ಹಾನಗಲ್ಲ: ಹಾನಗಲ್ಲ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಬಿಸಿಯೂಟದ ಸಿದ್ಧತೆಯಲ್ಲಿ ಬಹುತೇಕ ಶಾಲೆಗಳಲ್ಲಿ ನಿರ್ಲಕ್ಷ್ಯ ಹಾಗೂ ಸ್ವಚ್ಛತೆಯ ವಿಷಯದಲ್ಲಿ ಅನಾದರ ತೋರುತ್ತಿರುವುದನ್ನು ಕೂಡಲೇ ಸರಿಪಡಿಸಿಕೊಂಡು, ಮಕ್ಕಳಿಗೆ ಉತ್ತಮ ಗುಣಮಟ್ಟದ ಊಟ ಹಾಗೂ ಶಾಲಾ ಆವರಣದಲ್ಲಿ ಉತ್ತಮ ಪರಿಸರ ಒದಗಿಸಬೇಕು ಎಂದು ಹಾನಗಲ್ಲ ತಹಸೀಲ್ದಾರ್‌ ವಿಠ್ಠಲ ಚೌಗುಲಾ ಅವರು ಎಚ್ಚರಿಕೆ ನೀಡಿದರು.

ಬುಧವಾರ ಸುದ್ದಿಗಾರರಿಗೆ ವಿವರ ನೀಡಿದ ಅವರು, ಹಾನಗಲ್ಲ ತಾಲೂಕಿನ ೨೦ಕ್ಕೂ ಅಧಿಕ ಶಾಲೆಗಳಿಗೆ ಹಾಗೂ ಸರ್ಕಾರಿ ವಸತಿ ನಿಲಯಗಳಿಗೆ ಭೇಟಿ ನೀಡಲಾಗಿದೆ. ಅಲ್ಲಿನ ಬಿಸಿಯೂಟ, ಶೌಚಾಲಯ ಮತ್ತು ಪರಿಸರವನ್ನು ಶುಚಿಯಾಗಿಡುವಲ್ಲಿ ಸಂಬಂಧಿಸಿದ ಸಿಬ್ಬಂದಿ ಕಾಳಜಿವಹಿಸುತ್ತಿಲ್ಲ. ಪಾಕಶಾಲೆ ಶುದ್ಧತೆ ಇಲ್ಲದಿರುವುದು, ಆಹಾರದ ಗುಣಮಟ್ಟದ ನ್ಯೂನತೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಆಹಾರ ಸಾಮಗ್ರಿಗಳ ಸ್ವಚ್ಛ ನಿರ್ವಹಣೆ ಇಲ್ಲ, ತಯಾರಿಸಿದ ಆಹಾರವನ್ನು ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡಿರುವುದಿಲ್ಲ, ಅಡುಗೆ ಪಾತ್ರೆಗಳನ್ನು ಸ್ವಚ್ಛವಾಗಿಟ್ಟಿಲ್ಲ. ಶೌಚಾಲಯಕ್ಕೆ ನೀರಿನ ವ್ಯವಸ್ಥೆಯೂ ಇಲ್ಲ. ಇಂತಹ ಹಲವು ಅವ್ಯವಸ್ಥೆಗಳು ತಾಲೂಕಿನ ವಿವಿಧ ಶಾಲೆಗಳೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡು ಬಂದಿದೆ. ಕೆಲವು ಶಾಲೆಗಳು ಉತ್ತಮ ನಿರ್ವಹಣೆ ಮಾಡುತ್ತಿರುವುದು ಕೂಡ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಎಲ್ಲೆಲ್ಲಿ ಇಂತಹ ಕೊರತೆಗಳಿವೆಯೋ ಅವೆಲ್ಲವನ್ನು ಕೂಡಲೇ ಸರಿಪಡಿಸಿಕೊಂಡು ವಿದ್ಯಾರ್ಥಿಗಳ ಹಿತಾಸಕ್ತಿ ಪರಿಗಣಿಸಿ, ಕಾಳಜಿ ವಹಿಸಬೇಕು. ತಪ್ಪಿದಲ್ಲಿ ಕ್ರಮಕ್ಕಾಗಿ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಲಾಗುವುದು. ಕೆಲವು ಶಾಲೆಗಳು ಉತ್ತಮ ನಿರ್ವಹಣೆ ಮಾಡಿವೆ. ಸರಿಯಾದ ನಿರ್ವಹಣೆ ಮಾಡದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚನೆ ಸಹ ನೀಡಲಾಗಿದೆ ಎಂದು ತಹಸೀಲ್ದಾರ ವಿಠ್ಠಲ್ ಚೌಗುಲಾ ಅವರು ತಿಳಿಸಿದರು.