ಸಾರಾಂಶ
ಮಂಡ್ಯ : ಕೊರೋನಾದಂತಹ ಸಂಕಷ್ಟ ಸಮಯದಲ್ಲಿ ಎಲ್ಲಾ ಕ್ಷೇತ್ರಗಳ ಪ್ರಗತಿ ನೆಲಕಚ್ಚಿದ್ದಾಗ ಕೃಷಿ ಶೇ.೩.೫ರಷ್ಟು ಪ್ರಗತಿಯನ್ನು ಸಾಧಿಸಿತ್ತು. ಆದರೂ ಕೃಷಿಯನ್ನು ಬಹಳ ನಿಕೃಷ್ಟವಾಗಿ ಕಾಣುತ್ತಿರುವುದು ದೊಡ್ಡ ದುರಂತ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ವಿಷಾದಿಸಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಸಮಗ್ರ ಸಾವಯವ ಸುಸ್ಥಿರ ಕೃಷಿ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಮಗ್ರ ಸಾವಯವ ಸುಸ್ಥಿರ ಕೃಷಿ ಜನ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕೊರೋನಾ ಎದುರಾದ ಸಮಯದಲ್ಲೂ ರೈತರು ಕೃಷಿಯಿಂದ ವಿಮುಖರಾಗಲಿಲ್ಲ. ಆಹಾರದ ಕೊರತೆ ದೇಶದಲ್ಲಿ ಎದುರಾಗಲಿಲ್ಲ. ನಗರ ಪ್ರದೇಶದಲ್ಲಿದ್ದ ಜನರು ಹಳ್ಳಿಗಳಿಗೆ ಹಿಂತಿರುಗಿ ಬೇಸಾಯದಲ್ಲಿ ತೊಡಗಿದರು. ಕೃಷಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಮತ್ತಷ್ಟು ರೈತರನ್ನು ಕೃಷಿಯತ್ತ ಸೆಳೆಯುವ ಪ್ರಯತ್ನಗಳು ನಡೆಯಲೇ ಇಲ್ಲ. ಯುವಕರನ್ನು ಕೃಷಿಯತ್ತ ಸೆಳೆಯುವುದಕ್ಕೆ ಹೊಸ ಹೊಸ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ ಎಂದರು.
ಅತಿಯಾದ ರಾಸಾಯನಿಕ ಬಳಕೆಯಿಂದ ಕೃಷಿ ಭೂಮಿ ಬರಡಾಗುತ್ತಿದೆ. ಇದನ್ನು ರೈತರಿಗೆ ಮನವರಿಕೆ ಮಾಡಿಕೊಡುವುದಕ್ಕೆ ಹೋರಾಟ ರೂಪಿಸುವ ಅಗತ್ಯವಿದೆ. ರಾಸಾಯನಿಕ ಕೃಷಿಯಿಂದ ಎಲ್ಲರನ್ನೂ ಸಾವಯವ ಕೃಷಿ, ನೈಸರ್ಗಿಕ ಕೃಷಿಯತ್ತ ಆಕರ್ಷಿತರನ್ನಾಗಿ ಮಾಡುವುದು ಹಿಂದೆಂದಿಗಿಂತಲೂ ಈಗ ಹೆಚ್ಚು ಅವಶ್ಯಕತೆ ಇದೆ ಎಂದರು.
ಕೃಷಿಯಲ್ಲಿ ರೈತರಿಗೆ ಹಲವು ಸವಾಲುಗಳಿವೆ. ರೈತರ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಇಲ್ಲ. ಬೇಸಾಯ ಮಾಡಿ ಅನ್ನದಾತರು ಸಾಲಗಾರರಾಗುತ್ತಿದ್ದಾರೆ. ಬೆಳೆಗಳನ್ನು ಮಾರುವುದಕ್ಕೆ ಉತ್ತಮವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಕೃಷಿಗೆ ಪೂರಕವಾದ ಕಾರ್ಖಾನೆಗಳು ಮತ್ತು ಕೈಗಾರಿಕೆಗಳು ಸ್ಥಾಪನೆಯಾಗುತ್ತಿಲ್ಲ. ಹೀಗೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ರೈತರು ಸಿಲುಕಿದ್ದಾರೆ. ಅವರನ್ನು ಭೂಮಿ ವಿಷಮುಕ್ತವಾಗದಂತೆ ತಡೆಯಲು ಮತ್ತು ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದಕ್ಕೆ ಕೃಷಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕು ಎಂದರು.
ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್ ಮಾತನಾಡಿ, ರೈತರು ತಾವು ಕಟಾವು ಮಾಡಿದ ಭತ್ತ ಸಂಗ್ರಹಣೆ ಮಾಡಲು ಸಾಧ್ಯವಾಗುತ್ತಿಲ್ಲ, ಅದು ಇಲಿ-ಹೆಗ್ಗಣಗಳ ಪಾಲಾಗುವ ಭೀತಿ ಇದೆ. ಈ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಗಳು ಮತ್ತು ಸರ್ಕಾರ ಕೂಡಲೇ ಖರೀದಿ ಕೇಂದ್ರಗಳ ಮೂಲಕ ಉತ್ತಮ ಬೆಲೆ ನೀಡಿ ಸಮಸ್ಯೆ ಬಗೆಹರಿಸಬೇಕು. ಜೊತೆಗೆ ಭತ್ತ ಕಟಾವು ಮಾಡಿದ ಸಂದರ್ಭದಲ್ಲಿಯೂ ದಲ್ಲಾಳಿಗಳ ಪಾಲಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಮಗ್ರ ಕೃಷಿಕ ರೈತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬುದ್ಧ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಯಮದೂರು ಸಿದ್ದರಾಜು, ಮೈಕ್ರೋಭಿ ಪೌಂಡೇಷನ್ ಅಧ್ಯಕ್ಷ ಕೆ.ಆರ್.ಹುಲ್ಲು ನಾಚೇಗೌಡ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಅಖಿಲ ಭಾರತೀಯ ಸಹ ಮಹಿಳಾ ಪ್ರಮುಖ್ ಬಿ.ರ್ಆ.ರಶ್ಮಿ, ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸದಾನಂದ, ಟ್ರಸ್ಟ್ ಅಧ್ಯಕ್ಷ ಜೋಗೀಗೌಡ, ಟ್ರಸ್ಟ್ನ ಸುಜಾತಮ್ಮ, ಪುಟ್ಟಮ್ಮ ಭಾಗವಹಿಸಿದ್ದರು.