ಪುರಾತನ ಅಣೆಕಟ್ಟೆ ಅಭಿವೃದ್ಧಿ ನಿರ್ಲಕ್ಷ್ಯ; ಚುನಾವಣೆ ಬಹಿಷ್ಕಾರ ಎಚ್ಚರಿಕೆ

| Published : Apr 07 2024, 01:55 AM IST

ಪುರಾತನ ಅಣೆಕಟ್ಟೆ ಅಭಿವೃದ್ಧಿ ನಿರ್ಲಕ್ಷ್ಯ; ಚುನಾವಣೆ ಬಹಿಷ್ಕಾರ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳು ಆಸಕ್ತಿವಹಿಸಿ ಅಣೆಕಟ್ಟೆಯನ್ನು ಅಭಿವೃದ್ಧಿಪಡಿಸಿದ್ದರೆ ಮಳೆಗಾಲದಲ್ಲಿ ಕಟ್ಟೆ ತುಂಬಿ ಬರಗಾಲದಲ್ಲಿ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುತ್ತಿತ್ತು. ಆದರೆ, ಅಧಿಕಾರಿಗಳು ಸಬೂಬು ಹೇಳುವ ಮೂಲಕ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸದೇ ಗ್ರಾಮಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಆನೆದೊಡ್ಡಿ ಗ್ರಾಮದ ಪುರಾತನ ಅಣೆಕಟ್ಟೆ ಅಭಿವೃದ್ಧಿಪಡಿಸುವಲ್ಲಿ ನಿರ್ಲಕ್ಷ್ಯ ಮಾಡುತ್ತಿರುವ ಕ್ರಮ ವಿರೋಧಿಸಿ ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿ ಪ್ರತಿಭಟನೆ ನಡೆಸಿದರು.

ಗ್ರಾಮದ ಆಣೆಕಟ್ಟೆ ಬಳಿ ಪ್ರತಿಭಟನೆಗೆ ಇಳಿದ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಪುರಾತನ ಅಣೆಕಟ್ಟೆ ಅಭಿವೃದ್ಧಿಪಡಿಸಲು ನರೇಗಾ ಯೋಜನೆಯಡಿ 20 ಲಕ್ಷ ರು. ಮಂಜೂರು ಮಾಡಲಾಗಿದೆ. ಆದರೆ, ಅಧಿಕಾರಿಗಳು ಕಟ್ಟೆಯ ಹೂಳು ತೆಗೆಯದೆ ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾಮದ ಮುಖಂಡ ಆನೆದೊಡ್ಡಿ ರಾಮೇಗೌಡ ಆರೋಪಿಸಿದರು.

ಅಧಿಕಾರಿಗಳು ಆಸಕ್ತಿವಹಿಸಿ ಅಣೆಕಟ್ಟೆಯನ್ನು ಅಭಿವೃದ್ಧಿಪಡಿಸಿದ್ದರೆ ಮಳೆಗಾಲದಲ್ಲಿ ಕಟ್ಟೆ ತುಂಬಿ ಬರಗಾಲದಲ್ಲಿ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುತ್ತಿತ್ತು. ಆದರೆ, ಅಧಿಕಾರಿಗಳು ಸಬೂಬು ಹೇಳುವ ಮೂಲಕ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸದೇ ಗ್ರಾಮಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಮತದಾರರು ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವ ಮೂಲಕ ಮತದಾನ ಬಹಿಷ್ಕರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಕೃಷ್ಣಪ್ಪ, ಮುಖಂಡರಾದ ಮಂಜುನಾಥ, ಮರಿಗೌಡ, ಕುಮಾರ, ಪ್ರವೀಣ, ಯೋಗಾನಂದ ಸೇರಿದಂತೆ ಹಲವರು ಭಾಗವಹಿಸಿದ್ದರು.