ನೀಟ್ ಅಕ್ರಮ ತನಿಖೆ: ನ್ಯಾಯಕ್ಕಾಗಿ ಆಪ್‌ ಒತ್ತಾಯ

| Published : Jun 14 2024, 01:01 AM IST

ನೀಟ್ ಅಕ್ರಮ ತನಿಖೆ: ನ್ಯಾಯಕ್ಕಾಗಿ ಆಪ್‌ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ನೀಟ್ ಪರೀಕ್ಷೆ ಅಕ್ರಮಗಳ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದು, ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ತರುವ ಮೂಲಕ ಉನ್ನತ ಮಟ್ಟದ ತನಿಖೆ ಮಾಡಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕು

ಕನ್ನಡಪ್ರಭ ವಾರ್ತೆ ದಾವಣಗೆರೆ

ನೀಟ್ ಪರೀಕ್ಷೆ ಅಕ್ರಮದಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಳ್ಳುವ ಜೊತೆಗೆ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕವು ಸರ್ಕಾರಗಳಿಗೆ ಒತ್ತಾಯಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆಪ್ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ, ನೀಟ್ ಪರೀಕ್ಷೆ ಅಕ್ರಮಗಳ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದು, ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ತರುವ ಮೂಲಕ ಉನ್ನತ ಮಟ್ಟದ ತನಿಖೆ ಮಾಡಿಸಿ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕು ಎಂದರು.

ಪರೀಕ್ಷಾ ಅಕ್ರಮದಿಂದಾಗಿ ರಾಜ್ಯಗಳಿಗೆ ಸಿಗಬೇಕಾದ ಶೇ.15 ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಒಂದೇ ಪರೀಕ್ಷಾ ಕೇಂದ್ರದಲ್ಲಿ 6 ವಿದ್ಯಾರ್ಥಿಗಳು 720ಕ್ಕೆ720 ಅಂಕ ಪಡೆದಿದ್ದಾರೆ. ಇಡೀ ದೇಶದಲ್ಲೇ ಅತ್ಯಂತ ಕಠಿಣವಾದ ನೀಟ್‌ ಪರೀಕ್ಷೆಯಲ್ಲಿ ಒಂದೇ ಪರೀಕ್ಷಾ ಕೇಂದ್ರದಲ್ಲಿ, ಆರು ವಿದ್ಯಾರ್ಥಿಗಳು ಪರಿಪೂರ್ಣ ಅಂಕ ಗಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ನೀಟ್‌ ಪರೀಕ್ಷಾ ಅಕ್ರಮದಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳ ಕನಸೇ ಕಮರಿ ಹೋಗಿದೆ. ಪರೀಕ್ಷಾ ಅಕ್ರಮದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಾವಿಗೆ ನ್ಯಾಯ ಕೊಡಿಸುವ ಜವಾಬ್ಧಾರಿ ಯಾರದ್ದು? ಪ್ರತಿ ಸಲ 3-4 ವಿದ್ಯಾರ್ಥಿಗಳು ಮಾತ್ರವೇ ಟಾಪರ್ ಆಗುತ್ತಿದ್ದರು. ಆದರೆ, ಈ ಸಲ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟಾಪರ್ ಆಗಿರುವುದು ಹೇಗೆ ಎಂದು ಆತಂಕ ವ್ಯಕ್ತಪಡಿಸಿದರು. ಲಭ್ಯ ಮಾಹಿತಿ ಪ್ರಕಾರ ನೀಟ್ ಪರೀಕ್ಷೆಯನ್ನು ವೃತ್ತಿ ನಿರತ ವೈದ್ಯರೇ ಬರೆದಿರುವ ವರದಿ ಇವೆ. ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆಯೆಂದು ಕೆಲ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿ ಪ್ರಶ್ನೆಪತ್ರಿಕೆ ಬಂದಿದೆ. 60-70 ಗ್ರೇಸ್ ಮಾರ್ಕ್ಸ್‌ ನೀಡಿದ್ದು, ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಅನ್ಯಾಯ ಮಾಡಿದಂತೆ ಎಂದು ಆರೋಪಿಸಿದರು.

ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗಿದೆ. ಇಂತಹ ಅನ್ಯಾಯದ ವಿರುದ್ಧ ರಾಜ್ಯ ಸರ್ಕಾರ ಧ್ವನಿ ಎತ್ತಬೇಕು. ರಾಜ್ಯಗಳಿಗೆ ಅನುಕೂಲ ಆಗುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಶಿವಕುಮಾರಪ್ಪ ಆಗ್ರಹಿಸಿದರು. ಪಕ್ಷದ ಮುಖಂಡರಾದ ಆದಿಲ್ ಖಾನ್‌, ರವೀಂದ್ರ, ವಿಕಾಸ್‌, ಸುರೇಶ ಶಿಡ್ಲಪ್ಪ ಇತರರು ಇದ್ದರು.