ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬಿಐಎ ನೀಟ್ ಅಕಾಡೆಮಿಯಿಂದ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಗ್ರಾಮೀಣ, ನಗರ ಪ್ರದೇಶದ ಮಕ್ಕಳಿಗೆ ಉನ್ನಮಟ್ಟದ ವೈದ್ಯಕೀಯ ಕೋಚಿಂಗ್ ನೀಡುವ ಸಲುವಾಗಿ ನೀಟ್ ರಿಪೀಟರ್ ಕೋಚಿಂಗ್ ಆರಂಭಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಶಿವರಾಜು ಹೇಳಿದರು.೨೦೨೫ರ ನೀಟ್ ಪರೀಕ್ಷೆಯ ೭೨೦ರಲ್ಲಿ ೪೦೦ಕ್ಕೂ ಹೆಚ್ಚು ಅಂಕ ಪಡೆದವರು, ದ್ವಿತೀಯ ಪಿಯುಸಿಯಯಲ್ಲಿ ಶೇ.೯೦ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದವರು, ಪಿಯುಸಿ ಸಿಬಿಎಸ್‌ಇನಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಕೋಚಿಂಗ್ ನೀಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮೀಣ ಪ್ರತಿಭೆಗಳಿಗೆ ಸ್ಕಾಲರ್‌ಶಿಪ್ ಪಡೆಯುವ ಅವಕಾಶವಿದೆ. ಮೊದಲ ಹಂತದಲ್ಲಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸೌಲಭ್ಯದಿಂದ ಲಾಭ ಪಡೆಯಲಿದ್ದಾರೆ. ನೀಟ್ ಮತ್ತು ಜೆಇಇ ಫಲಿತಾಂಶಗಳಲ್ಲಿ ಶ್ರೇಷ್ಠತೆ ಸಾಧಿಸಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಗ್ರಾಮೀಣ ಪ್ರತಿಭೆಗಳಿಗೆ ಜಾಗತಿಕ ಮಟ್ಟದ ಅವಕಾಶಗಳನ್ನು ನೀಡಲು ಮುಂದಾಗಿದೆ. ಈ ತರಬೇತಿಯು ಚನ್ನಪಟ್ಟಣದ ೩೦ ಎಕರೆ ಹಸಿರು, ಶಾಂತಮಯ ವಾತಾವರಣದ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಹೇಳಿದರು.ನೀಟ್ ಪರಿಣಿತ ಶಿಕ್ಷಕರಿಂದ ತರಬೇತಿ, ಪ್ರತಿದಿನ ಪರೀಕ್ಷೆ, ಮಾರ್ಗದರ್ಶನ, ಸಂದೇಹ ನಿವಾರಣೆ, ಆರೋಗ್ಯಕರ ಆಹಾರ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಉಚಿತ ತರಬೇತಿಗೆ ಅರ್ಹರಲ್ಲದವರಿಗೆ ಸಂಸ್ಥೆ ವತಿಯಿಂದಲೇ ಪರೀಕ್ಷೆಯನ್ನು ನಡೆಸಲಾಗುವುದು. ಅದರಲ್ಲಿ ತೇರ್ಗಡೆಯಾದವರಿಗೆ ಪ್ರವೇಶಾವಕಾಶ ನೀಡಿ ಕಡಿಮೆ ಶುಲ್ಕ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಮಹೇಶ್ವರರಾವ್, ಚಂದ್ರಿಕಾ ಇದ್ದರು.ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ
ನಾಗಮಂಗಲ:ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಕರ್ನಾಟಕ ಮಾರವಾಡಿ ಯೂತ್ ಫೆಡರೇಷನ್ ಸಹಭಾಗಿತ್ವದಲ್ಲಿ ಜು.10ರಿಂದ 20ರ ವರೆಗೆ ಹತ್ತು ದಿನಗಳ ಕಾಲ ಉಚಿತ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ ನಡೆಯಲಿದೆ. ಅಪಘಾತ ಸೇರಿದಂತೆ ಇನ್ನಿತರೆ ಖಾಯಿಲೆಯಿಂದ ಕೈ ಮತ್ತು ಕಾಲು ಕಳೆದುಕೊಂಡಿರುವ ವ್ಯಕ್ತಿಗಳಿಗೆ ಕೃತಕ ಕೈ ಕಾಲುಗಳ ಅಳತೆ ಪಡೆದು ಸೂಕ್ತ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಗುವುದು. ಶಿಬಿರಾರ್ಥಿಗಳು ಮತ್ತು ಸಹಾಯಕರಿಗೆ ಊಟದ ವ್ಯವಸ್ಥೆ, ಜನರಲ್ ವಾರ್ಡ್ ಮತ್ತು ಔಷಧೊಪಚಾರ ಉಚಿತವಾಗಿದೆ. ವಿಶೇಷ ಚೇತನರು ಈ ಶಿಬಿರದ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ-9945558579, 9632834071, 7975102982ಗೆ ಸಂಪರ್ಕಿಸಬೇಕೆಂದು ಶಿಬಿರದ ಆಯೋಜಕರು ಮನವಿ ಮಾಡಿದ್ದಾರೆ.