ಸತ್ಯ ಮಾತನಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ

| Published : Dec 09 2024, 12:45 AM IST

ಸಾರಾಂಶ

ನಮ್ಮಲ್ಲಿ ಧೈರ್ಯದ ಕೊರತೆ ಇರುವುದರಿಂದ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುಸತ್ಯ ಮಾತನಾಡಲು ಧೈರ್ಯಬೇಕು. ಆಗ ಮಾತ್ರ ಎಷ್ಟೋ ಸಮಸ್ಯೆಗಳು ನ್ಯಾಯವಾದಿಗಳಿಂದ ಪರಿಹಾರವಾಗುತ್ತದೆ ಎಂದು ಮೈಸೂರು ವಕೀಲರ ಸಂಘದ ಅಧ್ಯಕ್ಷ ಎನ್. ಲೋಕೇಶ್ ಹೇಳಿದರು.ನಗರದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಶುಕ್ರವಾರ ಅಧಿವಕ್ತ ಪರಿಷತ್ತ್ ಘಟಕದೊಡನೆ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಭಾರತ ಸಂವಿಧಾನದ ಕರಾಳ ದಿನಗಳು ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ನಮ್ಮಲ್ಲಿ ಧೈರ್ಯದ ಕೊರತೆ ಇರುವುದರಿಂದ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಂಘಟನೆ ಕೊರತೆಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಅನ್ಯಾಯವಾದಗಲೂ ನಾವು ಧೈರ್ಯವಿಲ್ಲದೆ ಅದರ ಬಗ್ಗೆ ಮಾತನಾಡುವುದಾಗಲಿ, ಪ್ರತಿಭಟಿಸುವುದಾಗಲಿ ಮಾಡುತ್ತಿಲ್ಲ. ಇದರಿಂದಾಗಿ ಅನೇಕ ಸಮಸ್ಯೆ ಸೃಷ್ಟಿಯಾಗುವ ಜೊತೆಗೆ ದೊಡ್ಡದಾಗುತ್ತಿದೆ ಎಂದರು.ಸತ್ಯ ಮಾತನಾಡುವ ಧೈರ್ಯ ಜನಸಾಮಾನ್ಯರಲ್ಲೂ ಇಲ್ಲ. ನ್ಯಾಯವಾದಿಗಳಲ್ಲಿಯೂ ಇಲ್ಲದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕಾನೂನು ಅರಿವು ಕೇವಲ ಜನಸಾಮಾನ್ಯರಿಗೆ ಇಲ್ಲದಿರುವುದು ಎಲ್ಲರಿಗೂ ಗೊತ್ತು. ಆದರೆ ನ್ಯಾಯವಾದಿಗಳಲ್ಲಿಯೂ ಕಾನೂನಿನ ಅರಿವು ಕಡಿಮೆ ಇರುವುದು ವಿಪರ್ಯಾಸದ ಸಂಗತಿ. ಉದಾಹರಣೆಗೆ ಎಷ್ಟೋ ಮಂದಿಗೆ ವಕ್ಫ್ಕಾಯಿದೆ ಇರುವ ಬಗ್ಗೆಯೇ ಗೊತ್ತಿಲ್ಲ ಎಂದರು.ನ್ಯಾಯವಾದಿ ಮತ್ತು ಟ್ರಸ್ಟ್ ಅಧ್ಯಕ್ಷ ಡಿ. ರವಿಕುಮಾರ್ ಮಾತನಾಡಿ, ಎಲ್ಲಾ ಭಾರತೀಯರಿಗೆ ಸಂವಿಧಾನ ಅತಿ ಶ್ರೇಷ್ಠ ಗ್ರಂಥ. ಎಲ್ಲಿಯವರೆಗೆ ಸಂವಿಧಾನ ಇರುತ್ತದೋ ಮತ್ತು ಇದನ್ನು ಪಾಲಿಸುತ್ತಾರೋ ಅಲ್ಲಿಯವರೆಗೆ ಭಾರತ ಇರುತ್ತದೆ. ಉಳಿಯುತ್ತದೆ ಮೈಟ್ ಈಸ್ರೈಟ್ ಎನ್ನುವ ಪದ ಚಾಲ್ತಿಗೆ ಬಂದಲ್ಲಿ ಸಂವಿಧಾನ ತನ್ನ ಅಂತ್ಯ ಕಾಣುತ್ತದೆ ಹಾಗೂ ಭಾರತ ಭಾರತವಾಗಿ ಉಳಿಯುವುದಿಲ್ಲ ಎಂದು ಅವರು ಹೇಳಿದರು.ಹಿರಿಯ ವಕೀಲ ಕೆ.ಆರ್. ಶಿವಶಂಕರ್ ಮಾತನಾಡಿ, ಸಂವಿಧಾನದ ಆಶಯಗಳನ್ನು ಬದಿಗೊತ್ತಿ ತುರ್ತು ಪರಿಸ್ಥಿತಿ ಏರಿದ ದಿನವನ್ನು ಭಾರತದ ಕರಾಳ ದಿನ ಎಂದು ಕರೆಯಲಾಗುತ್ತದೆ. ಈ ವೇಳೆ ಸಂವಿಧಾನದ ಆಶಯಕ್ಕೆ ಧಕ್ಕೆ ಆಗುವ ಜೊತೆಗೆ ವಾಕ್ಸ್ವಾತಂತ್ರ್ತ್ಯ, ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಆಯಿತು. ಅನ್ಯಾಯಾದ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ಸ್ವಾತಂತ್ರ್ಯ ಅಮಾನತುಪಡಿಸಲಾಗಿತ್ತು. ಸುಮಾರು 21 ತಿಂಗಳ ಕಾಲ ಈ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಅನೇಕ ರಾಜಕೀಯ ನಾಯಕರನ್ನು ಯಾವುದೇ ಕಾರಣ ನೀಡದೆ ಬಂಧಿಸಲಾಯಿತು ಎಂದರು.ಇಂದಿರಾಗಾಂಧಿ ಮತ್ತು ರಾಜ್ ನಾರಾಯಣ್ ನಡುವಿನ ಚುನಾವಣೆಯಲ್ಲಿ ಇಂದಿರಾಗಾಂಧಿ ಗೆದ್ದರು. ಈ ಗೆಲುವಿನಲ್ಲಿ ಸಾಕಷ್ಟು ಅವ್ಯವಹಾರವಾಗಿದೆ ಎಂದು ರಾಜ್ ನಾರಾಯಣ್ ನ್ಯಾಯಾಲಯದ ಮೊರೆ ಹೋದರು. ಈ ವೇಳೆ ನ್ಯಾಯಾಲಯ ಆಯ್ಕೆ ಸರಿ ಇಲ್ಲ ಎಂದು ತೀರ್ಪು ನೀಡಿದ್ದರಿಂದ ತುರ್ತು ಪರಿಸ್ಥಿತಿ ಹೇರಲಾಯಿತು ಎಂದು ಅವರು ವಿವರಿಸಿದರು.ನ್ಯಾಯವಾದಿ ವಿ. ಶಾರದಾ, ಡಿ. ರವಿಕುಮಾರ್ ಇದ್ದರು. ಸವಿತಾ ಪ್ರಾರ್ಥಿಸಿದರು. ಮಿಥುನ್ ಕುಮಾರ್ ಸ್ವಾಗತಿಸಿದರು. ಚೇತನ್ಕುಮಾರ್ ವಂದಿಸಿದರು.