ಹಿಂದಿನ ಸರ್ಕಾರಗಳಿಂದ ನಾಲಾ ಆಧುನೀಕರಣ ನಿರ್ಲಕ್ಷ್ಯ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆರೋಪ

| Published : Aug 30 2024, 01:07 AM IST

ಹಿಂದಿನ ಸರ್ಕಾರಗಳಿಂದ ನಾಲಾ ಆಧುನೀಕರಣ ನಿರ್ಲಕ್ಷ್ಯ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಜೆಡಿಎಸ್-ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಲಾ ಆಧುನೀಕರಣ ಕಾಮಗಾರಿಗೆ ಹಣ ಬಿಡುಗಡೆಯನ್ನೇ ಮಾಡಿಲ್ಲ. ರಾಜಕೀಯಕ್ಕಾಗಿ ನಾನು ಸುಳ್ಳು ಹೇಳುತ್ತಿಲ್ಲ. ಬೇಕಿದ್ದರೆ ದಾಖಲೆಗಳನ್ನು ತೆಗೆದುನೋಡಲಿ. ಮುಖ್ಯನಾಲೆಯ ಲೈನಿಂಗ್ ಕಾಮಗಾರಿಯನ್ನೇ ಸರಿಯಾಗಿ ಮಾಡಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶ್ವೇಶ್ವರಯ್ಯ ಮುಖ್ಯ ನಾಲೆ ಸೇರಿದಂತೆ ವಿತರಣಾ ನಾಲೆಗಳ ಆಧುನೀಕರಣಕ್ಕೆ ಹಿಂದಿನ ಸರ್ಕಾರಗಳು ಸಮರ್ಪಕವಾಗಿ ಹಣ ಬಿಡುಗಡೆ ಮಾಡದಿರುವುದೇ ಕೊನೆಯ ಭಾಗಕ್ಕೆ ನೀರು ತಲುಪದಿರುವುದಕ್ಕೆ ಮುಖ್ಯ ಕಾರಣ ಎಂದು ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆರೋಪಿಸಿದರು.

ಗುರುವಾರ ಅವರು ತಾಲೂಕಿನ ವಿವಿಧೆಡೆ ನಾಲೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣದ ವೀಕ್ಷಣೆ ನಡೆಸಿ ಮಾತನಾಡಿ, ನಾಲೆ ನಿರ್ಮಾಣವಾದ ಸಮಯದಿಂದ ಇಲ್ಲಿಯವರೆಗೆ ವಿತರಣಾ ನಾಲೆಗಳ ಲೈನಿಂಗ್ ಕಾಮಗಾರಿ ನಡೆದಿಲ್ಲ. ತೂಬುಗಳ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ. ಮುಖ್ಯ ನಾಲೆ ಸೇರಿದಂತೆ ವಿತರಣಾ ನಾಲೆಗಳ ಲೈನಿಂಗ್ ಕಿತ್ತುಹೋಗಿವೆ. ಇದರ ಪರಿಣಾಮವಾಗಿ ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಿ, ನೂರಾರು ಟಿಎಂಸಿ ನೀರು ತಮಿಳುನಾಡಿಗೆ ಹರಿದರೂ ಮದ್ದೂರು, ಮಳವಳ್ಳಿ ಕೊನೆಯ ಭಾಗಕ್ಕೆ ನೀರು ಹರಿಸಿಕೊಳ್ಳಲಾರದಂತಹ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದು ಬೇಸರದಿಂದ ನುಡಿದರು.

ದಾಖಲೆಗಳನ್ನು ತೆಗೆದುನೋಡಲಿ:

ಹಿಂದಿನ ಜೆಡಿಎಸ್-ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಲಾ ಆಧುನೀಕರಣ ಕಾಮಗಾರಿಗೆ ಹಣ ಬಿಡುಗಡೆಯನ್ನೇ ಮಾಡಿಲ್ಲ. ರಾಜಕೀಯಕ್ಕಾಗಿ ನಾನು ಸುಳ್ಳು ಹೇಳುತ್ತಿಲ್ಲ. ಬೇಕಿದ್ದರೆ ದಾಖಲೆಗಳನ್ನು ತೆಗೆದುನೋಡಲಿ. ಮುಖ್ಯನಾಲೆಯ ಲೈನಿಂಗ್ ಕಾಮಗಾರಿಯನ್ನೇ ಸರಿಯಾಗಿ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಕಳೆದ ಬರಗಾಲದ ಸಮಯದಲ್ಲೂ ಕೊನೆಯ ಭಾಗದ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ೪೦ ಕಿ.ಮೀ. ಉದ್ದದವರೆಗೆ ಮುಖ್ಯ ನಾಲಾ ಲೈನಿಂಗ್ ಕಾಮಗಾರಿ ನಡೆಸಿದ್ದೇವೆ. ಎಲ್ಲಾ ನಾಲೆಗಳನ್ನೂ ಒಂದೇ ಬಾರಿಗೆ ಆಧುನೀಕರಣ ಮಾಡಲಾಗುವುದಿಲ್ಲ ಎಂದರು.

ಸಮಯಕ್ಕೆ ಸರಿಯಾಗಿ ಮುಖ್ಯನಾಲೆ, ವಿತರಣಾ ನಾಲೆ, ಉಪನಾಲೆ, ಕಿರುನಾಲೆಗಳ ಲೈನಿಂಗ್ ಕಾಮಗಾರಿಯನ್ನು ನಡೆಸಿಕೊಂಡು ಬಂದಿದ್ದರೆ ರೈತರು ನೀರಿಗೆ ಪರದಾಡಬೇಕಾದ ಅವಶ್ಯಕತೆಯೇ ಇರಲಿಲ್ಲ. ನಾಲೆಗಳ ಆಧುನೀಕರಣವನ್ನು ಕಡೆಗಣಿಸಿದ್ದರಿಂದಲೇ ಇಂದು ಭತ್ತದ ಒಟ್ಲು ಹಾಕುವುದಕ್ಕೂ ನೀರಿಲ್ಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದರು.

ನೀರು ನಿರ್ವಹಣೆಯಲ್ಲಿ ಮಾರ್ಪಾಡು ಅಗತ್ಯ:

ಮದ್ದೂರು ಮತ್ತು ಮಳವಳ್ಳಿ ಕೊನೆಯ ಭಾಗಕ್ಕೆ ನೀರು ತಲುಪಬೇಕಾದರೆ ನೀರು ನಿರ್ವಹಣೆಯಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದರು.

ರಾಜಕೀಯ ಒತ್ತಡಗಳು ಏನೇ ಇದ್ದರೂ ಎಲ್ಲಾ ಭಾಗದ ರೈತರನ್ನು ಗಮನದಲ್ಲಿಟ್ಟುಕೊಂಡು ನೀರು ಹಂಚಿಕೆ ಹೇಗೆ ಮಾಡಬಹುದನ್ನು ನಿರ್ಧರಿಸಿ ಅದರಂತೆ ನೀರು ಪೂರೈಕೆ ಮಾಡಬೇಕು. ಎಲ್ಲಾ ಕಡೆಗೂ ಒಂದೇ ಬಾರಿಗೆ ನೀರು ಹರಿಸುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಆನ್ ಅಂಡ್ ಆಫ್ ಸಿಸ್ಟಮ್‌ನಲ್ಲಿ ನೀರು ಸರಬರಾಜು ಮಾಡುವುದಕ್ಕೆ ಅಧಿಕಾರಿಗಳು ಮುಂದಾಗುವುದರೊಂದಿಗೆ ಮಾರ್ಪಾಡು ಮಾಡಿಕೊಳ್ಳುವಂತೆ ತಿಳಿಸಿದರು.

ವಿಶ್ವೇಶ್ವರಯ್ಯ ನಾಲೆಯಲ್ಲಿ ೨೫೦೦ ಕ್ಯುಸೆಕ್ ನೀರು ಹರಿಸುವುದಕ್ಕೆ ಮಾತ್ರ ಅವಕಾಶವಿದೆ. ಹುಲಿಕೆರೆ ಸುರಂಗದೊಳಗೆ ಅಷ್ಟು ಪ್ರಮಾಣದ ನೀರು ಹರಿಯದಿರುವುದು ಕೊನೆಯ ಭಾಗವನ್ನು ತಲುಪದಿರುವುದಕ್ಕೆ ಮತ್ತೊಂದು ಕಾರಣವಾಗಿದೆ. ಮೇಲ್ಭಾಗದ ರೈತರು ನೀರನ್ನು ಅತಿಯಾಗಿ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ನೀರು ಬಳಕೆಯಲ್ಲಿ ಮೇಲ್ಭಾಗದ ರೈತರು ಕೆಳಭಾಗದ ರೈತರಿಗೂ ನೀರು ದೊರಕುವುದಕ್ಕೆ ಸಹಕರಿಸಬೇಕು. ಎಲ್ಲಾ ರೈತರು ಸಮಾನರೇ. ಹಾಗಾಗಿ ನೀರು ಹಂಚಿಕೆಯಲ್ಲಿ ಒಬ್ಬರಿಗೊಬ್ಬರು ಸಹಕಾರಿಯಾಗಿ ನಿಲ್ಲುವಂತೆ ಮನವಿ ಮಾಡಿದರು.

ಅಣೆಕಟ್ಟು ಭರ್ತಿಯಾದರೂ ಕೊನೆ ಭಾಗಕ್ಕೆ ನೀರಿಲ್ಲ:

ಈ ಬಾರಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಕೆರೆಗಳು ಭರ್ತಿಯಾಗಿಲ್ಲ. ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಿದ್ದರೂ ಹೆಬ್ಬಕವಾಡಿ ಸುತ್ತುಕಟ್ಟೆಯನ್ನು ತಲುಪಬೇಕಾದ ಪ್ರಮಾಣದಷ್ಟು ನೀರು ತಲುಪದೆ ಮಳವಳ್ಳಿ ತಾಲೂಕಿಗೆ ನೀರು ಸಿಗದೆ ಜನರು ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ನೀರಿಗೆ ಸಾಕಷ್ಟು ಸಮಸ್ಯೆಗಳಿರುವುದರಿಂದ ನೀರು ನಿರ್ವಹಣೆಗೆ ಮಾಪಾಡು ತರುವ ಅವಶ್ಯಕತೆ ಇದೆ ಎಂದರು.

ವಿಶ್ವೇಶ್ವರಯ್ಯ ಮುಖ್ಯನಾಲೆ, ಲೋಕ ಪಾವನಿ, ಹುಲಿಕೆರೆ ಟನಲ್ ಮತ್ತು ಲಿಂಕ್ ಕೆನಲ್ ಗಳಿಗೆ ಮಳವಳ್ಳಿ ಶಾಸಕ ಪಿಎಂ ನರೇಂದ್ರಸ್ವಾಮಿ ಭೇಟಿ ನೀಡಿ ನಾಲೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣವನ್ನು ವೀಕ್ಷಿಸಿದರು

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಮುಖ್ಯ ಎಂಜಿನಿಯರ್ ವೆಂಕಟೇಶ, ಇಇ ಗಳಾದ ಜಯಂತ್, ನಂಜುಂಡೇಗೌಡ, ವಾಸುದೇವ, ಬಾಬು ಕೃಷ್ಣದೇವ್, ಇತರರಿದ್ದರು.