ನೀಟ್ ಪರೀಕ್ಷೆ ನ್ಯಾಯಾಂಗ ತನಿಖೆಗೆ ಒಳಪಡಿಸಿ

| Published : Jun 12 2024, 12:36 AM IST

ಸಾರಾಂಶ

ನೀಟ್ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ನಗರದ ಟೌನ್ ಹಾಲ್ ವೃತ್ತದಿಂದ ಬಿಎಸ್‌ಎನ್‌ಎಲ್ ಕಚೇರಿಯವರೆಗೆ ಮೆರವಣಿಗೆ ಮೂಲಕ ತೆರಳಿ ಪ್ರತಿಭಟನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುನೀಟ್ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ನಗರದ ಟೌನ್ ಹಾಲ್ ವೃತ್ತದಿಂದ ಬಿಎಸ್‌ಎನ್‌ಎಲ್ ಕಚೇರಿಯವರೆಗೆ ಮೆರವಣಿಗೆ ಮೂಲಕ ತೆರಳಿ ಪ್ರತಿಭಟನೆ ಮಾಡಲಾಯಿತು.

ಎಐಡಿಎಸ್‌ಒ ನ ರಾಜ್ಯ ಉಪಾಧ್ಯಕ್ಷ ಅಭಯ ದಿವಾಕರ್ ಮಾತನಾಡಿ, ಶಿಕ್ಷಣವು ವ್ಯಾಪಾರವಾಗಿದ್ದು, ಅದರಲ್ಲೂ ವೈದ್ಯಕೀಯ ಶಿಕ್ಷಣ ಪಡೆಯುವುದು ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗಗನಕುಸುಮವೇ ಆಗುತ್ತಿದೆ. ತಮ್ಮ ವೈದ್ಯಕೀಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಹಗಲಿರುಳೆನ್ನದೇ ಪರಿಶ್ರಮ ಹಾಕಿ ನೀಟ್ ಪರೀಕ್ಷೆ ಬರೆಯುತ್ತಾರೆ. ತಂದೆ, ತಾಯಿ ಕೂಡ ಮಕ್ಕಳ ಕನಸನ್ನು ಈಡೇರಿಸಲು ಸಾಲ ಮಾಡಿ ಓದಿಸುತ್ತಾರೆ ಎಂದರು.ನೀಟ್ ಪ್ರವೇಶ ಪರೀಕ್ಷೆಯ ಹಗರಣವು ಅತ್ಯಂತ ದೊಡ್ಡ ಹಗರಣ. ಇಂದು ವೈದ್ಯಕೀಯ ಶಿಕ್ಷಣ ಆಕಾಂಕ್ಷಿಯಾಗಿರುವ ವಿದ್ಯಾರ್ಥಿಗಳಲ್ಲಿ ನೀಟ್ ಫಲಿತಾಂಶ ಅಘಾತವನ್ನುಂಟು ಮಾಡಿದೆ. ಡಾಕ್ಟರ್‌ ಆಗಬೇಕೆಂದು ಪರೀಕ್ಷೆ ಬರೆದಂತಹ ವಿದ್ಯಾರ್ಥಿಗಳಿಗೆ ಫಲಿತಾಂಶ ಅತಂತ್ರ ಪರಿಸ್ಥಿತಿಗೆ ಸಿಕ್ಕಿಸಿದೆ ಎಂದು ಹೇಳಿದರು.ಇನ್ನು ವಿದ್ಯಾರ್ಥಿಗಳು ನೀಟ್ ಫಲಿತಾಂಶದಿಂದ ಮನನೊಂದು ಅಸಹಾಯ ಪರಿಸ್ಥಿತಿಯನ್ನು ಎದುರಿಸಲಾರದೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ಸರಿಯಲ್ಲ, ನಿಮ್ಮೊಂದಿಗೆ ನಾವಿದ್ದೇವೆ. ಇಂತಹ ಹಗರಣಗಳ ವಿರುದ್ಧ ವಿದ್ಯಾರ್ಥಿಗಳು ರಾಜಿರಹಿತವಾದ ಹೋರಾಟವನ್ನು ಕಟ್ಟಬೇಕು. ನೀಟ್ ಹಗರಣದಲ್ಲಿ ಭಾಗಿಯಾದ ಎಲ್ಲಾ ತಪ್ಪಿತಸ್ಥರಿಗೂ ಕಠಿಣ ಶಿಕ್ಷೆ ನೀಡಬೇಕು. ಈ ಕೂಡಲೇ ನಿಷ್ಪಕ್ಷಪಾತವಾಗಿ ನ್ಯಾಯಾಂಗ ತನಿಖೆ ಆಗಬೇಕೆಂದು ಆಗ್ರಹಿಸಿದರು.ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಅಶ್ವಿನಿ ಮಾತನಾಡಿ, ಇಂದು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಲು ಬೇಕಾಗಿರುವ ನೀತಿಗಳು ಬರುತ್ತಿರುವುದರಿಂದ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣ ದುಬಾರಿಯಾಗುತ್ತಿದೆ. ಲಕ್ಷಾಂತರ ಹಣ ಖರ್ಚು ಮಾಡಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದು ಮುಂದೆ ಸಮಾಜದಲ್ಲಿ ಬಡವರ ಸೇವೆ ಮಾಡಲು ಸಾಧ್ಯವೇ ಎಂದರು.ಸ್ವಾಮಿ ವಿವೇಕಾನಂದರು ಹೇಳುವ ಹಾಗೆ ಶಿಕ್ಷಣದತ್ತ ವಿದ್ಯಾರ್ಥಿಗಳು ಬರದೇ ಇದ್ದರೆ ಶಿಕ್ಷಣವೇ ವಿದ್ಯಾರ್ಥಿಗಳ ಹತ್ತಿರ ಹೋಗಬೇಕು. ಈ ರೀತಿಯಲ್ಲಿ ಶಿಕ್ಷಣ ಒಂದು ಹಕ್ಕಾಗಿ ಸಿಗುವಂತಾಗಬೇಕು. ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಸ್ಥಾಪಿಸಿದರೆ ಸಿಇಟಿ ಮೂಲಕ ಮೆರಿಟ್‌ ಇರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.ಸರ್ಕಾರ ತನ್ನ ಜವಾಬ್ದಾರಿಯನ್ನು ಪೋಷಕರ ಮೇಲೆ ಹಾಕುತ್ತಾ, ನೀಟ್ ಪರೀಕ್ಷೆಗಳಂತಹ ಒತ್ತಡವು ವಿದ್ಯಾರ್ಥಿಗಳ ಪಾಲಿಗೆ, ಇನ್ನಾದರೂ ನೀಟ್ ಹಗರಣದಿಂದ ಎಚ್ಚೆತ್ತುಕೊಳ್ಳಬೇಕು. ಇದು ಶಿಕ್ಷಣ ವ್ಯವಸ್ಥೆಯ ಕ್ಯಾನ್ಸರ್‌ ಇದ್ದಂತೆ. ಇದಕ್ಕೆ ಇನ್ನೆಷ್ಟು ಜನ ವಿದ್ಯಾರ್ಥಿಗಳು ಬಲಿಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಎಐಡಿಎಸ್‌ಒ ನ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಸಿ.ಬಿ, ಜಿಲ್ಲಾಕಚೇರಿ ಕಾರ್ಯದರ್ಶಿ ಅಕ್ಷರ ಹಾಗೂ ಸೆಕ್ರಟೆರಿಯಟ್ ಸದಸ್ಯರಾದ ಮಿಥುನ, ಭರತ್, ಪಲ್ಲವಿ, ಸುಮಂತ್ ಮತ್ತು ನಂದಿಶ್ ಉಪಸ್ಥಿತರಿದ್ದರು.