ಮಣ ಕಂಬಾಗಿ, ಕಿರಣ ಮೇಲಿನಕೇರಿ ಹಾಗೂ ಅರವಿಂದ ಕುಲಕರ್ಣಿ ಉಪಸ್ಥಿತರಿದ್ದರು.