ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಹಾಗೂ ನೀಟ್ ಗೊಂದಲದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಕೇಂದ್ರ ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯದ ವಿವಿಧೆಡೆ ವಿದ್ಯಾರ್ಥಿಗಳಿಂದ ಪ್ರತಿಭಟನೆಗಳು ನಡೆದವು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಹಾಗೂ ನೀಟ್ ಗೊಂದಲದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಕೇಂದ್ರ ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯದ ವಿವಿಧೆಡೆ ವಿದ್ಯಾರ್ಥಿಗಳಿಂದ ಪ್ರತಿಭಟನೆಗಳು ನಡೆದವು.

ಮಣಿಪಾಲದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಆಜಾಧಿ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ಪೋಸ್ಟರ್‌ಗಳನ್ನು ಹಿಡಿದು ಉಡುಪಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕಾಂಗ್ರೆಸ್ ಯುವ ಮುಖಂಡರು ಹಾಗೂ ಎಡಪಂಥೀಯ ಸಂಘಟನೆಗಳು ಪ್ರತಿಭಟನೆಗೆ ಸಾಥ್‌ ನೀಡಿದವು.

ಮಂಗಳೂರಿನಲ್ಲಿ ಕ್ಲಾಕ್ ಟವರ್ ಬಳಿಯಿಂದ ಬೃಹತ್‌ ಜಾಥಾ ನಡೆಸಿದ ವಿವಿಧ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಹಾಗೂ ಪ್ರಗತಿಪರ ಸಂಘಟನೆಗಳು ಪುರಭವನದ ಎದುರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ, ಪ್ರಧಾನಿ ಹಾಗೂ ಶಿಕ್ಷಣ ಸಚಿವರ ವಿರುದ್ಧ ಘೋಷಣೆ ಕೂಗಿದರು. ಎಸ್ಎಫ್ಐ ಹಾಗೂ ಡಿವೈಎಫ್ಐ ಸಂಘಟನೆಗಳು ಪ್ರತಿಭಟನೆಗೆ ಸಾಥ್‌ ನೀಡಿದವು. ಬೀದರ್‌ ಜಿಲ್ಲೆ ಭಾಲ್ಕಿಯಲ್ಲಿ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಯಿಂದ ಮಹಾತ್ಮಾ ಗಾಂಧಿ ವೃತ್ತದಿಂದ ತಹಸೀಲ್ದಾರ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು.

ಹಾಸನದ ಡಿಸಿ ಕಚೇರಿ ಬಳಿ ಭಾರತ ವಿದ್ಯಾರ್ಥಿ ಫೆಡರೇಶನ್‌, ಎಸ್‌ಎಫ್‌ಐ ಆಯೋಜಿಸಿರುವ ಅಹೋರಾತ್ರಿ ಧರಣಿಯಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ, ಸಾಹಿತಿ ಬಾನು ಮುಷ್ತಾಕ್‌ ಪಾಲ್ಗೊಂಡು, ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐ ನೇತೃತ್ವದಲ್ಲಿ ನಗರದ ಕೆಎಂಸಿಆರ್‌ಐನ ಪ್ರವೇಶದ್ವಾರದ ಎದುರು ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ವತಿಯಿಂದ ಬೃಹತ್‌ ಪ್ರತಿಭಟನೆ ನಡೆಯಿತು. ಇದೇ ವೇಳೆ, ಕೊಪ್ಪಳ, ಕಲಬುರಗಿ, ವಿರಾಜಪೇಟೆ, ರಾಯಚೂರು ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.ನೀಟ್‌ ವಿದ್ಯಾರ್ಥಿಗಳಿಗೆ ಕರವೇ ಬೆಂಬಲ:

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ರಾಜೀನಾಮೆ ನೀಡಬೇಕು. ವಿದ್ಯಾರ್ಥಿಗಳಿಗೆ ನ್ಯಾಯಸಿಗಬೇಕು ಎಂದು ಆಗ್ರಹಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ.ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಏನಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಇಡೀ ದೇಶಕ್ಕೆ ಅರ್ಥವಾಗುತ್ತಿರುವುದು ಮೋದಿಯವರ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಒಬ್ಬ ಮಂತ್ರಿಯ ರಾಜೀನಾಮೆ ಪಡೆಯಲು ಸರ್ಕಾರಕ್ಕೆ ಸಾಧ್ಯವಿಲ್ಲವೇ? ಒಬ್ಬನ ರಾಜಕೀಯ ಭವಿಷ್ಯಕ್ಕಾಗಿ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ನಾಶಪಡಿಸಬೇಕಾ ಎಂದು ಪ್ರಶ್ನಿಸಿದ್ದಾರೆ.ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ 21 ಮಕ್ಕಳು ಬಲಿಯಾಗಿದ್ದಾರೆ. ಈ ಹಗರಣಕ್ಕೆ ಕಾರಣಕರ್ತರಾದವರಿಗೆ ಶಿಕ್ಷೆಯಾಗಬೇಕು. ಮುಂದೆಂದೂ ಇಂಥ ಹಗರಣಗಳು ನಡೆಯಬಾರದು. ತಮ್ಮ ಮೂಗಿನ ಅಡಿ ಇಂಥ ಹತ್ಯಾಕಾಂಡಕ್ಕೆ ಸಮನಾದ ಹಗರಣ ನಡೆಯಲು ಬಿಟ್ಟಿರುವ ಶಿಕ್ಷಣ ಸಚಿವರ ತಲೆದಂಡವಾಗಬೇಕು. ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಎಂದಿನಂತೆ ಕೆಲ ಸರ್ಕಾರದ ಬೆಂಬಲಿಗರು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದೇಶ ವಿರೋಧಿ, ಪಾಕಿಸ್ತಾನದಿಂದ ಫಂಡು ಬಂದಿದೆ, ಚೀನಾ ಇದರ ಹಿಂದೆ ಇದೆ ಎಂಬೆಲ್ಲಾ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಈ ದುಷ್ಟ ವ್ಯವಸ್ಥೆಯಿಂದ ಸತ್ತ 21 ಮಕ್ಕಳು ಭಾರತೀಯರಲ್ಲವೇ? ಅವರು ಪಾಕಿಸ್ತಾನಿಗಳಾ? ಚೀನೀಯರಾ? ಅವರಿಗೆ ನ್ಯಾಯ ಕೊಡಬೇಕಾಗಿದ್ದು ಭಾರತ ಸರ್ಕಾರವಲ್ಲವೇ? ನ್ಯಾಯ ಕೇಳುವವರೆಲ್ಲ ಪಾಕಿಸ್ತಾನಿಗಳಾಗಿಬಿಡುತ್ತಾರಾ ಈ ದೇಶದಲ್ಲಿ? ಯಾರೋ ಪಾಕಿಸ್ತಾನೀಯರು ಈ ಚಳವಳಿಯನ್ನು ಬೆಂಬಲಿಸಿದ ಮಾತ್ರಕ್ಕೆ ಆ ಹೋರಾಟ ಪಾಕಿಸ್ತಾನ ಪ್ರೇರಿತ ಆಗಿಬಿಡುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಈಗ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿ ಐತಿಹಾಸಿಕವಾದದ್ದು. ಈ ಚಳವಳಿಯನ್ನು ವಿದ್ಯಾರ್ಥಿಗಳೇ ಮುನ್ನಡೆಸಬೇಕು. ವಿದ್ಯಾರ್ಥಿಗಳೇ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ರಾಜಕೀಯ ಪಕ್ಷಗಳು ಈ ಪ್ರತಿಭಟನೆಯಿಂದ ದೂರವೇ ಉಳಿಯಬೇಕು, ಬೇಕಿದ್ದರೆ ಅವರು ಪ್ರತ್ಯೇಕವಾಗಿ ಚಳವಳಿ ನಡೆಸಲಿ. ಈ ಚಳವಳಿಗೆ ರಾಜಕೀಯ ಬಣ್ಣ ಬರುವುದು ಬೇಡ ಎಂದಿದ್ದಾರೆ.ಪ್ರಧಾನಿ ಕಚೇರಿಗೆ ಕೈ ಮುತ್ತಿಗೆ ಖಂಡಿಸಿ ಬಿಜೆಪಿ ಪ್ರತಿಭಟನೆ:

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ನಡೆಸಿದ ಹಿಂಸಾಚಾರ ಮತ್ತು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ನಡೆಸಿದ ವಿಫಲ ಯತ್ನ ಖಂಡಿಸಿ ರಾಜ್ಯದ ಹಲವೆಡೆ ಬಿಜೆಪಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಗದಗದಲ್ಲಿ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಟೈರ್‌ಗೆ ಬೆಂಕಿ ಹಚ್ಚಲು ಯತ್ನಿಸಿದರು. ಪೊಲೀಸರು ಅವಕಾಶ ನಿರಾಕರಿಸಿದಾಗ, ರಾಹುಲ್‌ ಭಾವಚಿತ್ರವನ್ನು ತುಳಿದ ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿಯಲ್ಲಿ ಯೂತ್ ಫಾರ್ ನೇಷನ್ ಧ್ಯೇಯವಾಕ್ಯದಡಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಲಾರ ಮಹದೇವಪ್ಪ ವೃತ್ತದಿಂದ ಜೆ.ಪಿ.ವೃತ್ತದವರೆಗೆ ಪಾದಯಾತ್ರೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರು, ಪ್ಲೇಕಾರ್ಡ್ ಪ್ರದರ್ಶಿಸಿ, ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದರು. ಕಲಬುರಗಿಯಲ್ಲಿ ಬಿಜೆಪಿ ಶಾಸಕ ಡಾ.ಅವಿನಾಶ್ ಜಾಧವ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದೇ ವೇಳೆ, ಶಿವಮೊಗ್ಗ, ಬೀದರ್‌, ಮೈಸೂರು, ಮಂಡ್ಯ ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.